ಸರ್ಕಾರದ ಅನುದಾನ ನಂಬಿ ಮನೆ ಕೆಡವಿದರು...!
ಮೂಲ್ಕಿ: ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ 'ನಮ್ಮ ಮನೆ' ಯೋಜನೆಯಲ್ಲಿ ಸರ್ಕಾರದ ಅನುದಾನ ನಂಬಿ ಇದ್ದ ಮನೆ ಕೆಡವಿ ಮನೆ ನಿರ್ಮಾಣ ಮಾಡುತ್ತಿರುವ ಕೆಳ ವರ್ಗದ ಮಂದಿ ಅತಂತ್ರರಾಗಿದ್ದು, ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕ, ಮೂಡುಬಿದಿರೆ ತಾಲೂಕು ಘೋಷಣೆಯಾಗಿದ್ದರೂ ಕಾರ್ಯಗರ್ತವಾಗುವಲ್ಲಿ ವಿಳಂಬವಾಗಿದೆ.
ನಮ್ಮ ಮನೆ ಯೋಜನೆಯಲ್ಲಿ ಸರ್ಕಾರದಿಂದ ಸಿಗುವ ಸಬ್ಸಿಡಿ ಹಣದಿಂದ ಮನೆ ಕಟ್ಟಲು ಆರಂಭಿಸುವವರು ಇದೀಗ ಚುನಾವಣೆಯ ನೀತಿ ಸಂಹಿತೆಯಿಂದ ತೊಂದರೆಗೊಳಗಾಗಿದ್ದಾರೆ.
ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಮೂಡುಬಿದಿರೆ ಪುರಸಭೆ, ಮೂಲ್ಕಿ ನಗರ ಪಂಚಾಯಿತಿ ಹಾಗೂ 27 ಗ್ರಾಮ ಪಂಚಾಯಿತಿಗಳಿದ್ದು ಸರ್ಕಾರದ ನಮ್ಮ ಮನೆ ಯೋಜನೆಯಡಿಯಲ್ಲಿ ಪಂಚಾಯಿತಿಗಳು ಶೇಕಡಾ 22.75 ಹಾಗೂ 7.5 ಮತ್ತು7.2 ಅನುದಾನದಲ್ಲಿ ಸ್ವಂತ ಜಾಗ ಹೊಂದಿರುವವರಿಗೆ ಮನೆ ನಿರ್ಮಿಸಲು 50,000 ದಿಂದ 1 ಲಕ್ಷದ ವರೆಗೆ ಸಬ್ಸಿಡಿ ಸಹಿತ ಹಣ ಸಹಾಯ ನೀಡುತ್ತದೆ.
ಹಣಕ್ಕಾಗಿ ಕಾಯುತ್ತಿದ್ದಾರೆ: ಇದನ್ನು ನಂಬಿ ಯೋಜನೆಯ ಫಲಾನುಭವಿಗಳು ಮನೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದು, ಇದೀಗ ನೀತಿಸಂಹಿತೆಯಿಂದಾಗಿ ಪಂಚಾಯಿತಿಗಳಿಗೆ ಹಣ ಮಂಜೂರು ಮಾಡಲು ಅವಕಾಶವಿಲ್ಲ. ಹೀಗಾಗಿ ಶೀಘ್ರದಲ್ಲಿ ಮಳೆಗಾಲ ಆರಂಭವಾಗದಲಿದ್ದು, ಮನೆಯ ತಳಪಾಯ ನಿರ್ಮಿಸಿ ಸರ್ಕಾರದ ಹಣಕ್ಕೆ ಕಾಯುತ್ತಿರುವ ಫಲಾನುಭವಿಗಳು ತೊಂದರೆ ಎದುರಿಸಬೇಕಾಗಿದೆ.
ಸರ್ಕಾರದ ಅನುದಾನವಿಲ್ಲದೆ ಮನೆ ನಿರ್ಮಾಣ ಪೂರ್ಣಗೊಳಿಸುವಂತಿಲ್ಲ. ಜೊತೆಗೆ ಈಗಿರುವ ಹಳೆ ಮನೆ ಕೆಡವಿರುವುದರಿಂದ ವಾಸ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 100 ಮಂದಿ ಫಲಾನುಭವಿಗಳು, ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಹಾಗೂ ಗ್ರಾಮ ಪಂಚಾಯಿತಿಗಳು ಸೇರಿದಂತೆ ಮೂಡುಬಿದಿರೆ ಕ್ಷೇತ್ರದಲ್ಲಿ ಒಟ್ಟು 500 ಫಲಾನುಭವಿಗಳು ತೊಂದರೆಗೀಡಾಗಿದ್ದಾರೆ. ಮೇ 10 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಣ ಬಿಡುಗಡೆ ಸಾಧ್ಯವಿಲ್ಲ.
ನೀರಿನ ಸಮಸ್ಯೆ: ಕುಡಿಯುವ ನೀರಿನ ಸಮಸ್ಯೆ ಮೂಡುಬಿದಿರೆ ಕ್ಷೇತ್ರದಲ್ಲಿ ಹೆಚ್ಚಿದ್ದು, ಅಣೆಕಟ್ಟು ನಿರ್ಮಾಣ, ಅಲ್ಲಲ್ಲಿ ತಡೆಗೋಡೆ ರಚನೆಗೆ ಅನುದಾನ ಮಂಜೂರು ಮಾಡಲು ನೀತಿ ಸಂಹಿತೆ ಅಡ್ಡಿಯಾಗಿದ್ದು ಏಪ್ರಿಲ್ನಲ್ಲೇ ನೀರಿನ ಸಮಸ್ಯೆ ತಲೆದೋರಿದೆ.
ಕಿನ್ನಿಗೋಳಿ ಹಾಗೂ ಪರಿಸರದ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾರ್ಚ್ನಲ್ಲಿ ಅಂತ್ಯಗೊಳಬೇಕಿತ್ತು. ಆದರೆ, ಇನ್ನೂ ಕೆಲಸ ಬಾಕಿ ಇರುವುದರಿಂದ ಇದೀಗ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಈ ಯೋಜನೆ ಕಾರ್ಯಗತಗೊಳ್ಳುವಂತಿಲ್ಲ.
ಮೂಡುಬಿದಿರೆ ತಾಲೂಕು ಘೋಷಣೆಯಾಗಿದೆ. ಆದರೆ, ತಾಲೂಕಾಗಿ ಕಾರ್ಯತಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದ್ದು ಇನ್ನು ಚುನಾವಣೆ ಮುಗಿದು ಹೊಸ ಸರ್ಕಾರ ಬರುವವರೆಗೆ ಸಾಧ್ಯವಿಲ್ಲ. ಅಲ್ಲಿಯವರೆಗೆ ಮೂಡುಬಿದಿರೆ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿರಬೇಕು.
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಲ್ಲಿ ರು. 2 ಕೋಟಿ ಅನುದಾನದ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅನುದಾನ ಮಂಜೂರಾಗುವ ಹಂತದಲ್ಲಿದ್ದು, ಇದೀಗ ಚುನಾವಣಾ ನೀತಿ ಸಂಹಿತೆಯಿಂದಾಗಿ ಯೋಜನೆ ಅನುಷ್ಠಾನ ವಿಳಂಬವಾಗಿದೆ.
ವಿದ್ಯಾರ್ಥಿಗಳಿಗೂ ತೊಂದರೆ: ಈ ಬಾರಿಯ ಮಳೆಗಾಲದಲ್ಲಿ ಯೋಜನೆ ಜಾರಿಯಾಗುವುದು ಅಸಾಧ್ಯ. ಉಳಿದಂತೆ ಪಡಿತರ ಚೀಟಿ ಸಮಸ್ಯೆ ಹಾಗೂ ಮುಂದಿನ ತಿಂಗಳಿನಲ್ಲಿ ಶಾಲೆ ಆರಂಭಗೊಳ್ಳಲಿದ್ದು ವಿದ್ಯಾರ್ಥಿಗಳಿಗೆ ಆದಾಯ ಪತ್ರ, ಜಾತಿ ಪತ್ರ ಸೇರಿದಂತೆ ಶಾಲೆಗೆ ಪೂರಕವಾದ ಪ್ರಮಾಣ ಪತ್ರಗಳಿಗೆ ತೊಂದರೆಯುಂಟಾಗಿದೆ. ಕಂದಾಯ ಅಧಿಕಾರಿಗಳು ಚುನಾವಣೆಯ ಕರ್ತವ್ಯ ನಿರತರಾಗಿದ್ದು, ಮೇ 10 ರವರೆಗೆ ಕಂದಾಯ ಇಲಾಖೆಯ ಯಾವುದೇ ಕಾರ್ಯಗಳು ನಡೆಯುವಂತಿಲ್ಲದಂತಾಗಿದೆ.
ಚುನಾವಣೆ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕ ನೆನೆಗುದಿಗೆ ಬೀಳುವಂತಾಗಿದೆ.
ಕುಂಟುತ್ತಾ ಸಾಗುತ್ತಿದ್ದ ಯೋಜನೆಗೂ ಅಡ್ಡಿಯಾಯ್ತು ಸಂಹಿತೆ
ಕಿನ್ನಿಗೋಳಿ ಹಾಗೂ ಅಸುಪಾಸಿನ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾರ್ಚ್ನಲ್ಲಿ ಸಂಪೂರ್ಣಗೊಂಡು ಬೇಸಿಗೆ ಅವಧಿಯಲ್ಲಿ ಗ್ರಾಮಗಳಿಗೆ ನೀರು ಸರಬರಾಜು ಮಾಡಲಿದ್ದು, ಇದೀಗ ನೀತಿ ಸಂಹಿತೆಯಿಂದಾಗಿ ಕುಂಟುತ್ತಾ ಸಾಗುತ್ತಿದ್ದ ಯೋಜನೆ ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳುವ ಹಲವಾರು ಯೋಜನೆಗಳು ಹಾಗೂ ಇನ್ನು ಮುಂದಿನ ಮಳೆಗಾಲದಲ್ಲಿ ನೆರೆಯಿಂದಾಗಿ ಹೆಚ್ಚಿನ ಪ್ರದೇಶಗಳು ನೀರಿನಿಂದ ಆವೃತವಾಗಲಿದ್ದು, ಇದಕ್ಕೆ ಅಲ್ಲಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆಗಳಿಗೆ ಚುನಾವಣಾ ನೀತಿ ಸಂಹಿತೆಯಿಂದಾಗಿ ಮೇ 10ರವರೆಗೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.
-ಪ್ರಕಾಶ್ ಮೂಲ್ಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

