ಗಣ್ಯರು ಏನಂತಾರೆ?
ಉತ್ತಮರನ್ನು ಆರಿಸಬೇಕು
ಈಗಿನ ರಾಜಕಾರಣಿಗಳು, ಸ್ಪರ್ಧಿಗಳು ನಿಸ್ಪೃಹ ಮನೋಭಾವ ಹೊಂದಿರುವುದು ಕಡಿಮೆ. ಇದ್ದವರಲ್ಲಿ ಉತ್ತಮರನ್ನು ಆರಿಸಬೇಕು. ಪ್ರಜಾಪ್ರಭುತ್ವದಲ್ಲಿ ಕೆಳಸ್ತರದವರ ಬಗ್ಗೆ ಕಾಳಜಿ ಹೊಂದಿರುವವರು ಕಡಿಮೆ. ಗೆದ್ದರೂ ಪ್ರಮಾಣಿಕ, ಆರೋಗ್ಯಕರ ಸಮಾಜ ಕಟ್ಟುವವರು ಸಿಗುವುದು ಕಷ್ಟ. ಅಭ್ಯರ್ಥಿಗಳಲ್ಲಿ ಯಾರೂ ಇಷ್ಟವಿಲ್ಲವಾದರೆ ಮತಗಟ್ಟೆಗೆ ಹೋಗದಿರುವ ಸ್ವಾತಂತ್ರ್ಯ ಮತದಾರರಿಗೆ ಇರಬೇಕು. ಮತ ನಿರಾಕರಿಸುವ ಹಕ್ಕು ಇದ್ದರೂ ಅನಾವಶ್ಯಕ ಮತಗಟ್ಟೆವರೆಗೆ ಹೋಗುವುದನ್ನು ತಪ್ಪಿಸಬೇಕು. ಬಡವರ ಬಗ್ಗೆ ನಿಜವಾದ ಕಾಳಜಿ ಯಾವುದೇ ಪಕ್ಷಕ್ಕಿಲ್ಲ. ಸಾಮಾನ್ಯರ ಅಹವಾಲಿಗೆ ಸೂಕ್ತ ವೇದಿಕೆ ಇಲ್ಲ.
ಟಿ ಪ್ರೊ.ಅಮೃತ ಸೋಮೇಶ್ವರ, ಹಿರಿಯ ಸಾಹಿತಿ.
ಉಮೇದುವಾರಿಕೆ ರದ್ದಾಗಲಿ
ನೀತಿ ಸಂಹಿತೆ ಉಲ್ಲಂಘನೆ ಎಲ್ಲ ರಾಜಕೀಯ ಪಕ್ಷಗಳು ಮಾಡುತ್ತಿವೆ. ಹಾಗಾದರೆ ನೀತಿ ಸಂಹಿತೆ ಯಾರಿಗಾಗಿ? ಇದನ್ನು ಉಲ್ಲಂಘಿಸಿದವರಿಗೆ ಹೆಚ್ಚೆಂದರೆ ಛಿಮಾರಿ ಹಾಕುತ್ತದೆ. ಮುಂದಿನ ದಿನಗಳಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದರೆ ಉಮೇದುವಾರಿಕೆ ರದ್ದುಗೊಳಿಸುವ ಪರಮಾಧಿಕಾರ ಆಯೋಗಕ್ಕೆ ನೀಡಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ವಿರುದ್ಧ ಆಪಾದನೆ ಇದ್ದು ಸಾಬೀತಾಗಿಲ್ಲದಿದ್ದರೂ ಸ್ಪರ್ಧಿಸುವುದು ಸರಿಯಲ್ಲ. ಪ್ರಕರಣ ದಾಖಲಾಗಿ ಎಫ್ಐಆರ್ ಆಗಿದ್ದರಂತು ಅಂಥವರು ಚುನಾವಣೆಗೆ ನಿಲ್ಲಲೇ ಬಾರದು. ಸುಶಿಕ್ಷಿತ, ಸ್ವಚ್ಛ, ಸಚ್ಚಾರಿತ್ರ್ಯ ವ್ಯಕ್ತಿಗಳೇ ಚುನಾವಣೆಗೆ ಸ್ಪರ್ಧಿಸಬೇಕಾದ್ದು ಇಂದಿನ ಅಗತ್ಯ.
ಟಿ ಡಾ.ಜಿ.ವಿ.ಜೋಶಿ, ಆರ್ಥಿಕ ತಜ್ಞ
ಪ್ರಜಾಪ್ರಭುತ್ವಕ್ಕೆ ಅವಮಾನ
ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಅದನ್ನು ಪಾಲಿಸಲೇಬೇಕು. ಆದರೆ ಮತವನ್ನು ಸ್ವತಂತ್ರವಾಗಿ ವಿವೇಚನೆ ಮಾಡಿ ಯಾವುದೇ ಆಮಿಷ ಪ್ರಭಾವಕ್ಕೆ ಒಳಗಾಗದೆ ಚಲಾಯಿಸಬೇಕು. ನಮ್ಮನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡುವ ನಿರ್ಣಯ ನಮ್ಮದಾಗಿರಬೇಕೇ ಹೊರತು ಯಾರದ್ದೊ ಅಲ್ಲ. ತನ್ನ ನಿರೀಕ್ಷೆಯ ಮಟ್ಟದ ಅಭ್ಯರ್ಥಿ ಇಲ್ಲ ಎನ್ನುವ ಕಾರಣಕ್ಕೆ ಮತ ಚಲಾಯಿಸದೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನ. ಪ್ರಜೆಗಳೇ ಪ್ರಭುಗಳು ಎಂಬ ಈ ವ್ಯವಸ್ಥೆಯನ್ನು ನಾವೇ ಒಪ್ಪಿಕೊಂಡಿದ್ದೇವೆ. ಅದು ದಾರಿ ತಪ್ಪುವಾಗ ಅದನ್ನು ಸರಿಪಡಿಸುವ ಕೆಲಸವನ್ನು ಪ್ರಜೆಗಳೇ ಮಾಡಬೇಕು. ಮತ ಚಲಾಯಿಸುವುದು ಅಂತಹ ಒಂದು ಕೆಲಸವಾಗಿದೆ.
ಟಿ ಪ್ರೊ.ಎಂ. ಎಲ್. ಸಾಮಗ,
ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಅಧ್ಯಕ್ಷರು.
ಮತ ಹಾಕದೆ ಟೀಕಿಸುವ ಹಕ್ಕಿಲ್ಲ
ಮತದಾನ ಎನ್ನುವುದು ಒಬ್ಬ ವ್ಯಕ್ತಿ ಹೊಂದಿರುವ ಪೂರ್ಣ ಪೌರತ್ವದ ಲಕ್ಷಣ. ಪೌರತ್ವ ಬೇಕಾದರೆ ಮತದಾನದಲ್ಲಿ ಭಾಗವಹಿಸಲೇಬೇಕು. ಸರ್ಕಾರಿ ಸೌಲಭ್ಯ ಪಡೆಯುವರೆಲ್ಲರೂ ಸರ್ಕಾರವನ್ನು ರಚಿಸುವ ಮತದಾನದಲ್ಲಿ ಭಾಗವಹಿಸಲೇಬೇಕು, ಇಲ್ಲದಿದ್ದರೆ ಸೌಲಭ್ಯ ಪಡೆಯುವ ಹಕ್ಕು ಅವರಿಗೆ ಇರುವುದಿಲ್ಲ. ಅಲ್ಲದೆ, ಮತದಾನದಲ್ಲಿ ಭಾಗವಹಿಸದವರಿಗೆ ರಾಜಕಾರಣ- ರಾಜಕಾರಣಿಗಳು ಸರಿ ಇಲ್ಲ ಎಂದು ಟೀಕಿಸುವ ನೈತಿಕ ಹಕ್ಕು ಕೂಡ ಇರುವುದಿಲ್ಲ. ಇದರ ಜೊತೆಗೆ ಮತದಾರನಿಗೆ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಪೂರ್ಣ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕಾಗಿದೆ. ಯಾವುದೇ ಪ್ರಾದೇಶಿಕ, ಮತೀಯ, ಜಾತಿಯ ಪ್ರಭಾವ, ಒತ್ತಡ, ಆಮಿಷಗಳಿಗೆ ಅವಕಾಶ ಅಲ್ಲದೆ, ಅಭ್ಯರ್ಥಿಯನ್ನು ಪೂರ್ಣ ರೀತಿಯಲ್ಲಿ ಪರೀಕ್ಷಿಸಿ ಮತದಾನ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
ಟಿ ಸುರೇಂದ್ರನಾಥ ಶೆಟ್ಟಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಎಂಜಿಎಂ ಕಾಲೇಜು, ಉಡುಪಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

