ಲಕ್ಷಾಂತರ ಮೌಲ್ಯದ ನಗ, ನಗದು ಕಳವು
ಉಡುಪಿ: ಇಲ್ಲಿನ ಕುಂಜಿಬೆಟ್ಟಿನ ಮುನವ್ವರ್ ಕಾಂಪೌಂಡ್ ಎಂಬಲ್ಲಿ ಭಾನುವಾರ ಸಂಜೆ ಮನೆಯೊಂದರಲ್ಲಿ ಕಳ್ಳತನ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಮಹಮ್ಮದ್ ಹನೀಫ್ ಶೇಕ್ ಅವರು ಮಧ್ಯಾಹ್ನ ತಮ್ಮ ಪತ್ನಿಯೊಂದಿಗೆ ಮನೆಗೆ ಬೀಗ ಹಾಕಿ ಉದ್ಯಾವರಕ್ಕೆ ಹೋಗಿದ್ದು, ರಾತ್ರಿ 9.30 ಗಂಟೆಗೆ ಬಂದು ನೋಡುವಾಗ ಮನೆಯ ಎದುರಿನ ಬಾಗಿಲು ಯಥಾಸ್ಥಿತಿಯಲ್ಲಿತ್ತು. ಆದರೆ ಮನೆಯೊಳಗೆ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಕಂಡುಬಂದಿದೆ.
ಬೆಡ್ರೂಮ್ನ ಕಿಟಕಿಯ ಮರದ ಚೌಕಟ್ಟನ್ನು ಕಿತ್ತು ಒಳಬಂದ ಕಳ್ಳರು, ಕಪಾಟಿನಲ್ಲಿದ್ದ ಅರೆಬಿಕ್ ಶೈಲಿಯ 6 ಚಿನ್ನದ ಬಳೆ (90 ಗ್ರಾಂ), ಚಿನ್ನದ ನೆಕ್ಲೇಸ್ (60 ಗ್ರಾಂ), 3 ಚಿನ್ನದ ಉಂಗುರ, ಕಿವಿಯ ಚಿನ್ನದ ಲೋಲಾಕು (20 ಗ್ರಾಂ) ಹಾಗೂ ನಗದು 25,000 ಕಳವು ಮಾಡಲಾಗಿದೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ರು. 4,95,000 ಎಂದು ಶೇಖ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಿನ್ನ ಕೋಮಿನ ವಿದ್ಯಾರ್ಥಿನಿ ಜೊತೆ ಸಂಭಾಷಣೆಗೆ ಆಕ್ಷೇಪ; ವಿದ್ಯಾರ್ಥಿಗೆ ಹಲ್ಲೆ
ಪುತ್ತೂರು: ವಿದ್ಯಾರ್ಥಿನಿಯೊಬ್ಬಳ ಜೊತೆ ಮಾತನಾಡಿದರೆಂಬ ಕಾರಣಕ್ಕಾಗಿ ಭಿನ್ನ ಕೋಮಿನ ವಿದ್ಯಾರ್ಥಿಗೆ 12 ಮಂದಿಯ ತಂಡ ಹಲ್ಲೆ ನಡೆಸಿದ ಘಟನೆ ಪುತ್ತೂರು ನೆಲ್ಲಿಕಟ್ಟೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಪುತ್ತೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಕಂಪ್ಯೂಟರ್ ವಿದ್ಯಾರ್ಥಿ, ನರಿಮೊಗ್ರು ಗ್ರಾಮದ ಪುರುಷರಕಟ್ಟೆ ನಿವಾಸಿ ಹಸೈನಾರ್ ಅವರ ಪುತ್ರ ಜುಬೈರ್ ಹಲ್ಲೆಗೊಳಗಾದ ವಿದ್ಯಾರ್ಥಿ.
ಸೋಮವಾರ ಮಧ್ಯಾಹ್ನ ತರಗತಿ ಮುಗಿಸಿ ಪುತ್ತೂರು ಪೇಟೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಕೆಯ್ಯೂರು ಗ್ರಾಮದ ಮಾಡಾವಿನ ಇಬ್ಬರು ವ್ಯಕ್ತಿಗಳು ಸೇರಿ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದನ್ನು ಪ್ರಶ್ನಿಸಿ ಹಲ್ಲೆ ನಡೆಸಿದರು. ಅದೇ ವೇಳೆ ಸುಮಾರು 10 ಮಂದಿಯಿದ್ದ ತಂಡ ಸೇರಿಕೊಂಡು ತನ್ನನ್ನು ನೆಲ್ಲಿಕಟ್ಟೆಯಿಂದ ಬಸ್ ನಿಲ್ದಾಣ ತನಕ ಅಟ್ಟಿಸಿಕೊಂಡು ಬಂದು ಹಲ್ಲೆ ನಡೆಸಿದರು ಎಂದು ಗಾಯಾಳು ಜುಬೈರ್ ಆರೋಪಿಸಿದ್ದಾರೆ. ಜುಬೈರ್ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು , ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಂಗಿ ಗಂಡನ ಜತೆ ಬೈಕ್ನಲ್ಲಿ ಸಂಚಾರ: ಪತಿಯಿಂದ ಹಲ್ಲೆ
ಉಪ್ಪಿನಂಗಡಿ: ತಂಗಿ ಗಂಡನ ಜೊತೆ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಡಿಕ್ಕಿ ಹೊಡೆದು, ಹಲ್ಲೆ ನಡೆಸಿದ ಬಗ್ಗೆ ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ದೂರು ನೀಡಿದ ಘಟನೆ ನಡೆದಿದೆ.
ಪ್ರಮೀಳಾ ಎಂಬಾಕೆ ತನ್ನ ತಂಗಿ ಗಂಡ ಪ್ರಮೋದ್ ಜೊತೆ ಬೈಕ್ನಲ್ಲಿ ಇಲ್ಲಿಗೆ ಸಮೀಪದ ಹತ್ಯಡ್ಕ ಎಂಬಲ್ಲಿ ಸಂಚರಿಸುತ್ತಿದ್ದಾಗ ಇನ್ನೊಂದು ಬೈಕ್ನಲ್ಲಿ ಬಂದ ಪ್ರಮೀಳಾ ಅವರ ಗಂಡ ವಿಠಲ ಪೂಜಾರಿ, ಪ್ರಮೋದ್ ಸವಾರಿ ಮಾಡುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆಸಿ, ಇಬ್ಬರೂ ಬೀಳುವಂತೆ ಮಾಡಿದರಲ್ಲದೆ, ಇಬ್ಬರ ಮೇಲೂ ಯದ್ವಾತದ್ವಾ ಹಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಇಬ್ಬರೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ
ಬಂಟ್ವಾಳ: ಇಲಿ ಪಾಷಾಣ ಸೇವಿಸಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಂಬೆಟ್ಟು ಗ್ರಾಮದ ರಾಮಗುರಿ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಜಿನ್ನಪ್ಪ ಪೂಜಾರಿ ಎಂಬವರ ಮಗಳು ಯಶೋಧ (24) ಮೃತರು. ಶನಿವಾರ ರಾತ್ರಿ 10ಕ್ಕೆ ಮನೆ ಪಕ್ಕದ ಗುಡ್ಡಕ್ಕೆ ತೆರಳಿ ಇಲಿ ಪಾಷಾಣ ಸೇವಿಸಿ ಬಂದು ಮನೆಯಲ್ಲಿ ಮಲಗಿದ್ದಳು ಎನ್ನಲಾಗಿದ್ದಾಳೆ. ಮನೆ ಮಂದಿ ಬೆಳಗ್ಗೆ ಎದ್ದು ನೋಡುವಾಗ ಮೃತಪಟ್ಟಿರುವುದು ತಿಳಿದುಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಪಂಬೆತ್ತಾಡಿ; ಹೆಜ್ಜೇನು ದಾಳಿ-ನಾಲ್ವರು ಅಸ್ವಸ್ಥ
ಸುಳ್ಯ: ಹೆಜ್ಜೇನು ಹಿಂಡು ಮನೆಯೊಳಗೆ ನುಗ್ಗಿ ನಾಲ್ವರಿಗೆ ಕಡಿದ ಘಟನೆ ಭಾನುವಾರ ಸಂಜೆ ಪಂಬೆತ್ತಾಡಿಯಲ್ಲಿ ನಡೆದಿದೆ.
ಪಂಬೆತ್ತಾಡಿ ಮಠ ಉಮೇಶ್ ಎಂಬವರ ಮನೆಗೆ ನುಗ್ಗಿದ ಹೆಜ್ಜೇನು ಹಿಂಡು ಮನೆಯಲ್ಲಿದ್ದ ಉಮೇಶ್, ಶಿವರಾಮ, ತೇಜಮ್ಮ, ಧನುಶ್ರೀಗೆ ಕಡಿದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಂತರ ಹೊಗೆ ಹಾಕಿ ಜೇನು ನೊಣಗಳನ್ನು ಓಡಿಸಲಾಯಿತು.
ಉಪ್ಪಿನಂಗಡಿ: ಸರಣಿ ಕಳ್ಳತನ
ಉಪ್ಪಿನಂಗಡಿ: ಕಳ್ಳರ ಪಾಲಿಗೆ ಸ್ವರ್ಗವೆನಿಸಿದ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿನಿತ್ಯವೆಂಬಂತೆ ಕಳ್ಳತನ ದರೋಡೆಗಳು ನಡೆಯುತ್ತಿದ್ದು, ಭಾನುವಾರ ರಾತ್ರಿ ಕಲ್ಲೇರಿ ಎಂಬಲ್ಲಿ ಮೂರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಸಾವಿರಾರು ರುಪಾಯಿ ನಗದು ಹಣವನ್ನು ದೋಚಿದ್ದಾರೆ.
ಭಾನುವಾರ ನಸುಕಿನಲ್ಲಿ ಉಪ್ಪಿನಂಗಡಿಯ ಹಳೇ ಗೇಟಿನ ಬಳಿ ನಿವಾಸಿ ಸುಶೀಲಮ್ಮ ಎಂಬ ವೃದ್ಧೆಯ ಮನೆಗೆ ನುಗ್ಗಿ ದರೋಡೆ ಮಾಡಿದ ಪ್ರಕರಣದ ಬೆನ್ನಿಗೆಯೇ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಲ್ಲೇರಿಯಲ್ಲಿ ಸರಣಿ ಕಳ್ಳತನ ನಡೆದಿದೆ.
ಕಲ್ಲೇರಿಯ ಮುಖ್ಯ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡದ ಮೂರು ಅಂಗಡಿಗಳಿಗೆ ಕಳ್ಳರು ನುಗಿದ್ದಾರೆ. ಸಂತೋಷ್ ಎಂಬವರ ಶಾಪ್ಗೆ ನುಗ್ಗಿದ ಕಳ್ಳರು ನಗದು ಹಣವನ್ನು ದೋಚಿದ್ದು, ಸರಳಾಯ ಎಂಬವರ ಅಂಗಡಿಗೆ ನುಗ್ಗಿ 7 ಕಿಂಟ್ವಲ್ ಅಡಕೆ ಕಳವುಗೈದಿದ್ದಾರ. ಹಾಗೂ ಅಂಗಡಿಯೊಳಗಿದ್ದ ನಗದು ಹಣವನ್ನೂ ದೋಚಿದ್ದಾರೆ.
ಸೂರಪ್ಪ ಪೂಜಾರಿ ಎಂಬವರ ಫ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸಾವಿರಾರು ರುಪಾಯಿ ನಗದು ಹಣವನ್ನು ದೋಚಿದ್ದಾರೆ ಹಾಗೂ ಅಂಗಡಿಯೊಳಗಿದ್ದ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಜಾನುವಾರು ಅಕ್ರಮ ಸಾಗಾಟಕ್ಕೆ ತಡೆ
ಸುಳ್ಯ: ಅಕ್ರಮವಾಗಿ ದನಗಳನ್ನು ಪಿಕಪ್ನಲ್ಲಿ ಕೇರಳಕ್ಕೆ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ಬಂದು ಪಿಕಪ್ ತಡೆದ ಘಟನೆ ಶನಿವಾರ ಮಂಡೆಕೋಲು ಗಡಿಭಾಗದಲ್ಲಿ ನಡೆದಿದೆ.
ಮಂಡೆಕೋಲು ಗಡಿಭಾಗದಲ್ಲಿ ಸುತ್ತಾಡುತ್ತಿದ್ದ 5 ದನಗಳನ್ನು ಪಿಕಪ್ ವಾಹನದಲ್ಲಿ ಪಂಜಿಕಲ್ಲು ನರ್ಸರಿ ಬಳಿಯಿಂದ ಲೋಡ್ ಮಾಡುವ ವಿಚಾರ ತಿಳಿದು ಆ ಪ್ರದೇಶದ ಸ್ಥಳೀಯರು ಪಿಕಪ್ ತಡೆದು ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದರೆನ್ನಲಾಗಿದೆ. ಅಜಿತ್ ಪೇರಾಲು, ಮಹೇಶ್ ರೈ ಮೇನಾಲ ಮತ್ತಿತರ ಕಾರ್ಯಕರ್ತರು ಪಂಜಿಕಲ್ಲಿಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದರು.
ದೂರು ಸಲ್ಲಿಕೆ: ತಮ್ಮ ಮನೆಯ 3 ಹೋರಿ, 2 ದನಗಳನ್ನು ಬೆಳಿಗ್ಗೆ ಮೇಯಲೆಂದು ಬಿಟ್ಟಿದ್ದೆವು. ಸಂಜೆಯಾದರೂ ದನಗಳು ಬಾರದಿದ್ದುದ್ದರಿಂದ ತಮ್ಮ ಸ್ನೇಹಿತರ ಜತೆ ರಾತ್ರಿ ದನಗಳನ್ನು ಹುಡುಕಿ ಕೊಂಡು ಹೋದಾಗ ಪಂಜಿಕಲ್ಲಿನ ಗಡಿಭಾಗದಲ್ಲಿ ಪಿಕಪ್ ವಾಹನಕ್ಕೆ ನಾಲ್ಕು ಜನರು ಸೇರಿ ತುಂಬಿಸುತ್ತಿದ್ದರು. ದನ ಸಾಗಿಸಲು ಯತ್ನಿಸಿದವರು ತಮ್ಮನ್ನು ನೋಡಿ ವಾಹನವನ್ನು ಬಿಟ್ಟು ಪರಾರಿಯಾದರೆಂದು ಪೇರಾಲಿನ ಅಜಿತ್ ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಾಹನ ಹಾಗೂ ದನಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳ: ವ್ಯಕ್ತಿ ನಾಪತ್ತೆ
ಬಂಟ್ವಾಳ: ಏ.4ರಂದು ಔಷಧಿ ತರಲು ಬಂಟ್ವಾಳ ಪೇಟೆಗೆ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಮೀಯಾರುಪಲ್ಕೆ ನಿವಾಸಿ ಮಹಾಬಲ ಶೆಟ್ಟಿ (75) ನಾಪತ್ತೆಯಾದವರು. ಅವರು ಕಳೆದ ಗುರುವಾರ ಸೊಂಟ ನೋವಿಗೆ ಔಷಧಿ ತರಲು ಬಂಟ್ವಾಳಕ್ಕೆ ಹೋಗಿ ಬರುತ್ತೇನೆಂದು ಪತ್ನಿ ಶಶಿಕಲಾ ಅವರಲ್ಲಿ ಹೇಳಿ ಹೋದವರು ಮತ್ತೆ ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಗ್ರಾಮಾಂತರ ಠಾಣೆಗೆ ಅವರ ಮಗ ವಿಶ್ವನಾಥ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇವರ ಬಗ್ಗೆ ಗುರುತು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08255-235000ಗೆ ತಿಳಿಸುವಂತೆ ಎಸ್.ಐ. ಮಹೇಶ್ ಪ್ರಸಾದ್ ತಿಳಿಸಿದ್ದಾರೆ.
ಪುತ್ತೂರು: ಮದ್ಯ ಅಕ್ರಮ ದಾಸ್ತಾನು ವಶ
ಪುತ್ತೂರು: ಚುನಾವಣೆ ಸಂಬಂಧ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮದ್ಯವನ್ನು ಭಾನುವಾರ ರಾತ್ರಿ ಬಂಟ್ವಾಳ ತಾಲೂಕು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ. ಬಂಟ್ವಾಳ ತಾಲೂಕು ತೆಂಕಬೆಳ್ಳೂರು ಗ್ರಾಮದ ಧನುಪಲಾಜೆ ಎಂಬಲ್ಲಿ ನಿರ್ಮಾಣ ಹಂತದ ಮನೆಯೊಳಗೆ ಚುನಾವಣಾ ಸಂಬಂಧ ಅಕ್ರಮವಾಗಿ ಸಾಗಾಟ ನಡೆಸಲು ಬಚ್ಚಿಟ್ಟಿದ್ದ ಸುಮಾರು 60.840 ಲೀಟರ್ ವಿಸ್ಕಿ ಮತ್ತು 15.480 ಲೀಟರ್ ಬಿಯರ್ ಪತ್ತೆ ಹಚ್ಚಿದ ಅಧಿಕಾರಿಗಳು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿ ಧನುಪಲಾಜೆ ಪಡೀಲು ನಿವಾಸಿ ಭಾಸ್ಕರ ಬೆಳ್ಚಡ ಪರಾರಿಯಾಗಿದ್ದಾನೆ. ಬಂಟ್ವಾಳ ಅಬಕಾರಿ ಉಪಅಧೀಕ್ಷಕ ನಾಗೇಶ್ ಕುಮಾರ್ ನಿರ್ದೇಶನದ ಮೇರೆಗೆ ಅಬಕಾರಿ ಉಪನಿರೀಕ್ಷಕ ಅಂಗಾರ ಪಿ, ಸಿಬ್ಬಂದಿ ಕೇಶವ ನಾಯ್ಕ, ವಿನೋದ್, ನಾಗೇಶ, ಕೀರ್ತನ್ ದಾಳಿಯಲ್ಲಿ ಪಾಲ್ಗೊಂಡಿದ್ದರು. ಅಬಕಾರಿ ಉಪನಿರೀಕ್ಷಕ ಅಂಗಾರ ಪಿ. ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

