ದಕ್ಷಿಣ ಕನ್ನಡ

ಆಸ್ತಿ ವಿವಾದ; ಯುವಕ ಕೊಲೆ

Published On :

ಸುಳ್ಯ: ರಕ್ತ ಸಂಬಂಧಿಗಳೊಳಗೆ ಆಸ್ತಿ ವಿವಾದ ಉಲ್ಬಣಿಸಿ ಘರ್ಷಣೆ ಸಂಭವಿಸಿ ಯುವಕನೋರ್ವ ಆತನ ಚಿಕ್ಕಪ್ಪನ ಇರಿತಕ್ಕೆ ಬಲಿಯಾದ ಘಟನೆ ಮಂಗಳವಾರ ಬೆಳಗ್ಗೆ ಆಲೆಟ್ಟಿ ಗ್ರಾಮದ ಬೊಳ್ಳೂರು ಎಂಬಲ್ಲಿ ನಡೆದಿದೆ.
 ಬೊಳ್ಳೂರು ಬೆಳ್ಳಂಪಾರೆಯ ಅಪ್ಪಯ್ಯ ನಾಯ್ಕ ಎಂಬವರ ಪುತ್ರ ಸದಾಶಿವ ನಾಯ್ಕ (26) ಇರಿತಕ್ಕೆ ಬಲಿಯಾದ ಯುವಕ. ಸದಾಶಿವ ಅವರ ಚಿಕ್ಕಪ್ಪ ನಾರಾಯಣ ನಾಯ್ಕ ಕೊಲೆ ಆರೋಪಿ. ಈ ಇಬ್ಬರ ಮಧ್ಯೆ ಆಸ್ತಿ ತಕರಾರಿದ್ದು, ಇದು ಉಲ್ಬಣಿಸಿ ಘರ್ಷಣೆಗೆ ತಿರುಗಿದಾಗ ಈ ಘಟನೆ ಸಂಭವಿಸಿದೆ.
ಘಟನೆ ವಿವರ: ಸುಳ್ಯ ಸಮೀಪದ ಆಲೆಟ್ಟಿ ಗ್ರಾಮದ ಬೊಳ್ಳೂರು ಬೆಳ್ಳಂಪಾರೆಯಲ್ಲಿ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಈ ಕುಟುಂಬದ ಜಮೀನಿದೆ. ನಾರಾಯಣ ನಾಯ್ಕ ಮತ್ತು ಅವರ ಅಣ್ಣಂದಿರಾದ ಅಪ್ಪಯ್ಯ ನಾಯ್ಕ, ಗೋವಿಂದ ನಾಯ್ಕ ಅಕ್ಕಪಕ್ಕದಲ್ಲೇ ವಾಸವಾಗಿದ್ದು, ತಲಾ 20 ಸೆಟ್ಸ್‌ನಂತೆ ಅಣ್ಣಂದಿರಿಗೆ ನೀಡಲಾಗಿತ್ತು.
 ಆದರೆ ತಮಗೆ ಸಮಪಾಲು ನೀಡಬೇಕೆಂದು ಅಣ್ಣಂದಿರ ಮಕ್ಕಳು ತಗಾದೆ ತೆಗೆಯುತ್ತಿದ್ದರು. ಇದರಿಂದ ಈ ಕುಟುಂಬಗಳೊಳಗೆ ಸುಮಾರು 15 ವರ್ಷಗಳಿಂದ ವಿವಾದವಿತ್ತು. ನಾರಾಯಣ ನಾಯ್ಕ ಉಳಿದವರಿಗೆ ತಿಳಿಯದೆ ಪೂರ್ತಿ ಜಾಗ ತಮ್ಮ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಅಪ್ಪಯ್ಯ ನಾಯ್ಕ ಕಡೆಯವರ ವಾದ.
 ಇತ್ತೀಚೆಗೆ ನಾರಾಯಣ ನಾಯ್ಕರ ಜಾಗದಲ್ಲಿದ್ದ ಮರವೊಂದನ್ನು ಅರಣ್ಯ ಇಲಾಖೆಯವರು ಕಡಿದಿದ್ದರು. ಅಪ್ಪಯ್ಯ ನಾಯ್ಕರ ಜಾಗದಲ್ಲಿದ್ದ ಮರದ ಗೆಲ್ಲು ನಾರಾಯಣ ನಾಯ್ಕ್ ಜಾಗಕ್ಕೆ ಹೋಗಿದ್ದು ಇದನ್ನು ಕೆಲವು ದಿನಗಳ ಹಿಂದೆ ನಾರಾಯಣ ನಾಯ್ಕ ಕೂಡಾ ಕಡಿದಿದ್ದರು. ಇದನ್ನು ಸದಾಶಿವ ನಾಯ್ಕ ಮತ್ತು ಅವರ ಮನೆಯಲ್ಲಿರುವ ಸೋಮಶೇಖರ ಎಂಬವರು ಪ್ರಶ್ನಿಸಿದಾಗ ಮತ್ತೆ ವಿವಾದ ಉಲ್ಬಣಿಸಿತ್ತು.
ಸಾವಲ್ಲೇ ಕೊನೆಯಾಯ್ತು ಘರ್ಷಣೆ: ಮಂಗಳವಾರ ಬೆಳಗ್ಗೆ ನಾರಾಯಣ ನಾಯ್ಕರ ಮನೆಗೆ ಬಂದಿದ್ದ ಕೆಲವರು ಬೆದರಿಕೆ ಒಡ್ಡಿದ್ದರೆನ್ನಲಾಗಿದೆ. ಆಗ ಇತ್ತಂಡದೊಳಗೆ ಮಾತಿನ ಚಕಮಕಿ ನಡೆದಿತ್ತು.
 ಬಳಿಕ ನಾರಾಯಣ ನಾಯ್ಕ ಮತ್ತು ಪುತ್ರಿ ರಮ್ಯ ಸುಳ್ಯದತ್ತ ಹೊರಟಾಗ ದಾರಿ ಬದಿಯಲ್ಲಿ ನಿಂತಿದ್ದ ಸದಾಶಿವ ಮತ್ತು ಇತರರು ಅವರೊಂದಿಗೆ ಜಗಳ ಕಾಯ್ದಾಗ ಇತ್ತಂಡದವರ ನಡುವೆ ಹೊಡೆದಾಟ ಆರಂಭಗೊಂಡಿತು.
ತಂದೆ, ಮಗಳ ಮೇಲೆ ಗುಂಪು ಹಲ್ಲೆ ನಡೆಸಿತು. ಪ್ರತಿಯಾಗಿ ಅವರು ಕೂಡಾ ಗುಂಪಿನವರಿಗೆ ಹೊಡೆದರು. ಈ ವೇಳೆ ನಾರಾಯಣ ನಾಯ್ಕ ತನ್ನಲ್ಲಿದ್ದ ಚೂರಿಯಿಂದ ಸದಾಶಿವರ ಎಡ ಪಕ್ಕೆಲುಬಿನ ಕೆಳಗಿನ ಭಾಗಕ್ಕೆ ತಿವಿದರು. ಬಳಿಕ ಇತರರು ಗಾಯಾಳು ಸದಾಶಿವರನ್ನು ರಿಕ್ಷಾದಲ್ಲಿ ಹಾಕಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.
 ಆಸ್ಪತ್ರೆಗೆ ಬಂದಿದ್ದ ನಾರಾಯಣ ನಾಯ್ಕರನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಗಾಯಗೊಂಡಿದ್ದ ರಮ್ಯ ಕೂಡಾ ಆಸ್ಪತ್ರೆಯಲ್ಲಿ ದಾಖಲಾದರು.
ಸದಾಶಿವ ವಿವಾಹಿತರಾಗಿದ್ದು ಪತ್ನಿ ಗರ್ಭಿಣಿ. ಆರೋಪಿ ನಾರಾಯಣ ನಾಯ್ಕ ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಅಟೆಂಡರ್. ಅವರ ಪುತ್ರಿ ರಮ್ಯ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ.
ಸದಾಶಿವರ ತಮ್ಮ ಸತೀಶನ ದೂರಿನ ಮೇರೆಗೆ ನಾರಾಯಣ ನಾಯ್ಕ ಮತ್ತು ರಮ್ಯನ ವಿರುದ್ಧ ಕೇಸು ದಾಖಲಿಸಲಾಗಿದೆ. ರಮ್ಯನ ದೂರಿನ ಮೇರೆಗೆ ಅಪ್ಪಯ್ಯ, ಗೋಪಾಲ, ಚನಿಯಪ್ಪ, ದಿವಾಕರ, ನಾಗೇಶ, ಚಂದ್ರಶೇಖರ, ಸುಬ್ಬ, ಸೋಮಶೇಖರರ ಮೇಲೆ ಕೇಸು ದಾಖಲಿಸಲಾಗಿದೆ.
 ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದು ಸರ್ಕಲ್ ಇನ್‌ಸ್ಪೆಕ್ಟರ್ ಎಚ್.ವಿ. ಸುದರ್ಶನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಪುತ್ತೂರು ವಿಭಾಗದ ಎ.ಎಸ್.ಪಿ. ಸದಾನಂದ ವರ್ಣೇಕರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.