ಚಿತ್ರದುರ್ಗ

ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಿ

Published On :

ನರಸಿಂಹರಾಜಪುರ: ಮಾತೃಭಾಷೆಯಿಂದ ಕಲಿತ ವಿದ್ಯೆಯೇ ನಿಜವಾದ ವಿದ್ಯೆ ಎಂದು 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಎಂ. ಜಯಮ್ಮ ಹೇಳಿದರು.
 ಶನಿವಾರ ಟಿ.ಎಸ್. ರಾಮಚಂದ್ರರಾವ್ ವೇದಿಕೆಯಲ್ಲಿ ನಡೆದ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳಾಧ್ಯಕ್ಷರ ಭಾಷಣ ಮಾಡಿ, 5 ನೇ ತರಗತಿಯವರೆಗೆ ಮಕ್ಕಳು ಕನ್ನಡ ಭಾಷೆಯಲ್ಲೇ ಕಲಿತರೆ ವಿಷಯ ಜ್ಞಾನ ಹೆಚ್ಚಾಗಿ ಅನುಭವ ವಿಸ್ತಾರಗೊಳ್ಳುತ್ತದೆ.
 ಶಿಕ್ಷಣಕ್ಕೆ ಭದ್ರ ಬುನಾದಿ ಹಾಕುವುವರೇ ಮಾತೃ ಭಾಷಾ ಶಿಕ್ಷಕರು. ತಮಗೆ ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕನ್ನಡ ಮಾಧ್ಯಮದ ಮಕ್ಕಳಲ್ಲಿ ಆಸಕ್ತಿ ಬರುವಂತೆ ಪ್ರೇರಿಪಿಸಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಸಮಾನ ಪಠ್ಯ ಶಿಕ್ಷಣ ಜಾರಿಗೆ ತರಬೇಕು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮವೇ ಇರುವಂತೆ ಕಟ್ಟು ನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಂಘಟಿತರಾಗಿ: ಜಾಹಿರಾತುಗಳಲ್ಲಿ ಮಹಿಳೆಯರನ್ನು ಚಿತ್ರಿಸುವ ರೀತಿಯನ್ನು ತರಾಟೆಗೆ ತೆಗೆದುಕೊಂಡ ಸಮ್ಮೇಳನಾಧ್ಯಕ್ಷರು, ಮುದ್ರಣ ಮಾಧ್ಯಮದಿಂದ ಹಿಡಿದು ವಿದ್ಯುನ್ಮಾನ ಮಾಧ್ಯಮದವರೆಗೆ ಮಹಿಳೆಯರನ್ನು ಚಿತ್ರಿಸುವ ರೀತಿ ಸರಿಯಿಲ್ಲ. ಮಹಿಳೆಯರು ಸಂಘಟಿತರಾಗಿ ಇದನ್ನು ಪ್ರತಿಭಟಿಸಬೇಕು ಎಂದು ಅವರು ಸಲಹೆ ನೀಡಿದರು.
 ಸಿನಿಮಾ, ಟಿವಿ ಧಾರವಾಹಿಗಳಲ್ಲಿ ತಮ್ಮ ಹೊಟ್ಟೆ ಪಾಡಿಗಾಗಿ ನಿರ್ದೇಶಕರು ಹೇಳಿದಂತೆ ಕಲಾವಿದರು ಉಡುಪು ಧರಿಸಿದರೂ ಉಳಿದ ದಿನಗಳಲ್ಲಿ ಅವರ ಉಡುಪು ಸಹಜವಾಗಿರುತ್ತದೆ. ಆದರೆ, ಹೆಣ್ಣು ಮಕ್ಕಳು ಪ್ರಚೋದನಾತ್ಮಕ ಉಡುಪುಗಳನ್ನು ಅನುಸರಿಸಲು ಹೋಗುತ್ತಾರೆ. ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಪೂರ್ಣ ಶಾಸ್ತ್ರೀಯ ಸ್ಥಾನ ಮಾನ ಕೊಡಿ: ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ 8 ಜ್ಞಾನ ಪೀಠ ಬಂದಿರುವುದು ಕನ್ನಡ ಭಾಷೆಗೆ ಮಾತ್ರ. ಆದರೂ ಕನ್ನಡ ಭಾಷೆಗೆ ಸಂಪೂರ್ಣ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿಲ್ಲ ಎಂಬುದು ನೋವು ಇನ್ನೂ ಉಳಿದಿದೆ. ಕನ್ನಡ ಭಾಷೆಯನ್ನು ಬೇರೆ ಭಾಷೆಗಳು ತುಳಿಯುವುದು ಸಾದ್ಯವಿಲ್ಲ. ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದಾಗಲೂ ಕನ್ನಡ ಭಾಷೆ ಉಳಿದಿತ್ತು. ಕನ್ನಡ ಹೃದಯದಿಂದ ಬಂದ ಭಾಷೆಯಾಗಿದೆ ಎಂದರು.
 ರಾಜ್ಯದಲ್ಲಿ ಏಕ ರೂಪ ಶಿಕ್ಷಣ ನೀಡಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಈ ವಿಷಯ ಈಗ ನ್ಯಾಯಾಲಯದಲ್ಲಿದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಟಿವಿಯಲ್ಲಿ ಬರುತ್ತಿರುವ ಧಾರವಾಹಿಗಳು ಸಮಾಜಕ್ಕೆ ಯಾವುದೇ ಉತ್ತಮ ಸಂದೇಶ ನೀಡುತ್ತಿಲ್ಲ. ಸಮಾಜವನ್ನು ಮತ್ತಷ್ಟು ಹಾದಿ ತಪ್ಪಿಸುತ್ತಿವೆ. ಹಿಂದೆ ಮಕ್ಕಳಿಗೆ ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಹೇಳಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುತ್ತಿದ್ದೆವು. ಕನ್ನಡ ಸಾಹಿತ್ಯ ವರಿಷತ್ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.
 ಸರ್ಕಾರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2 ಕೋಟಿ ರುಪಾಯಿ ಅನುದಾನ ನೀಡುತ್ತಿದೆ. ಜಿಲ್ಲಾ ಸಮ್ಮೇಳನಕ್ಕೆ 5 ಲಕ್ಷ ಹಾಗೂ ತಾಲೂಕು ಸಮ್ಮೇಳನಕ್ಕೆ 1 ಲಕ್ಷ ರುಪಾಯಿ ನೀಡಲಾಗುತ್ತದೆ ಎಂದರು. ಸಂಭ್ರಮ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ ಮಾತನಾಡಿ, 2000 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ತನ್ನದೇ ಆದ ಸಂಸ್ಕೃತಿ, ಗಟ್ಟಿತನ, ಗುರಿ ಇದೆ. ಗ್ರಾಮೀಣ ಭಾಷೆಯಲ್ಲಿ ಮಾತ್ರ ಕನ್ನಡ ಭಾಷೆ ಇನ್ನೂ ಜೀವಂತವಾಗಿ ಉಳಿದಿದೆ. ಆದರೆ ದೊಡ್ಡ ನಗರಗಳಲ್ಲಿ ಈಗ ಕನ್ನಡ ಭಾಷೆಯನ್ನೂ ಸರಿಯಾಗಿ ಬಳುಸುತ್ತಿಲ್ಲ. ಇಂಗ್ಲಿಷ್ ಭಾಷೆಯನ್ನೂ ಸರಿಯಾಗಿ ಬಳಸದೆ ಕಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾರೆ. ಕನ್ನಡ ಭಾಷೆ ಬಳಸಿದಾಗ ಮಾತ್ರ ಭಾಷೆ ಉಳಿಯುತ್ತದೆ ಎಂದರು.
 ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್, ಸಮ್ಮೇಳನದ ಸ್ವಾಗತ ಸಮಿತಿ ಕೋಶಾಧ್ಯಕ್ಷ ಪಿ.ಜಿ. ಆಂಟೋನಿ, ಜಿಪಂ ಸದಸ್ಯೆ ಸುಜಾತ, ಎಚ್.ಟಿ. ರಾಜೇಂದ್ರ, ಕೆ.ಎಂ. ಗಂಗಾಧರ್, ನೆ.ಲ. ಸುಬ್ರಮಣ್ಯ, ಗಣೇಶ, ಪಿ.ಸಿ. ಮ್ಯಾಥ್ಯೂ, ರಾ. ವೆಂಕಟೇಶ್, ವಿ.ಎಸ್. ಕೃಷ್ಣಭಟ್, ನೀಲೇಶ್, ತಹಸೀಲ್ದಾರ್ ಕೃಷ್ಣಮೂರ್ತಿ ಇದ್ದರು.
 ನಿವೃತ್ತ ಕನ್ನಡ ಪಂಡಿತ ವಿ.ಎಸ್. ಕೃಷ್ಣಭಟ್ ಆಶಯ ಭಾಷಣ ಮಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮೇಳಾಧ್ಯಕ್ಷೆ ಎಂ. ಜಯಮ್ಮ ಅವರನ್ನು ಸನ್ಮಾನಿಸಲಾಯಿತು. ಬಾಳೆಹೊನ್ನೂರು ಸುಮಿತ್ರ ಮ್ತತು ತಂಡದವರು ನಾಡಗೀತೆ ಹಾಡಿದರು. ಶ್ಯಾಮಲ ಸತೀಶ್ ಮತ್ತು ತಂಡ ರೈತಗೀತೆ ಹಾಡಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಸ್ವಾಗತಿಸಿದರು. ತಾ.ಕ.ಸ.ಪ.ಗೌರವ ಕಾರ್ಯದರ್ಶಿ  ಭಾಗ್ಯನಂಜುಂಡಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
 ಬೆಳಿಗ್ಗೆ ತಾಪಂ ಅಧ್ಯಕ್ಷ ಜೆ.ಜಿ.ನಾಗರಾಜ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಎಸ್.ಜಿ. ಕೃಷ್ಣಮೂರ್ತಿ ಪರಿಷತ್ತಿನ ಧ್ವಜ ನೆರವೇರಿಸಿದರು. ವಿ.ಎಸ್. ಕೃಷ್ಣಭಟ್ ಮೆರವಣಿಗೆ ಉದ್ಘಾಟಿಸಿದರು. ದೀಪ್ತಿ ಪ್ರೌಢ ಶಾಲೆಯ ಸಮೀಪದಿಂದ ಸಮ್ಮೇಳಾಧ್ಯಕ್ಷರನ್ನು ಸಾರೋಟ್ ಮೂಲಕ  ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ತಾಯಿ ಭುವನೇಶ್ವರಿಯ ಸ್ಥಬ್ದ ಚಿತ್ರ, ಡೋಲು ಕುಣಿತದೊಂದಿಗೆ ಸಾವಿರಾರು ಮಕ್ಕಳು, ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.