ದಕ್ಷಿಣ ಕನ್ನಡ

ಮಗಳ ಮನೆಗೆಂದು ಹೋದ ಅಪ್ಪ ನಾಪತ್ತೆ

Published On :

ಮಂಗಳೂರು: ಬೆಂಗಳೂರಿನ ಮಗಳ ಮನೆಗೆಂದು ತೆರಳಿದ್ದ ಕಂದಾವರಬೈಲು, ಕಿನ್ನಿಕಂಬಳ ನಿವಾಸಿ  ಪೀಟರ್ ಪಿಂಟೊ (54) ಕಾಣೆಯಾಗಿದ್ದಾರೆ. ಏ.26ರಂದು ರಾತ್ರಿ 8 ಗಂಟೆ ಪೀಟರ್ ಪಿಂಟೋ ತನ್ನ ಮಗಳು ಬೆಂಗಳೂರಿನಲ್ಲಿರುವ ರೇಶ್ಮಾ ಪಿಂಟೋ ಮನೆಗೆ ಹೋಗುವುದಾಗಿ ಹೇಳಿ ಮನೆ ಬಿಟ್ಟಿದ್ದರು. ಗುರುಪುರ ಕೈಕಂಬಕ್ಕೆ ಹೋಗಿರುವುದನ್ನು ನೋಡಿದ್ದಾರೆ. ಆದರೆ 3 ದಿನ ಕಳೆದರೂ ಬೆಂಗಳೂರು ತಲುಪಿಲ್ಲ. ಈ ಬಗ್ಗೆ ಪತ್ನಿ ಐರಿನ್ ಪಿಂಟೊ ಬಜಪೆ ಪೊಲೀಸರಿಗೆ ದೂರು ನೀಡಿದ್ದಾರೆ.

ಜುಗಾರಿ: 6 ಮಂದಿಯ ಬಂಧನ
ಸುಳ್ಯ: ಬೆಳ್ಳಾರೆ ಗ್ರಾಮದ ಮೂಡಾಯಿತೋಟದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ಸ್ಥಳೀಯ ರಮೇಶ, ಶಂಕರ, ಐತ, ಸುಂದರ, ರಾಜೇಶ, ಉಮೇಶ ಎಂಬವರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಆಟಕ್ಕೆ ಬಳಸಲಾದ ರು. 1,040 ಹಣ ಮತ್ತು ಇಸ್ಪೀಟ್ ಎಲೆಯನ್ನು ವಶಪಡಿಸಿಕೊಳ್ಳಲಾಗಿದೆ.

ಗ್ಲೇರಿ ಪ್ಲಾಸಿಡ್ ಫೆರ್ನಾಂಡೀಸ್‌ಗೆ ಚಿನ್ನದ ಪದಕ
ಬಂಟ್ವಾಳ: ಬೆಳಗಾವಿ ಸರ್.ಎಂ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಇತ್ತೀಚೆಗೆ ನಡೆದ 12ನೇ ಘಟಿಕೋತ್ಸವದಲ್ಲಿ ಬಾಪೂಜಿ ತಾಂತ್ರಿಕ ಕಾಲೇಜು ದಾವಣಗೆರೆ ಇಲ್ಲಿನ ಬಯೋ ಮೆಡಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಗ್ಲೇರಿ ಪ್ಲಾಸಿಡ್ ಫೆರ್ನಾಂಡೀಸ್‌ಗೆ ಪ್ರಥಮ ರ್ಯಾಂಕ್ ಸರ್ಟಿಫಿಕೇಟ್ ಹಾಗೂ ಚಿನ್ನದ ಪದಕವನ್ನು ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಪತಿ ಡಾ. ಹಂಸರಾಜ್ ಭಾರದ್ವಾಜ್ ಪ್ರದಾನ ಮಾಡಿದರು. ಇವರು ದೀಪಿಕಾ ಪ್ರೌಢಶಾಲೆ ಮೊಡಂಕಾಪು ವಿನ ಹಳೆ ವಿದ್ಯಾರ್ಥಿಯಾಗಿದ್ದು, ಶಿಕ್ಷಕಿ ಗ್ಲೇಡಿಸ್ ಪಾಯ್ಸ್‌ರ ಪುತ್ರರಾಗಿದ್ದಾರೆ.

ಪಿರಿಯಾಪಟ್ಟಣ: ಮೇ 25ರಂದು ಚುನಾವಣೆ
ಬೆಂಗಳೂರು: ಪ್ರಚಾರ ಸಂದರ್ಭದಲ್ಲಿ ಹೃದಯಾಘಾತದಿಂದ ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡ ನಿಧನರಾದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಲಾಗಿದೆ. ಇದೊಂದು ಕ್ಷೇತ್ರಕ್ಕೆ ಮಾತ್ರ ಹೊಸ ವೇಳಾಪಟ್ಟಿ ತಯಾರಿಸಿರುವ ಆಯೋಗ, ಮೇ 25ರಂದು ಚುನಾವಣೆಗೆ ದಿನಾಂಕ ನಿಗದಿಗೊಳಿಸಿದೆ. ಕಣದಲ್ಲಿರುವ ಇತರೆ ಪಕ್ಷಗಳ ಅಭ್ಯರ್ಥಿಗಳ ಸಿಂಧುತ್ವ ಹಾಗೆಯೇ ಮುಂದುವರಿಯಲಿದ್ದು, ಕೇವಲ ಬಿಜೆಪಿ ಮಾತ್ರ ಹೊಸದಾಗಿ ನಾಮಪತ್ರ ಸಲ್ಲಿಸಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಉಳಿದ ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನ (ಮೇ 8ರಂದು ) ಇಲ್ಲಿ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಮೇ 9ರಂದು ಪರಿಶೀಲನೆ ನಡೆಯುತ್ತದೆ. ನಾಮಪತ್ರ ಹಿಂತೆಗೆದುಕೊಳ್ಳುವುದಕ್ಕೆ ಮೇ 11 ಕೊನೆಯದಿನವಾಗಿರುತ್ತದೆ.

ರೈಲಿಗೆ ತಾತ್ಕಾಲಿಕ ನಿಲುಗಡೆ
ಮಂಗಳೂರು: ಕೊಯಂಬತ್ತೂರು-ಮಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲಿಗೆ (ನಂ.56323/56324) ನಾದಪುರಂ ಮತ್ತು ಮುಕ್ಕಾಲಿಯಲ್ಲಿ ಮೇ 1ರಿಂದ ಜು.31ರ ವರೆಗೆ 3 ತಿಂಗಳ ವರೆಗೆ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ. ನಂ.56323 ಕೊಯಂಬತ್ತೂರು-ಮಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲು ನಾದಪುರಂ ಮಾರ್ಗದಿಂದ ಮಧ್ಯಾಹ್ನ 2.27ಕ್ಕೆ ಮುಕ್ಕಾಲಿಯಿಂದ 2.31ಕ್ಕೆ ಹೊರಡಲಿದೆ. ನಂ.56324 ಮಂಗಳೂರು-ಕೊಯಂಬತ್ತೂರು ಫಾಸ್ಟ್ ಪ್ಯಾಸೆಂಜರ್ ಮುಕ್ಕಾಲಿಯಿಂದ ಬೆಳಗ್ಗೆ 11.47, ನಾದಪುರಂ ಮಾರ್ಗದಿಂದ 11.51ರಿಂದ ಹೊರಡಲಿದೆ ಎಂದು ರೇಲ್ವೆ ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.