ಬಿಸಿಲಿನ ಝಳದ ಜತೆ ಚುನಾವಣಾ ಕಾವು!
ಧಾರವಾಡ: ರಾಜ್ಯ, ದೇಶದೆಲ್ಲೆಡೆ ಈಗ ಕಾವೇರಿದ ವಾತಾವರಣ. ದೇಶದಲ್ಲಿ ಐಪಿಎಲ್ ಪಂದ್ಯಾವಳಿ ಕಾವಿನ ಜತೆ ಬಿಸಿಲಿನ ಝಳ ಜನರಲ್ಲಿ ತಲ್ಲಣ ಮೂಡಿಸಿದ್ದರೆ, ಇವೆಲ್ಲವುಗಳ ಜತೆ ರಾಜ್ಯದಲ್ಲಿ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ.
ಒಂದೆಡೆ ಐಪಿಎಲ್, ಇನ್ನೊಂದೆಡೆ ವಿಧಾನಸಭೆ ಚುನಾವಣೆ, ಮತ್ತೊಂದೆಡೆ ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಝಳ ಭಯಂಕರವಾಗಿದ್ದು, ಎಲ್ಲರ ನಿದ್ದೆಗೆಡಿಸಿದೆ. ಅರೆ ಮಲೆನಾಡು ಪ್ರದೇಶ ಧಾರವಾಡದಲ್ಲಿ ಮೊದಲೆಲ್ಲ ಬೇಸಿಗೆ ಎಂದರೆ ಅಷ್ಟೇನೂ ಬಿಸಿ ಅನುಭವ ಆಗುತ್ತಿರಲಿಲ್ಲ. ಆದರೀಗ ಬೇಸಿಗೆ ಬಿಸಿ ಧಾರವಾಡಿಗರನ್ನು ಒಂದರ್ಥದಲ್ಲಿ ಮುದ್ದಿ ಮಾಡಿದಂತಿದೆ.
ಈ ಹಿಂದೆ ಧಾರವಾಡ ಅನತಿ ದೂರದಲ್ಲೇ ಪಶ್ಚಿಮ ಘಟ್ಟ ಶುರುವಾಗುತ್ತಿತ್ತು. ಕಳೆದ ದಶಕದಿಂದ ಕಾಡು ದೂರ ಸರಿಯುತ್ತಿದೆ, ಕಾಂಕ್ರಿಟ್ ಕಾಡು ಹೆಚ್ಚಾಗುತ್ತಿದೆ. ಗುಡ್ಡ-ಬೆಟ್ಟಗಳೂ ಮರೆಯಾಗುತ್ತಿವೆ. ಮಳೆ ಪ್ರಮಾಣವೂ ತಗ್ಗಿದೆ. ಈ ಎಲ್ಲ ಕಾರಣಗಳಿಂದ ಈ ಪರಿ ತಾಪಮಾನ ಏರಿಕೆಯಾಗುತ್ತಿದೆ ಎನ್ನುವುದು ಪರಿಸರವಾದಿಗಳ ಅಭಿಪ್ರಾಯ.
ಕೇವಲ ದಶಕದ ಮುಂಚೆ ಧಾರವಾಡದಲ್ಲಿ ಅಬ್ಬಬ್ಬಾ ಎಂದರೆ 30 ಡಿಗ್ರಿ ಸೆಲ್ಸಿಯಸ್ನ ಆಸುಪಾಸಿನಲ್ಲಿರುತ್ತಿದ್ದ ತಾಪಮಾನ, ಈಗ 40 ಡಿಗ್ರಿ ಸೆಲ್ಸಿಯಸ್ ಸಮೀಪಿಸಿದೆ. ಒಂದು ವಾರದಿಂದ 37 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವಿದ್ದು, ಇನ್ನು ಹೆಚ್ಚಾದರೂ ಆಶ್ಚರ್ಯವಿಲ್ಲ. ಬಳ್ಳಾರಿ, ಗುಲ್ಬರ್ಗ ಹಾಗೂ ರಾಯಚೂರಿನ ಬಿಸಿಲಿನ ಅನುಭವ ಧಾರವಾಡದಲ್ಲಾಗುತ್ತಿದ್ದು, ನಿವೃತ್ತರ ಸ್ವರ್ಗ ಎಂದೇ ಹೆಸರು ಪಡೆದಿದ್ದ ಧಾರವಾಡ ತನ್ನ ಮುಂಚಿನ ಹದವಾದ ವಾತಾವರಣ ಮರೆಯಾಗಿದೆ.
ಇಡೀ ರಾಜ್ಯದಲ್ಲಿ: ಬರೀ ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿಯೇ ಈ ವರ್ಷ ಬಿಸಿಲಿನ ಧಗೆ ಎದ್ದಿದ್ದು, ಅತಿ ಹೆಚ್ಚಿನ ತಾಪಮಾನ ಬಳ್ಳಾರಿ, ರಾಯಚೂರು, ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿದೆ. ಈ ಜಿಲ್ಲೆಗಳಲ್ಲಿ ಸದ್ಯ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ. ಇನ್ನು, ಕೊಪ್ಪಳ, ಬಿಜಾಪುರದಲ್ಲಿ 39 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ಬೀದರ್ನಲ್ಲಿ 38 ಡಿಗ್ರಿ ಸೆಲ್ಸಿಯಸ್, ಧಾರವಾಡ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಮಂಡ್ಯ, ತುಮಕೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ನಷ್ಟಿದೆ. ಉಡುಪಿ, ಕೋಲಾರ ಜಿಲ್ಲೆಗಳಲ್ಲಿ 36 ಡಿಗ್ರಿ ಸೆಲ್ಸಿಯಸ್ನಷ್ಟಿದ್ದರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಇಡೀ ರಾಜ್ಯದಲ್ಲಿ ತುಸು ಕಡಿಮೆ ತಾಪಮಾನ ಹೊಂದಿರುವ ಜಿಲ್ಲೆಗಳೆಂದರೆ ಮೈಸೂರು ಹಾಗೂ ಬೆಂಗಳೂರು ನಗರ. ಇಲ್ಲಿ 34 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವಿದೆ.
ರಾಜ್ಯದೆಲ್ಲೆಡೆ ಇಷ್ಟೊಂದು ಬಿಸಿಲಿನ ಪ್ರಕರತೆ ಇದ್ದು, ಇದೇ ಸಂದರ್ಭದಲ್ಲಿ ಚುನಾವಣೆ ಸಹ ಬಂದೆರಗಿದೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಭಯಂಕರ ಬಿಸಿಲಿನಲ್ಲಿಯೂ ಕಾರ್ಯಕರ್ತರನ್ನು ಒಗ್ಗೂಡಿಸುತ್ತಿದ್ದಾರೆ. ಟಿಕೆಟ್ ಅಂತಿಮಗೊಂಡ ಅಭ್ಯರ್ಥಿಗಳಂತೂ ಈಗಾಗಲೇ ಒಂದನೇ ಸುತ್ತಿನ ಪ್ರಚಾರ ಕಾರ್ಯ ಶುರು ಹಚ್ಚಿಕೊಂಡಿದ್ದಾರೆ. ಎಷ್ಟೇ ರಣರಣ ಬಿಸಿಲಿದ್ದರೂ ಕಾರ್ಯಕರ್ತರಿಗೆ ತಂಪು ಪಾನೀಯಗಳನ್ನು ಕುಡಿಸುತ್ತಾ ಮತ ಪ್ರಚಾರ ನಡೆಯುತ್ತಿದೆ. ರಾಜಕೀಯ ಸಭೆ-ಸಮಾರಂಭಗಳಲ್ಲಿ ಅಭ್ಯರ್ಥಿಗಳಿಂದ ಕುಡಿಯುವ ನೀರು, ಕೆರೆ ಕಟ್ಟೆಗಳದ್ದೇ ಭರವಸೆಯ ಮಾತುಗಳು ಕೇಳಿ ಬರುತ್ತಿವೆ.
ಬೇಸಿಗೆ ಜತೆ ವಿದ್ಯುತ್ ಸಮಸ್ಯೆ, ಪರೀಕ್ಷೆಗಳು ಬೇರೆ ನಡೆಯುತ್ತಿವೆ. ಬಿಸಿಲು ಹಾಗೂ ಸೆಕೆಯಿಂದ ತಪ್ಪಿಸಿಕೊಳ್ಳಲು ಎಸಿ, ಫ್ಯಾನ್ಗಳೂ ವಿದ್ಯುತ್ ಕಡಿತದಿಂದ ಕೆಲಸ ಮಾಡುತ್ತಿಲ್ಲ. ಮತ್ತೆ ಮಳೆಗಾಲದ ಆಗಮನ ಆಗುವವರೆಗೂ ಈ ತಾಪಮಾನದ ಕಾಟ ಮಾತ್ರ ತಪ್ಪಿದ್ದಲ್ಲ.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

