ದಕ್ಷಿಣ ಕನ್ನಡ

ನಿರಾಶ್ರಿತರು ಮತ್ತೆ ಶ್ರೀಲಂಕಾ ಕ್ಯಾಂಪ್‌ಗೆ

Published On :

ಮಂಗಳೂರು: ಮಂಗಳೂರಿಂದ ಸಮುದ್ರವಾಗಿ ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ಮಾನವ ಕಳ್ಳ ಸಾಗಾಟ ಜಾಲದಲ್ಲಿ ರಕ್ಷಣೆಗೊಳಗಾದವರ ಸಂಖ್ಯೆ 88ಕ್ಕೇರಿದೆ.
 ಚೆನ್ನೈ ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್ ಸಹಿತ ಪೊಲೀಸರು  ಮಂಗಳೂರಿಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಎಲ್ಲ ನಿರಾಶ್ರಿತರನ್ನು ಚೆನ್ನೈ ಪೊಲೀಸರ ಜತೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಹೊಸೂರು ವರೆಗೆ ಬಿಡಲಾಯಿತು. ಅಲ್ಲಿಂದ ತಮಿಳುನಾಡು ಪೊಲೀಸರು ತಮ್ಮ ವಾಹದಲ್ಲಿ ನಿರಾಶ್ರಿತರ ಕ್ಯಾಂಪ್‌ಗೆ ತಲುಪಿಸುವರು.
 ಶ್ರೀಲಂಕಾ ತಮಿಳು ನಿರಾಶ್ರಿತರಿಗೆ ಆಸ್ಟ್ರೇಲಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ತಮಿಳುನಾಡಿನ ಚನ್ನೈ, ಗುಮ್ಮಡಿಪುಂಡಿ, ಮಂಡಪಂ, ಭವಾನಿ ಸಾಗರ್, ಬಾನಾವರಮ್, ಕುಡಿಯತಂಮಂ, ಪೆತ್ತಿಕುಪ್ಪಂ ಶ್ರೀಲಂಕಾ ನಿರಾಶ್ರಿತ ಶಿಬಿರಗಳಲ್ಲಿದ್ದವರಿಂದ ತಲಾ 1 ಲಕ್ಷ ಪಡೆದು ಆಸ್ಟ್ರೇಲಿಯಾಕ್ಕೆ ಸಾಗಿಸುತ್ತಿದ್ದರು.
 29 ಗಂಡಸರು, 22 ಮಹಿಳೆಯರು, 19 ಹುಡುಗಿಯರು, 18 ಹುಡುಗರಿದ್ದರು. 5 ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 ಆರೋಪಿಗಳು ಗುಮ್ಮಂಡಿಪುಂಡಿಯ ಡೊರಿಂಗ್ಟನ್ (40), ತಿರುವಲ್ಲೂರು ಎಸ್.ಎಲ್.ಆರ್. ಕ್ಯಾಂಪ್‌ನ ನಿಕ್ಸನ್ ಡಾರ್ವಿನ್ (38), ಪಣೈಕುಲಂ ಕಣ್ಣನ್ (31), ಈತ ಬೆಂಗ್ರೆಯಲ್ಲಿ ಸುಂದರ ಎಂಬವರ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ.
 ಮಂಡಪಮ್ ಮುಕಂ ಕ್ಯಾಂಪ್‌ನ ಕಾರ್ತಿಕೇಯನ್ (40), ಶ್ರೀಲಂಕಾ ನಿರಾಶ್ರಿತ (ನಂ 595 ) ತವರಸ (45). 2012ರ ಸೆಂಪ್ಟಂಬರ್‌ನಲ್ಲಿ ಶ್ರೀಲಂಕಾ ತಮಿಳು ನಿರಾಶ್ರಿತರನ್ನು ಮಾನವ ಕಳ್ಳ ಸಾಗಣೆ ಮಾಡುವ ಸಂದರ್ಭಧಲ್ಲಿ 97 ಮಂದಿಯನ್ನು ರಕ್ಷಿಸಲಾಗಿದ್ದು, ಈ ಪ್ರಕರಣದಲ್ಲಿ ತವರಸ ಆರೋಪಿ. ಈತ ಶ್ರೀಲಂಕಾ ಉಗ್ರ ಸಂಘಟನೆ ಟೆಲೋ ದ ಶಸ್ತ್ರಾಸ್ತ್ರ ತರಬೇತುದಾರನಾಗಿ ಕೆಲಸಮಾಡಿದ್ದ. ಆರೋಪಿಗಳನ್ನು ಬಂಧಿಸಿ ಅವರಿಂದ 25,940 ಮತ್ತು 5 ಮೊಬೈಲ್‌ಗಳು, ತಮಿಳು ನಿರಾಶ್ರಿತರ 2 ಐಡಿ ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 ಕೇರಳ ಮಂಜೇಶ್ವರ ಉದ್ಯಾವರ ಚಂದ್ರನಾಥ ಎಂಬವರಿಂದ 18 ಲಕ್ಷಕ್ಕೆ ಬೋಟ್ ಖರೀದಿಸಿದ್ದು, 2 ಲಕ್ಷ ಮುಂಗಡ ನೀಡಿದ್ದರು. ಆಸ್ಟ್ರೇಲಿಯಾಕ್ಕೆ ತೆರಳಲು ಆಹಾರ ಸಾಮಾಗ್ರಿಗಳನ್ನು ಬೋಟ್‌ನಲ್ಲಿರಿಸಿದ್ದರು. 500 ಕಿಲೋ ಅಕ್ಕಿ, 4ಸಾವಿರ ಲೀಟರ್ ನೀರಿನ ಕ್ಯಾನ್‌ಗಳಿದ್ದವು.
ಪೊಲೀಸರ ಮಾನವೀಯತೆ: ಆಸ್ಟ್ರೇಲಿಯಾಕ್ಕೆ ತೆರಳಲೆಂದು ತಲಾ 1 ಲಕ್ಷ ತಂದಿದ್ದರು. ಅದನ್ನು ಏಜೆಂಟ್‌ಗಳಿಗೆ ನೀಡಬೇಕಿತ್ತು. ಅಷ್ಟರಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಪೊಲೀಸರು ಮಾನವೀಯ ನೆಲೆಯಲ್ಲಿ ನಿರಾಶ್ರಿತರ ಹಣವನ್ನು ಅವರಿಗೇ ನೀಡಿ ವಾಪಸ್ ಕಳುಹಿಸಿದರು.  ಆರೋಪಿಗಳ ವಿರುದ್ಧ ವಿದೇಶಿ ಕಾಯ್ದೆ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದರು. ವಂಚನೆ ಪ್ರಕರಣವಾದ್ದರಿಂದ ಹಣವನ್ನು ಮುಟ್ಟುಗೋಲು ಹಾಕಿ ಕೋರ್ಟ್ ಮೂಲಕ ಬಿಡಿಸಿಕೊಳ್ಳಬೇಕಿತ್ತು. ಆದರೆ ಪೊಲೀಸರು ನಿರಾಶ್ರಿತರ ಹಣದ ಲೆಕ್ಕ ತೋರಿಸಲಿಲ್ಲ.
 ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಡಾ. ಎಚ್.ಎನ್. ವೆಂಕಟೇಶ್ ಪ್ರಸನ್ನ, ಕರಾವಳಿ ಕಾವಲು ಪಡೆ ಇನ್‌ಸ್ಪೆಕ್ಟರ್ ಗಂಗೀರೆಡ್ಡಿ ನೇತೃತ್ವದಲ್ಲಿ ಸಿಸಿಬಿ, ಡಿಸಿಐಬಿ, ಬೆಳ್ತಂಗಡಿ, ಕರಾವಳಿ ಕಾವಲು ಪಡೆ ಪೊಲೀಸರು ಭಾಗವಹಿಸಿದ್ದರು. ನಾಗರಿಕರಂತೆ ಬದುಕಲು ಸಾಧ್ಯವಾಗದೆ ದೇಶ ಬಿಡಲು ನಿರ್ಧರಿಸಿದ್ದ ನಿರಾಶ್ರಿತರು ಬೋಟ್ ಮೂಲಕ ಆಸ್ಟ್ರೇಲಿಯಾಕ್ಕೆ ಹೋಗುವ ಭರವಸೆ ಹೊಂದಿದ್ದರು. ಆಸ್ಟ್ರೇಲಿಯಾಕ್ಕೆ ಸಮೀಪದ ದ್ವೀಪಕ್ಕೆ ತೆರಳಿ ಬಳಿಕ ಅಲ್ಲಿಂದ ಸಣ್ಣ ಬೋಟ್‌ಗಳಲ್ಲಿ ಒಳನುಸುಳುತ್ತಿದ್ದರು ಎನ್ನುತ್ತಾರೆ ಪೊಲೀಸರು.


ವಿವಾಹಿತೆ ಜತೆ ಯುವಕ ಪ್ರೇಮ
ಕಳೆದ ಬಾರಿ ಮಾನವ ಕಳ್ಳ ಸಾಗಾಟ ವೇಳೆ ಎಂಬಿಎ ಕಲಿತು ನಿರುದ್ಯೋಗಿಯಾಗಿದ್ದ ಯುವಕನನ್ನು ರಕ್ಷಿಸಲಾಗಿತ್ತು. ಆತ ಮತ್ತೆ ನಿರಾಶ್ರಿತರ ಕೇಂದ್ರ ಸೇರಿದ್ದ. ಆದರೆ ಕಳೆದ ಬಾರಿ ಕಾರ್ಯಾಚರಣೆ ವೇಳೆ ಮಂಗಳೂರಲ್ಲಿ ತಂಗಿದ್ದ ವೇಳೆ ಯುವಕನಿಗೆ ವಿವಾಹಿತೆ ಜತೆ ಪ್ರೇಮಾಂಕುರವಾಗಿತ್ತು. ಆಕೆಯ ಗಂಡನೂ ಜತೆಗಿದ್ದ. ಆದರೆ ಈ ಬಾರಿ ಮಾತ್ರ ಆಕೆ ಗಂಡನನ್ನು ಬಿಟ್ಟು ಯುವಕನ ಜತೆ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದಳು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.