ದಕ್ಷಿಣ ಕನ್ನಡ

ಕ್ರೇನ್ ಡಿಕ್ಕಿ: ವ್ಯಕ್ತಿ ಸಾವು

Published On :

ಬೆಳ್ತಂಗಡಿ: ಸೈಕಲ್ ಸವಾರನೋರ್ವ ಕ್ರೇನ್‌ನ ಅಡಿಗೆ ಬಿದ್ದು ಮೃತಪಟ್ಟ ಘಟನೆ ವೇಣೂರು ಸಮೀಪ ಪಡ್ಯಾರಬೆಟ್ಟು ಎಂಬಲ್ಲಿ ಗುರುವಾರ ನಡೆದಿದೆ.
ಹೊಸಂಗಡಿ ಗ್ರಾಮದ ನೆಕ್ಕಿಲ ಮನೆಯ ಒಬಯ್ಯ ಪೂಜಾರಿ (55) ಮೃತರು. ಇವರಿಗೆ ಮೂಡುಬಿದಿರೆ ಕಡೆಯಿಂದಬೆಳ್ತಂಗಡಿಗೆ ಬರುತ್ತಿದ್ದ ಕ್ರೇನ್ ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಪಲ್ಟಿ: 6 ಮಂದಿಗೆ ಗಾಯ
ಮಂಗಳೂರು: 
ಜೋಕಟ್ಟೆಯಿಂದ ಅರ್ಕುಳಕ್ಕೆ ತೆರಳುತ್ತಿದ್ದ ಅಲ್ಟೊ ಕಾರು ಗುರುವಾರ ಮಧ್ಯಾಹ್ನ ಅಡ್ಯಾರ್ ವಳಚ್ಚಿಲ್ ಬಳಿ ಪಲ್ಟಿಯಾಗಿ ಗುಂಡಿಗೆ ಬಿದ್ದಿದೆ. ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಕಾರ್‌ನಲ್ಲಿ ಚಾಲಕ ಮನ್ಸೂರ್, ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳಿದ್ದರು. ಸಣ್ಣಪುಟ್ಟ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಹೃದಯಾಘಾತದಿಂದ ವ್ಯಕ್ತಿ ಸಾವು
ಬ್ರಹ್ಮಾವರ:
ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಾವಂಜೆ ಗ್ರಾಮದ ಮುಗ್ಗೇರಿ ಎಂಬಲ್ಲಿ ಬುಧವಾರ ನಡೆದಿದೆ. ಸಂಜೀವ ಶೆಟ್ಟಿ (70) ಮೃತರು. ಇವರು ರಕ್ತದೊತ್ತಡ, ಮಧುಮೇಹ ಹಾಗೂ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದರು. ಬುಧವಾರ ಬೆಳಿಗ್ಗೆ ಹಾವಂಜೆಯ ಮುಗ್ಗೇರಿ ಎಂಬಲ್ಲಿ ಮನೆ ಬಳಿ ನಡೆದುಕೊಂಡು ಹೋಗುತ್ತಿರುವಾಗ ಒಮ್ಮೆಲೆ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನು ಉಡುಪಿ ಟಿ.ಎಂ.ಎ. ಪೈ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂಬುದಾಗಿ ಪ್ರಭಾಕರ ಶೆಟ್ಟಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೀನುಗಾರ ನೀರುಪಾಲು
ಮಂಗಳೂರು:
ನೇತ್ರಾವತಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋದ ಪೌಲ್  ಲೋಬೋ (50) ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜೆಪ್ಪುಪಟ್ಲ ನಿವಾಸಿ ಲೋಬೊ ಮಹಾಕಾಳಿಪಡ್ಪು ಬಳಿ ಚಿಪ್ಪುಹೆಕ್ಕಲು ಬೆಳಗ್ಗೆ ನೀರಲ್ಲಿ ಇಳಿದಿದ್ದರು.  ಇನ್ನೂ ಮೂವರು ಅಲ್ಲಿ ಚಿಪ್ಪು ಹೆಕ್ಕುತ್ತಿದ್ದರು. ಈ ಮೂವರು ಒಂದು ಕಡೆಯಿಂದ ಬಂದರೆ ಪೌಲ್ ಇನ್ನೊಂದು ಕಡೆಯಿಂದ ತೀರಕ್ಕೆ ಹೊರಟಿದ್ದರು. ಕೆಸರು ತುಂಬಿದ ಕಾರಣ ಹೂತು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಅಗ್ನಿಶಾಮಕ ದಳದ 7 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹ ಹುಡುಕಾಡಿದರು. 3 ಗಂಟೆ ವೇಳೆಗೆ ಶವ ಸಿಕ್ಕಿದೆ. ಪೌಲ್ ಲೋಬೋ ಹಿಂದೆ ಬೋಟ್ ರಿಪೇರಿ ಮಾಡುತ್ತಿದ್ದರು. ಇತ್ತೀಚೆಗೆ ಅನಾರೊಗ್ಯ ನಿಮಿತ್ತ ಮನೆಯಲ್ಲಿದ್ದರು.

ಮುಳುಗುತ್ತಿದ್ದ ಯುವಕ ರಕ್ಷಣೆ
ಮಂಗಳೂರು:
ಪಣಂಬೂರು ಕಡಲ ತೀರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುತ್ತಿದ್ದ  ಮಂಗಳೂರಿನ ರವಿ ಎಂಬವರನ್ನು ಜೀವರಕ್ಷಕ ದಳದವರು ರಕ್ಷಿಸಿದ್ದಾರೆ. ರವಿ ಎಂಪಾಯರ್‌ಮಾಲ್ ಎನ್‌ಜಿಪಿ ಲಕ್ಕಿಸ್ಟೋನ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು.

ಜೀವನದಲ್ಲಿ ಜಿಗುಪ್ಸೆ; ವ್ಯಕ್ತಿ ಆತ್ಮಹತ್ಯೆ
ಹಿರಿಯಡ್ಕ:
ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಅಂಜಾರು ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಮೃತರು ಸುಂದರ ಮರಕಾಲ (50). ಅವರಿಗೆ ವಿಪರೀತ ಅಮಲು ಪದಾರ್ಥ  ಸೇವನೆಯ ಚಟ ಇದ್ದು, ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪತ್ನಿ ಪದ್ಮ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು
ಹಿರಿಯಡ್ಕ:
ಇಲ್ಲಿನ ಅಂಜಾರು ಗ್ರಾಮದ ಪಡು ಅಂಜಾರು ಗೋಳಿದಡಿ ಎಂಬಲ್ಲಿ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಬೇಬಿ ಶೆಡ್ತಿ ಮೃತರು. ಬೆಳಗಿನ ಜಾವ ಚಾ, ತಿಂಡಿ ತಯಾರಿಸುವಾಗ ಅಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ತಗುಲಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಬಗ್ಗೆ ಮೃತರ ಮಗ ಮನೋಜ ಶೆಟ್ಟಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ದೇವಾಕ್ ಮಹಿಮಾ!
ಮಂಗಳೂರು:
ಸರಿಪಳ್ಳ ಕಣ್ಣಗುಡ್ಡೆ ಬಳಿ ಖಾಸಗಿ ಬಸ್ ನಿಂತಲ್ಲಿ ಹಿಂದಕ್ಕೆ ಚಲಿಸಿ ಗುಂಡಿಗೆ ಬಿದ್ದಿದ್ದು, ಮಹಿಳೆಯೊಬ್ಬರಿಗೆ ಗಾಯವಾಗಿದೆ. ಬಸ್‌ನಲ್ಲಿ 6 ಮಂದಿ ಪ್ರಯಾಣಿಕರಿದ್ದರು. ಬಸ್ ಸರಿಪಳ್ಳದಿಂದ ಮಂಗಳಾದೇವಿಗೆ ತೆರಳುತ್ತಿತ್ತು. ಬ್ರೇಕ್‌ನಲ್ಲಿನ ವ್ಯಾಕ್ಯೂಮ್ ಕಡಿಮೆಯಾಗಿದ್ದೆ ಇದಕ್ಕೆ ಕಾರಣ ಎಂದು ಬಸ್ ಚಾಲಕ ತಿಳಿಸಿದ್ದಾನೆ. ಬಸ್‌ನಲ್ಲಿ ದೇವಾಕ್ ಮಹಿಮಾ ಎಂದು ಬರೆದಿತ್ತು. ದೇವರ ಮಹಿಮೆಯಿಂದಲೋ ಏನೋ ಬಸ್ ಪಲ್ಟಿಯಾಗಿಲ್ಲ. ಹೀಗಾಗಿ ಪ್ರಯಾಣಿಕರು ಅನಾಹುತದಿಂದ ಪಾರಾದರು.

ರಿಕ್ಷಾ- ಸ್ಕೂಟರ್ ಡಿಕ್ಕಿ: ಮಗು ಗಂಭೀರ
ಉಪ್ಪಿನಂಗಡಿ:
ಇಲ್ಲಿಗೆ ಸಮೀಪದ ಇಳಂತಿಲ ಎಂಬಲ್ಲಿ ರಿಕ್ಷಾ ಮತ್ತು ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್‌ನಲ್ಲಿದ್ದ ಮಗುವೊಂದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಇಳಂತಿಲದ ಹುಕ್ರಪ್ಪ ಅವರ ಮೊಮ್ಮಗಳು ತೃಪ್ತಿ (3) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಹುಕ್ರಪ್ಪ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸದಿ, ಅಂಗಡಿಯಿಂದ ಕಳವಿಗೆ ಯತ್ನ
ಉಪ್ಪಿನಂಗಡಿ:
ಮರ್ಧಾಳ ಪೇಟೆಯಲ್ಲಿ ಬಸದಿ ಹಾಗೂ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನ ನಡೆಸಿದ ಘಟನೆ ನಡೆದಿದೆ. ಮರ್ಧಾಳ ಬಸದಿ ಮೊದಲನೆ ಬಾಗಿಲು ಮುರಿದು ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಒಡೆದು ಹಣವನ್ನು ದೋಚಿದ್ದಾರೆ. ಬಳಿಕ ಪದ್ಮನಾಭ ಎಂಬವರ ಅಂಗಡಿಗೆ ನುಗ್ಗಿ ಬೀಗ ಒಡೆಯಲು ಯತ್ನಿಸಿದ್ದಾರೆ. ಬಸದಿಯ ಅಧ್ಯಕ್ಷ ಸನತ್ ಕುಮಾರ್, ಅಂಗಡಿ ಮಾಲೀಕ ಪದ್ಮನಾಭ ಎಂಬವರು ದೂರು ಕಡಬ ಪೊಲೀಸರಿಗೆ ನೀಡಿದ್ದಾರೆ.

ಸಾಲ ಮಾಡಿ ಪರಾರಿ
ಮಂಗಳೂರು:
ಕಂಡ, ಕಂಡವರ ಬಳಿ ಸಾಲ ಮಾಡಿ ತೀರಿಸಲಾಗದೆ ಪದವಿನಂಗಡಿ ಪೆರ್ಲಗುರಿ ಮಾತೃಕೃಪಾ ನಿವಾಸಿ ಶ್ರೀಕಾಂತ್ ಭಟ್ (33)ಮನೆ ಬಿಟ್ಟು ಪರಾರಿಯಾಗಿದ್ದಾರೆ. ಅನೇಕ ಮಂದಿ ಸಾಲದ ಹಣ ಕೇಳಲು ಮನೆಗೆ ಬರುತ್ತಿದ್ದರು. ಇದರಿಂದ ಬೇಸರಗೊಂಡು ಸೋಮವಾರ ಬೆಳಗ್ಗೆ 9.30ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ ಎಂದು ಪತ್ನಿ ವಿದ್ಯಾ ಭಟ್ ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕನ್ನಡ, ತುಳು, ಹಿಂದಿ, ಕೊಂಕಣಿ ಮಾತನಾಡುತ್ತಾರೆ. ಬಿಳಿ ಬಣ್ಣದ ವೇಸ್ಟಿ, ದುಂಡು ಮುಖ, ಚಿನ್ನಡ ಟಿಕ್ಕಿ ಧರಿಸಿದ್ದಾರೆ. 5.3 ಅಡಿ ಎತ್ತರ. ಕಂಡವರು ಕಾವೂರು ಪೊಲೀಸ್ ಠಾಣೆ (2220533) ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.