ದಕ್ಷಿಣ ಕನ್ನಡ

ಕುಡಿಯುವ ನೀರಿಗೂ ನೀತಿ ಸಂಹಿತೆ ಅಡ್ಡಿ!

Published On :

ಪುತ್ತೂರು: ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದ ಕಾವು ನಿಧಾನವಾಗಿ ಏರಿಕೆಯಾಗುತ್ತಿರುವುದರ ಜೊತೆಗೆ ನೀತಿ ಸಂಹಿತೆ ಕಾರಣ ಕೆಲವೊಂದು ಜನೋಪಯೋಗಿ ಕಾಮಗಾರಿಗಳು ಸಮರ್ಪಕವಾಗಿ ಕಾರ್ಯಗತಗೊಳ್ಳದ ಕಾರಣ ಮೂಲಭೂತ ಆವಶ್ಯಕತೆಗಳಿಗಾಗಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಪ್ರತಿ ಎರಡು ದಿನಗಳಿಗೊಮ್ಮೆ ಕನಿಷ್ಠ ನೀರು ನೀಡಲಾಗುತ್ತಿದೆ. ಪುರಸಭಾ ವ್ಯಾಪ್ತಿಯಲ್ಲಿನ ಸುಮಾರು 12 ಹೆಚ್ಚುವರಿ ಬೋರ್‌ವೆಲ್‌ಗಳಿಗೆ ಪಂಪ್ ಅಳವಡಿಸಿ ನೀರು ನೀಡುವುದಾಗಿ ನೂತನ ಪುರಸಭಾ ಸದಸ್ಯರು ಜನರಿಗೆ ಭರವಸೆ ನೀಡಿದ್ದರು. ಆದರೆ, ಇದೀಗ ಚುನಾವಣಾ ನೀತಿ ಸಂಹಿತೆಯಿಂದಾಗಿ ಯಾವುದೇ ಕೆಲಸಗಳನ್ನು ಮಾಡಲಾಗುತ್ತಿಲ್ಲ ಎಂದು ಸದಸ್ಯರು ಕೈ ಚೆಲ್ಲಿದ್ದಾರೆ. ಇದರಿಂದಾಗಿ ಜನರ ನೀರಿನ ಬವಣೆ ತೀವ್ರಗೊಂಡಿದೆ.
ದುರಸ್ತಿ ಸಾಧ್ಯವಿಲ್ಲ: ಕರ್ನಾಟಕ ನೀರು ಸರಬರಾಜು ಮಂಡಳಿ ವತಿಯಿಂದ ಪುತ್ತೂರಿನ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಹಲವಾರು ಕ್ರಿಯಾಯೋಜನೆಗಳನ್ನು ತಯಾರಿಸಿ ಮಂಜೂರಾತಿ ಪಡೆದುಕೊಂಡಿದ್ದರೂ ನೀತಿ ಸಂಹಿತೆ ಕಾರಣದಿಂದಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಕೊಳೆವೆ ಬಾವಿ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ ಕೆಲವು ಕಡೆಗಳಲ್ಲಿ ಪೈಪ್‌ಗಳಲ್ಲಿ ಹೂಳು ತುಂಬಿ ನೀರು ಸರಿಯಾಗಿ ಹರಿಯುತ್ತಿಲ್ಲ ಅದನ್ನು ದುರಸ್ತಿ ಪಡಿಸಲೂ ಸಾಧ್ಯವಾಗುತ್ತಿಲ್ಲ.
ಇಲ್ಲಿನ ಹರಿಜನ ಗಿರಿಜನರ ಮನೆಗಳ ದುರಸ್ತಿಗೆ ಕಾರ್ಯಾದೇಶ ನೀಡಲಾಗಿದ್ದು, ಬಹುತೇಕ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಆದರೆ, ನೀತಿಸಂಹಿತೆ ಕಾರಣದಿಂದ ಅವರಿಗೆ ಹಣ ನೀಡಲು ಅವಕಾಶವಿಲ್ಲದಿರುವುದರಿಂದ ಅನಿವಾರ್ಯವಾಗಿ ಅವರು ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಲೋ ಓಲ್ಟೇಜ್ ಸಮಸ್ಯೆ: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ನೀರಿನ ಸಮಸ್ಯೆ ಬಹಳಷ್ಟು ಹೆಚ್ಚಾಗಿದೆ. ಇಲ್ಲಿನ ವಿದ್ಯುತ್‌ನಲ್ಲಿ ಲೋ ವೋಲ್ಟೇಜ್ ಸಮಸ್ಯೆಯಿಂದಾಗಿ ಬೋರ್‌ವೆಲ್ ಪಂಪುಗಳು ಚಲಾವಣೆಯಾಗುತ್ತಿಲ್ಲ. ಆದರೆ, ಇದನ್ನು ದುರಸ್ತಿಗೊಳಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ ಎಂಬುದು ಸ್ಥಳೀಯ ಸದಸ್ಯರ ಆರೋಪ.
ಗ್ರಾಮೀಣ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಕಾಡುತ್ತಿದ್ದು, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳುವ ಭರವಸೆ ನೀಡಲು ಅವಕಾಶವಿಲ್ಲದಿರುವುದರಿಂದ ಸಾರ್ವಜನಿಕರು ಚುನಾವಣಾ ನೀತಿ ಸಂಹಿತೆ ಮುಗಿಯುವ ತನಕ ಕಾಯಬೇಕಾದ ಅನಿವಾರ್ಯತೆ. ಕೆಲವಾರು ಕಡೆಗಳಲ್ಲಿ ರಸ್ತೆ ಕಾಮಗಾರಿಗಳೂ ಸ್ಥಗಿತಗೊಂಡಿರುವ ಕಾರಣ ಸಂಚಾರಕ್ಕೆ ತೊಡಕಾಗಿದೆ.
ಪೈಪ್‌ಗೆ ನೀರಿನ ಸಂಪರ್ಕವಿಲ್ಲ: ಕೆದಂಬಾಡಿ ಗ್ರಾ.ಪಂ. ವ್ಯಾಪ್ತಿಯ ಕೆಯ್ಯೂರು ಗ್ರಾಮದ ಸಂತೋಷ್‌ನಗರ, ದಟ್ಟ, ಪಾತುಂಜ ಮತ್ತು ಸಣಂಗಳ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಜನ ಪರದಾಡುವಂತಾಗಿದೆ. ಇಲ್ಲಿನ ಪರಿಸರ ವಾಸಿಗಳಿಗೆ ಕುಡಿಯುವ ನೀರಿಗೆಂದು ಜಿಲ್ಲಾ ಪಂಚಾಯಿತಿನಿಂದ ಕೊಳವೆ ಬಾವಿ ಕೊರೆಸಿ ವಿದ್ಯುತ್ ಪಂಪ್ ಅಳವಡಿಸಲಾಗಿದೆ, ಪೈಪ್ ಸಂಪರ್ಕವೂ ಕಲ್ಪಿಸಲಾಗಿದೆ. ಆದರೆ, ಚುನಾವಣೆ ನೀತಿ ಸಂಹಿತೆಯ ಕಾರಣದಿಂದಾಗಿ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿಲ್ಲ.
ನಮ್ಮ ಸಮಸ್ಯೆಗೆ ಯಾರೂ ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಪರಿಸರದಲ್ಲಿ ಸುಮಾರು 100ಕ್ಕೂ ಮಿಕ್ಕಿ ಮನೆಗಳಿದ್ದು, ಈ ಪ್ರದೇಶದ ಬಾವಿಗಳಲ್ಲಿನ ನೀರು ಬತ್ತಿ ಹೋಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ. ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ವತಿಯಿಂದ ಜನರಿಗಾಗಿ  ಹೊಸ ಕೊಳವೆ ಬಾವಿಯನ್ನು ಕೊರೆದು ನೀರಿಗಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದರೂ ಚುನಾವಣಾ ನೀತಿ ಸಂಹಿತೆಯಿಂದಾಗಿ ಉಪಯೋಗಕ್ಕೆ ಸಿಗದಂತಾಗಿದೆ ಎಂಬುದು ಇಲ್ಲಿನ ಜನರ ಆರೋಪ.
ನೀರಿಗಾಗಿ ಹೋರಾಟ- ಎಚ್ಚರಿಕೆ: ಇಲ್ಲಿನ ಜನರು ಇದೀಗ ಕುಡಿಯುವ ನೀರನ್ನು ಬೇರೆ ಕಡೆಗಳಿಂದ ಟ್ಯಾಂಕರ್‌ಗಳಲ್ಲಿ ಹಣ ನೀಡಿ ತಾತ್ಕಾಲಿಕವಾಗಿ ನೀರು ತರಿಸಿಕೊಳ್ಳುತ್ತಿದ್ದಾರೆ. ಸಮಸ್ಯೆ ಹೀಗೆಯೇ ಮುಂದುವರಿದಲ್ಲಿ ಸ್ಥಳೀಯರು ನೀರಿಗಾಗಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
- ಸಂಶುದ್ದೀನ್ ಸಂಪ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.