ಜೂನ್ ಅಂತ್ಯದೊಳಗೆ ವರದಿ ಸಲ್ಲಿಕೆ
ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಮೇ 29
ಶೃಂಗೇರಿಯ ತನಿಕೋಡು ಅರಣ್ಯ ಮಾಹಿತಿ ಕೇಂದ್ರದ ಬಳಿ ಕಬೀರ್ ಶೂಟೌಟ್ನಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಗುರುವಾರದಂದು ಎರಡನೇ ಹಂತದಲ್ಲಿ ಮ್ಯಾಜಿಸ್ಟ್ರೀಯಲ್ ವಿಚಾರಣೆ ನಡೆಸಿದರು.
ಶೃಂಗೇರಿಯ ತಾಲೂಕು ಕಚೇರಿಯಲ್ಲಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿದರು.
ಈ ವಿಚಾರಣೆಯಲ್ಲಿ ಕಬೀರ್ ಅವರ ಮೂರು ಮಂದಿ ಸಂಬಂಧಿಕರು, ಅರಣ್ಯ ಇಲಾಖೆ, ಎಎನ್ಎಫ್ ಹಾಗೂ ತನಿಕೋಡು ಅರಣ್ಯ ಮಾಹಿತಿ ಕೇಂದ್ರದ ಸಮೀಪದಲ್ಲಿರುವ ಟೀ ಅಂಗಡಿಯ ಮಾಲೀಕರಾದ ಪ್ರಭಾಕರ್ ಭಟ್ ಅವರನ್ನು ವಿಚಾರಣೆ ನಡೆಸಲಾಯಿತು.
ಶೃಂಗೇರಿ ಸಮೀಪದ ತನಿಕೋಡು ಅರಣ್ಯ ಮಾಹಿತಿ ಕೇಂದ್ರದ ಬಳಿ ಏಪ್ರಿಲ್ 19 ರಂದು ಜಾನುವಾರುಗಳನ್ನು ಸಾಗಿಸುತ್ತಿದ್ದವರ ಮೇಲೆ ಎಎನ್ಎಫ್ ಪೇದೆ ನವೀನ್ ನಾಯ್ಕ್ ಅವರು ಹಾರಿಸಿದ ಗುಂಡಿಗೆ ಸುರತ್ಕಲ್ ನಿವಾಸಿ ಕಬೀರ್ ಎಂಬವರು ಮೃತಪಟ್ಟಿದ್ದರು. ಈ ಪ್ರಕರಣ ವಿವಾದಕ್ಕೆ ಕಾರಣವಾಗಿದ್ದು, ಇದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಈಗಾಗಲೇ ಸಿಐಡಿ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ.
ಇದರ ಜತೆಗೆ ರಾಜ್ಯ ಸರ್ಕಾರ ಮ್ಯಾಜಿಸ್ಟ್ರೀಯಲ್ ವಿಚಾರಣೆ ನಡೆಸುವಂತೆ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರಿಗೆ ಆದೇಶ ನೀಡಿತ್ತು. ತನಿಖೆ ನಡೆಸಿ 45 ದಿನಗಳೊಳಗೆ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿತ್ತು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಹಾಗೂ ಚುನಾವಣಾ ಕರ್ತವ್ಯದಲ್ಲಿ ಜಿಲ್ಲಾಧಿಕಾರಿಗಳು ಬಿಜಿಯಾಗಿದ್ದರು. ಹಾಗಿದ್ದರೂ ಅವರು ಮೇ 13 ರಂದು ಮೊದಲನೇ ಹಂತದಲ್ಲಿ ವಿಚಾರಣೆ ನಡೆಸಿದ್ದರು. ಗುರುವಾರದಂದು ಎರಡನೇ ಹಂತದ ವಿಚಾರಣೆ ನಡೆಸಿದ್ದಾರೆ.
3ನೇ ಹಂತದ ವಿಚಾರಣೆ: ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಕಬೀರ್ ಸಂಬಂಧಿಕರಿಗೆ ಹಾಗೂ ವಿವಿಧ ಇಲಾಖೆಗಳು ಹಾಗೂ ವೈದ್ಯಾಧಿಕಾರಿಗಳಿಗೆ ಅವಕಾಶ ನೀಡುವ ಉದ್ದೇಶದಿಂದಾಗಿ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಮೂರನೇ ಹಂತದ ವಿಚಾರಣೆಯನ್ನು ಜಿಲ್ಲಾಧಿಕಾರಿಗಳು ನಡೆಸಲಿದ್ದಾರೆ. ಈವರೆಗೆ ನಡೆದಿರುವ ಎರಡು ವಿಚಾರಣೆಗಳಲ್ಲಿ ಎಎನ್ಎಫ್ ಪೇದೆ ನವೀನ್ ನಾಯ್ಕ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿರಲಿಲ್ಲ. ಕಾರಣ ಅವರು ಈ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದರು.
ಇದೀಗ ಅವರಿಗೆ ಜಾಮೀನು ಸಿಕ್ಕಿದ್ದು, ಅವರನ್ನು ಮೂರನೇ ಹಂತದ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳಾದ ಬಿ.ಎಸ್. ಶೇಖರಪ್ಪ ಸೂಚನೆ ನೀಡುವ ಸಾಧ್ಯತೆ ಇದೆ.
ಈಗಾಗಲೇ 2 ಬಾರಿ ವಿಚಾರಣೆ
ತನಿಕೋಡು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ವಿಚಾರಣೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬೀರ್ ಸಂಬಂಧಿಕರ, ಅರಣ್ಯ ಇಲಾಖೆ, ಎಎನ್ಎಫ್ ಹಾಗೂ ಪೊಲೀಸ್ ಇಲಾಖೆಯ ತನಿಖಾಧಿಕಾರಿಗಳು ಮತ್ತು ಸಾರ್ವಜನಿಕರಿಂದ ಹೇಳಿಕೆ ಪಡೆಯಲಾಗಿದೆ. ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಮೂರನೇ ಹಂತದ ವಿಚಾರಣೆ ನಡೆಸಿ, ಕ್ರೊಢೀಕೃತ ವರದಿಯನ್ನು ಜೂನ್ ಅಂತ್ಯದ ವೇಳೆಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

