ಚಿಕ್ಕಮಗಳೂರು

ಬಸರೀಕಟ್ಟೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆ

Published On :

ಕೊಪ್ಪ:  ತಾಲೂಕಿನ ಬಸರೀಕಟ್ಟೆ ಸಿಂಡಿಕೇಟ್ ಬ್ಯಾಂಕಿನಲ್ಲಿ ಬುಧವಾರ ಗ್ರಾಹಕರ ಸಭೆ ನಡೆಯಿತು.
ಬ್ಯಾಂಕ್ ವ್ಯವಸ್ಥಾಪಕ ಸಂತೋಷ್ ಮಾತನಾಡಿ, ಬ್ಯಾಂಕ್ ಕಳೆದ ಬಾರಿಗಿಂತ ಈ ವರ್ಷ ಲಾಭಾಂಶದಲ್ಲಿ ಮೂಂಚೂಣಿಯಲ್ಲಿ ಇದೆ. ಅಧಿಕ ಕೃಷಿ ಸಾಲಗಳಿಗೆ ಮನ್ನಣೆ ನೀಡಿದೆ. ಅನುತ್ಪಾದಕ ಸಾಲ ಹೊರೆಯನ್ನು ಹೊತ್ತಿದ್ದು, ತಾಂತ್ರಿಕವಾಗಿ ಇನ್ನೂ ಹೆಚ್ಚಿನೆ ಪ್ರಗತಿ ಗುರಿ ಹೊಂದಿದೆ ಎಂದರು.
ದೇಶದ ಅತ್ಯುತ್ತಮ ಬ್ಯಾಂಕ್ ಎಂದು ಸಿಂಡಿಕೇಟ್ ಬ್ಯಾಂಕ್ ಗುರುತಿಸಲಾಗಿದೆ. ಸರ್ಕಾರದ ಸಾಲ ಮನ್ನಾ ಭರವಸೆಯಲ್ಲಿ ಕೃಷಿ ಉದ್ದೇಶಿತ ಸಾಲದ ಮರುಪಾವತಿ ಹಿನ್ನೆಡೆಯಾಗಿದೆ. ವಸೂಲಾತಿಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿರುವುದರಿಂದ ಸಿಬ್ಬಂದಿ ಕೊರತೆ ನಡುವೆ ಗ್ರಾಹಕರಿಗೆ ಹೆಚ್ಚಿನ ಸೇವೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಗ್ರಾಹಕ ರಾಮಯ್ಯ ಕೆ. ಮಾತನಾಡಿ, ತುಂಬಾ ವರ್ಷಗಳಿಂದ ಗ್ರಾಹಕರಿಗೆ ಈ ಶಾಖೆ ಉತ್ತಮ ಸೇವೆ ಒದಗಿಸುತ್ತಿದೆ. ಸಿಬ್ಬಂದಿ ನೇಮಕ್ಕೆ ಬ್ಯಾಂಕ್ ಅಧಿಕಾರಿಗಳು ಗಮನಹರಿಸಬೇಕೆಂದರು ಹೇಳಿದರು.
ಉಪವ್ಯವಸ್ಥಾಪಕ ಅರುಣ್ ಕುಮಾರ್, ಸಿಬ್ಬಂದಿಗಳಾದ ಸಂದೀಪ್‌ಕುಮಾರ್ ಮತ್ತು ನಾರಾಯಣ್ ಉಪಸ್ಥಿತರಿದ್ದರು.
ಬಡಾವಣೆಗೆ ನಾಮಫಲಕ ಅಳವಡಿಕೆಗೆ ಆಗ್ರಹ
ಬೀರೂರು: ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಲು ರಸ್ತೆ ಸಂಪರ್ಕ ಕಲ್ಪಿಸಿದ್ದು, ಸಂಪರ್ಕ ರಸ್ತೆಯಲ್ಲಿ ನಾಮಫಲಕವಿಲ್ಲದೆ ಜನತೆ ತೊಂದರೆ ಅನುಭವಿಸುವಂತಾಗಿದೆ.
ಸುಮಾರು 28 ಸಾವಿರ ಜನಸಂಖ್ಯೆ ಹಾಗೂ ರೇಲ್ವೆ ಜಂಕ್ಷನ್ ಹೊಂದಿರುವ ಬೀರೂರು, ಕಡೂರು ತಾಲೂಕಿನ ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾಗಿದೆ. ಪಟ್ಟಣದಲ್ಲಿ ಹತ್ತಾರು ಬಡಾವಣೆಗಳು ವೃತ್ತ ಹಾಗೂ ಅಡ್ಡರಸ್ತೆಗಳಿವೆ. ಆದರೆ, ರಸ್ತೆಗಳಿಗೆ ನಾಮಫಲಕ ಅಳವಡಿಸದಿರುವುದರಿಂದ ಬೇರೆ ಊರುಗಳಿಂದ ತಮ್ಮ ಬಂಧು- ಬಾಂಧವರನ್ನು ಭೇಟಿ ಮಾಡಲು ಆಗಮಿಸುವ ಜನರಿಗೆ ಹಾಗೂ ಅಂಚೆ ವಿತರಕರಿಗೆ ತೀವ್ರ ತೊಂದರೆಯಾಗಿದ್ದು, ಬಡಾವಣೆಗೆ ತೆರಳಲು ಮಾಹಿತಿ ಪಡೆಯಲು ಪರದಾಡುವಂತಾಗಿದೆ.
ಪಟ್ಟಣದ ವಿವಿಧ ಬಡಾವಣೆಗಳಾದ ಮಾರ್ಗದ ಕ್ಯಾಂಪ್, ಉಪ್ಪಾರ ಕ್ಯಾಂಪ್, ಬಳ್ಳಾರಿ ಕ್ಯಾಂಪ್, ಹೊಸಳಮ್ಮನ ಬಡಾವಣೆ, ಹಳೇಪೇಟೆ, ಇಂದಿರಾನಗರ, ನೆಹರೂ ನಗರ, ಹೆಳವರ ಬೀದಿ, ರೇಲ್ವೆ ಕಾಲೋನಿ, ಭಗವತ್ ನಗರ, ರಾಜಾಜಿನಗರ, ವಿವೇಕಾನಂದ ನಗರ ಸೇರಿದಂತೆ ಬಡಾವಣೆ ಸಂಪರ್ಕ ರಸ್ತೆಯಲ್ಲಿ ನಾಮಫಲಕವಿಲ್ಲದೆ ಜನರು ತೊಂದರೆ ಅನುಭವಿಸುವಂತಾಗಿದೆ.
ಪ್ರಯೋಜನವಾಗಿಲ್ಲ: ರಸ್ತೆಗಳಿಗೆ ನಾಮಫಲಕ ಅಳಡಿಸಿ ಅನುಕೂಲ ಮಾಡಿಕೊಡಬೇಕೆಂದು ಪುರಸಭಾ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಪುರಸಭಾ ಆಡಳಿತ ಕಾರ್ಯವೈಖರಿ ಬಗ್ಗೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪುರಸಭೆ ಆಡಳಿತ ಈಗಲಾದರೂ ಇತ್ತ ಕಡೇ ಗಮನಹರಿಸಿ ಕೂಡಲೇ ನಾಮಫಲಕ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ತನಿಕೋಡು ಶೂಟೌಟ್ ಪ್ರಕರಣ: ಮ್ಯಾಜಿಸ್ಟ್ರೀಯಲ್ ವಿಚಾರಣೆ ಇಂದು
ಚಿಕ್ಕಮಗಳೂರು: ಶೃಂಗೇರಿಯ ತನಿಕೋಡಿನ ಅರಣ್ಯ ತಪಾಸಣಾ ಕೇಂದ್ರದ ಬಳಿ ಏಪ್ರಿಲ್ ತಿಂಗಳಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಂತದ ಮ್ಯಾಜಿಸ್ಟ್ರೀಯಲ್ ವಿಚಾರಣೆ ಗುರುವಾರ ನಡೆಯಲಿದೆ.
ಶೃಂಗೇರಿಯ ತಾಲೂಕು ಕಚೇರಿ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ವಿಚಾರಣೆ ನಡೆಸಲಿದ್ದಾರೆ.
ರಾತ್ರಿ ವೇಳೆಯಲ್ಲಿ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ತನಿಕೋಡು ಬಳಿ ಎ.ಎನ್.ಎಫ್. ಪೇದೆ ನವೀನ್ ನಾಯ್ಕ್ ಹಾರಿಸಿದ್ದ ಗುಂಡಿಗೆ ಕಬೀರ್ ಎಂಬುವವನು ಮೃತಪಟ್ಟಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಸಿಐಡಿ ಹಾಗೂ ಮ್ಯಾಜಿಸ್ಟ್ರೀಯಲ್ ವಿಚಾರಣೆಗೆ ಆದೇಶಿಸಿದ್ದು, ಈ ಸಂಬಂಧ ಸಿಐಡಿ ತನಿಖೆ ನಡೆದಿದೆ.
ಮ್ಯಾಜಿಸ್ಟ್ರೀಯಲ್ ವಿಚಾರಣೆ ನಡೆಸಲು ಜಿಲ್ಲಾಧಿಕಾರಿಯವರನ್ನು ಸರ್ಕಾರ ನೇಮಕ ಮಾಡಿದ್ದು, ವಿಚಾರಣೆ ನಡೆಸಿ 45 ದಿನಗಳೊಳಗೆ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದ ಮೇರೆಗೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಈಗಾಗಲೇ ಮೊದಲನೇ ಹಂತದ ವಿಚಾರಣೆಯನ್ನು ನಡೆಸಿದ್ದಾರೆ. ಗುರುವಾರದಂದು ಎರಡನೇ ಹಂತದಲ್ಲಿ ವಿಚಾರಣೆಯನ್ನು ನಡೆಸಲಿದ್ದಾರೆ.  ಈ ಸಂದರ್ಭದಲ್ಲಿ ಮೃತ ಕಬೀರ್ ಕುಟುಂಬ, ಈ ಘಟನೆಯ ಪ್ರತ್ಯಕ್ಷ ಸಾಕ್ಷಿಗಳು, ತನಿಖಾ ಪೊಲೀಸ್ ಅಧಿಕಾರಿಗಳು ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಸಂಭ್ರಮದ ದುರ್ಗಾ ಮಂಡಲ ಪೂಜೆ
ನರಸಿಂಹರಾಜಪುರಛ ಇಲ್ಲಿನ ಹಳೇ ಪೇಟೆಯಲ್ಲಿರುವ ಗುತ್ಯಮ್ಮ ದೇವಿ ದೇವಸ್ಥಾನದಲ್ಲಿ ಗುತ್ಯಮ್ಮ ದುರ್ಗಾ ಪರಮೇಶ್ವರಿ ಟ್ರಸ್ಟ್ ಆಶ್ರಯದಲ್ಲಿ ಮಂಡಲ ಪೂಜೆ ನಡೆಯಿತು.
ಕೊಪ್ಪ ತಾಲೂಕಿನ ಕರ್ಕಿ ರಮಾನಂದಭಟ್ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವತೆಗಳಿಗೆ ಕಲಾ ಹೋಮ, ನವಕಲಷಾಭಿಷೇಕ, ನಾಗನಿಗೆ ಪವಮಾನ ಅಭಿಷೇಕ ನಡೆಯಿತು. ಪೂಜಾ ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಗುತ್ಯಮ್ಮ ದುರ್ಗಾ ಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ಪಿ.ಆರ್. ಸದಾಶಿವ, ಕಾರ್ಯದರ್ಶಿ ಎಚ್.ಎನ್. ರವಿಶಂಕರ್ ಹಾಗೂ ಕಾರ್ಯರ್ಕಾರಿ ಸಮಿತಿ ಸದಸ್ಯರು, ಭಕ್ತರು ಭಾಗವಹಿಸಿದ್ದರು.
ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ
ತರೀಕೆರೆ: ಶಾಲೆ ಪ್ರಾರಂಭದ ದಿನವೇ ಎಲ್ಲರ ಕೈಯಲ್ಲಿ ಪಠ್ಯಪುಸ್ತಕಗಳು ಇರುತ್ತವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಹ ನಿರ್ದೇಶಕ ಜಯಕುಮಾರ್ ತಿಳಿಸಿದ್ದಾರೆ.
ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ವತಿಯಿಂದ 2014-15ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ, ಪೋಷಕರೇ ನಿಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಸೇರಿಸಿ, ಭವಿಷ್ಯ ರೂಪಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆ ಬಿಟ್ಟ ಮಕ್ಕಳು 275: ತಾಲೂಕಿಗೆ ಈಗಾಗಲೇ ಶೇ. 99 ಪಠ್ಯ ಪುಸ್ತಕಗಳು ಬಂದಿವೆ. ಶಾಲೆ ಮುಖ್ಯೋಪಾಧ್ಯಾಯರು ಸಹಕರಿಸಬೇಕು, 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳನ್ನೂ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು ಎಂಬುದು ಸರ್ಕಾರದ ಇಚ್ಚೆಯಾಗಿದೆ, ತಾಲೂಕಿನಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 275 ಇದ್ದು ಅವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಉಪನಿರ್ದೇಶಕ ರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್, ಸಮನ್ವಯಾಧಿಕಾರಿ ತಿಮ್ಮಯ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಪ್ರಾಢಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಟ್ಟಣದಲ್ಲಿ ವಿಶೇಷ ದಾಖಲಾತಿ ಆಂದೋಲನ ಜಾತ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.