ದಕ್ಷಿಣ ಕನ್ನಡ

ನದಿ ತಿರುವಿಗೆ ಸರ್ವಪಕ್ಷ ವಿರೋಧ

Published On :

ಬೆಳ್ತಂಗಡಿ: ಗುರುವಾಯನಕೆರೆ ನಾಗರಿಕ ಸೇವಾ ಮತ್ತು ಸಹ ಸಂಘಟನೆಗಳ ಆಶ್ರಯದಲ್ಲಿ ಟ್ರಸ್ಟ್ ಸಭಾಂಗಣದಲ್ಲಿ ಬುಧವಾರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆದಿದ್ದು, ಎಲ್ಲ ಪಕ್ಷಗಳೂ ನದಿ ತಿರುವುದು ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ.
ಕರಾವಳಿಗೆ ಮಾರಕವಾದ ನೇತ್ರಾವತಿ ನದಿ ತಿರುವು ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಎಂಡೋಸಲ್ಫಾನ್ ಬಳಕೆಯನ್ನು ನಿಷೇಧಿಸಬೇಕು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ಅಭ್ಯರ್ಥಿ ಕೆ.ವಸಂತ ಬಂಗೇರ, ಸಿಪಿಐಎಂ ಅಭ್ಯರ್ಥಿ ಬಿ.ಎಂ. ಭಟ್, ಬಿಜೆಪಿ ಅಭ್ಯರ್ಥಿ ಪರ ಪಕ್ಷದ ಮುಖಂಡ ಪ್ರಭಾಕರ ಶೆಟ್ಟಿ ಉಪ್ಪಡ್ಕ ವ್ಯಕ್ತಪಡಿಸಿದರು.
ಅಭ್ಯರ್ಥಿ ಕೆ. ವಸಂತ ಬಂಗೇರ ಮಾತನಾಡಿ, ಗ್ರಾಮಗಳಲ್ಲಿ ಜನರ ಮತ್ತು ಅಧಿಕಾರಿಗಳ ಸಭೆ ಕರೆದು ಸ್ಥಳೀಯ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ಅನುಷ್ಠಾನ ಮಾಡುವುದಾಗಿ ತಿಳಿಸಿದರು. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಜನತೆಯ ನಡುವೆಯೇ ಇದ್ದೇನೆ. ಎಂದಿಗೂ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಮತದಾರನ ಗೌರವವನ್ನು ಕಾಪಾಡುವ ಕಾರ್ಯ ಮಾಡಿದ್ದೇನೆ. ಮುಂದೆಯೂ ಜನರ ಪರವಾಗಿ ಇರುತ್ತೇನೆ ಎಂದರು.
ಬಿಜೆಪಿ ಅಭ್ಯರ್ಥಿ ಪರವಾಗಿ ಆಗಮಿಸಿದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮಾತನಾಡಿ, ನೇತ್ರಾವತಿ ನದಿ ತಿರುವು ಬಗ್ಗೆ ಜಿಲ್ಲೆಯ ಪಕ್ಷದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯ ನಾಯಕರಿಗೆ ಈ ಬಗ್ಗೆ ಸ್ಪಷ್ಟವಾದ ವರದಿ ನೀಡಿದ್ದೇವೆ. ಇದನ್ನು ಪಕ್ಷ ಅಂಗೀಕರಿಸಿದೆ. ಮೂಲಭೂತ ಸೌಕರ್ಯಕ್ಕೆ ಪಕ್ಷ ಶ್ರಮಿಸುತ್ತದೆ ಎಂದರು.
ಸಿಪಿಐಎಂ ಪಕ್ಷ ಅಭ್ಯರ್ಥಿ ಬಿ.ಎಂ. ಭಟ್ ಮಾತನಾಡಿ, ಸೌಜನ್ಯ ಕೊಲೆ ಪ್ರಕರಣ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಕ್ಷ ಹೋರಾಟ ನಡೆಸುತ್ತ ಬಂದಿದೆ. ಸೌಜನ್ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಪಕ್ಷದ ಪ್ರತಿನಿಧಿಗಳು ಲೋಕಸಭೆಯಲ್ಲಿ ಧ್ವನಿ ಎತ್ತಲಿದ್ದಾರೆ ಎಂದರು. ಸಭೆಯಲ್ಲಿ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ವಿಚಾರ ಮಂಡಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ನಾರಾಯಣ ಕಿಲಂಗೋಡಿ, ವಿದ್ಯಾ ನಾಯಕ್, ಜಯಪ್ರಕಾಶ್ ಭಟ್, ಪ್ರಭಾಕರ ಇನ್ನಾ, ಕೆ.ರಮಾನಂದ ಸಾಲ್ಯಾನ್ ಇದ್ದರು.
ಅಭ್ಯರ್ಥಿಗಳ ಗೈರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳು ಕಣದಲ್ಲಿದ್ದರೂ ಮುಖಾಮುಖಿ ಕಾರ್ಯಕ್ರಮದಲ್ಲಿ ಮೂವರು ಮಾತ್ರ ಭಾಗವಹಿಸಿದ್ದರು. ಜೆಡಿಎಸ್ ಅಭ್ಯರ್ಥಿ ರಾಜಶ್ರೀ ಹೆಗ್ಡೆ, ಬಿಎಸ್ಪಿ ಅಭ್ಯರ್ಥಿ ಚೆನ್ನಕೇಶವ, ಕೆಜೆಪಿಯ ಸುಕೇಶ್ ಕುಮಾರ್ ಜೈನ್, ಜೆಡಿಯುನ ವೆಂಕಟೇಶ್ ಬೆಂಡೆ ಗೈರುಹಾಜರಾಗಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.