ಮದುವೆ ಇಷ್ಟವಿಲ್ಲದ ಯುವಕ ನಾಪತ್ತೆ
ಶಂಕರನಾರಾಯಣ: ಹೆತ್ತವರು ನಿಗದಿ ಮಾಡಿದ್ದ ಮದುವೆಗೆ ಇಷ್ಟ ಇಲ್ಲದೇ ಯುವಕನೊಬ್ಬ ಮನೆಬಿಟ್ಟು ಹೋದ ಘಟನೆ ಕುಂದಾಪುರ ತಾಲೂಕಿನ ಹಿಲಿಯಾಣ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಣೆಯಾದ ಯುವಕ ಸಂತೋಷ ನಾಯ್ಕ (26). ಈತ ಇಲ್ಲಿನ ನಿವಾಸಿ ನಾಗ ನಾಯ್ಕ ಎಂಬವರ ಮಗ. ಆತ 'ನನ್ನನ್ನು ಯಾರೂ ಹುಡುಕೋದು ಬೇಡ, ನಾನು ಎಲ್ಲರನ್ನು ಬಿಟ್ಟು ದೂರ ಹೋಗುತ್ತಿದ್ದೇನೆ, ನಾನು ಸತ್ತ ಬಗ್ಗೆ ಯಾರೂ ಯೋಚನೆ ಮಾಡಬೇಡಿ, ನನಗೆ ಈ ಮದುವೆ ಇಷ್ಟವಿಲ್ಲ. ಅದಕ್ಕೆ ನಾನು ಈ ನಿರ್ಧಾರ ಮಾಡಿದ್ದೇನೆ' ಎಂದು ಪತ್ರವೊಂದನ್ನು ಬರೆದಿಟ್ಟು ಶುಕ್ರವಾರ ಸಂಜೆ 4 ಗಂಟೆಗೆ ಮನೆಯಿಂದ ಬೈಕಿನಲ್ಲಿ ಹೋದವನು, ಈವರೆಗೂ ಬಂದಿಲ್ಲ. ಪತ್ರದಲ್ಲಿ ಸಾಯುವ ಬಗ್ಗೆ ಬರೆದಿರುವುದರಿಂದ ಮನೆಯವರಿಗೆ ಇನ್ನಷ್ಟು ಆತಂಕ ಉಂಟಾಗಿದೆ. ಈ ಬಗ್ಗೆ ನಾಗ ನಾಯ್ಕ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಹೆಬ್ರಿ: ಮಾನಸಿಕವಾಗಿ ನೊಂದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ವರಂಗ ಗ್ರಾಮದ ನೀರಪಲ್ಕೆ ಎಂಬಲ್ಲಿ ಗುರುವಾರ ನಡೆದಿದೆ. ಉಮೇಶ ನಾಯಕ್ (35) ಮೃತರು. ಅವರ ಪತ್ನಿ 5 ವರ್ಷಗಳ ಹಿಂದೆ ಮನಸ್ತಾಪಗೊಂಡು ತನ್ನ ತಾಯಿಗೆ ಮನೆಗೆ ಹೋಗಿದ್ದರು. ಇದರಿಂದ ಮಾನಸಿಕವಾಗಿ ನೊಂದುಕೊಂಡು ವಿಪರೀತ ಮದ್ಯ ಸೇವನೆಯನ್ನು ಮಾಡುತ್ತಿದ್ದ ಉಮೇಶ್ ಗುರುವಾರ ರಾತ್ರಿ 8 ಗಂಟೆಗೆ ಮನೆಯಲ್ಲಿ ವಿಷ ಪದಾರ್ಥ ಸೇವಿಸಿದ್ದರು. ಅವರನ್ನು ತಕ್ಷಣ ಮನೆಯವರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ 4.30 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ತಮ್ಮ ಸತೀಶ್ ನಾಯಕ್ ಅವರು ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಶರೀರ ಪತ್ತೆಗೆ ಮನವಿ
ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಸಂಬಂಧಪಟ್ಟ ವಾರೀಸುದಾರರು 3 ದಿನದೊಳಗೆ ಶವವನ್ನು ತೆಗೆದುಕೊಂಡು ಹೋಗುವಂತೆ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊಂಚಾಡಿ ಪ್ರಕಾಶ್ ಎಂಬುವವರ ಪತ್ನಿ ಶಾಂತಾ(28) ಏ. 4 ರಂದು ದಾಖಲಾಗಿದ್ದು, ಏ. 12 ರಂದು ಮೃತರಾಗಿರುತ್ತಾರೆ. ಶಂಕರಪ್ಪನವರ ಮಗ ರಾಮಚಂದ್ರ(54) ಏ. 6 ರಂದು 108 ಅಂಬುಲೆನ್ಸ್ನಲ್ಲಿ ತಂದು ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಏ. 14 ರಂದು ನಿಧನ ಹೊಂದಿದ್ದಾರೆ. ಮಂಗಳೂರು ರೇಲ್ವೆ ಸ್ಟೇಶನ್ ಬಳಿಯ ರಾಜೇಶ್ (48) ಮಾ. 23 ರಂದು ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಏ. 13ರಂದು ಮೃತರಾಗಿದ್ದಾರೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಉಪ್ಪಿನಂಗಡಿ: ಇಲ್ಲಿನ ಕುಮಾರಧಾರಾ ಸೇತುವೆ ಬಳಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ಹತ್ಯಡ್ಕ ನಿವಾಸಿ ವಿಠಲ ಪೂಜಾರಿ (45) ಎಂದು ಗುರುತಿಸಲಾಗಿದೆ. ಮದ್ಯದಲ್ಲಿ ವಿಷ ಬೆರೆಸಿ ಸೇವನೆ ಮಾಡಿದ ಫಲವಾಗಿ ಸಾವನ್ನಪ್ಪಿದ್ದು, ಮೃತರ ಕಿಸೆಯಲ್ಲಿದ್ದ ವಿಳಾಸದ ಆಧಾರದಲ್ಲಿ ಗುರುತು ಪತ್ತೆ ಸಾಧ್ಯವಾಗಿದೆ. ಪತ್ನಿಯೊಂದಿಗಿನ ಭಿನ್ನಾಭಿಪ್ರಾಯದಿಂದ ಮನನೊಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ಸೆಳೆದು ಪರಾರಿ
ಮಂಗಳೂರು: ಕದ್ರಿ ಜಾನ್ ಮಾರ್ಟಿಸ್ ರಸ್ತೆ ನಿವಾಸಿ ಅಶುಂತಾ ಡಿಸೋಜರ ಕುತ್ತಿಗೆಯಿಂದ ಕರಿಮಣಿ ಸರ ಎಗರಿಸಿದ ಘಟನೆ ಶನಿವಾರ ಸಂಭವಿಸಿದೆ. ಸಂಜೆ ಕದ್ರಿ ದೇವಸ್ಥಾನ ರಸ್ತೆಯಲ್ಲಿ ಚರ್ಚ್ಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ಹೆಲ್ಮೆಟ್ ಧರಿಸಿದ್ದ ಅಪರಿಚಿತ ಇಬ್ಬರು ರು. 25 ಸಾವಿರ ಮೌಲ್ಯದ 34 ಗ್ರಾಮ್ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿಯಾಗಿದ್ದಾಗಿ ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

