ದಕ್ಷಿಣ ಕನ್ನಡ

ಗ್ರಾಮ ಪಂಚಾಯಿತಿ ಉಪಚುನಾವಣೆ; 46 ಸ್ಥಾನಗಳ ಫಲಿತಾಂಶ ಪ್ರಕಟ

Published On :

ಮಂಗಳೂರು: ದ.ಕ.ಜಿಲ್ಲೆಯ 5 ತಾಲೂಕುಗಳ ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿಯಿದ್ದ 57 ಸ್ಥಾನ ಪೈಕಿ 46 ಸ್ಥಾನಕ್ಕೆ ನಡೆದ ಉಪಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ. ಉಳಿದ 11 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.
ಮಂಗಳೂರು ತಾಲೂಕಲ್ಲಿ ಪಾಲಡ್ಕ-ಸಂಜೀವಿ, ಪುತ್ತಿಗೆ-ವನಿತಾ ನಾಯ್ಕ, ಗಿರೀಶ್ ಕುಮಾರ್, ಮಲ್ಲೂರು-ಜೆನೆಟ್ ಡಿಸೋಜ, ಪಡು ಕೊಣಾಜೆ-ರಾಜೇಶ್ ಸುವರ್ಣ, ಮೆನ್ನಬೆಟ್ಟು-ಕೃಷ್ಣಪ್ಪ, ಚೇಳ್ಯಾರು-ಪುಷ್ಪ, ಬಜ್ಪೆ-ಮನ್ಸೂರ್ ಆಲಿ, ತೋಕೂರು-ಮಹಮ್ಮದ್ ರಫೀಕ್, ಆದ್ಯಪಾಡಿ-ಸುಚಿತ್ರ, ಉಳಾಯಿಬೆಟ್ಟು-ಮಮತ, ಬೊಂಡಂತಿಲ-ಕಸ್ತೂರಿ, ಅಡ್ಯಾರು-ಖತೀಜ, ಹರೇಕಳ-ದೇವಕಿ, ಬೋಳಿಯಾರು-ಕಮಲ, ಕೊಣಾಜೆ-ರೇಶ್ಮ, ಬೆಳ್ಮ-ಇಸ್ಮಾಯಿಲ್, ಸೋಮೇಶ್ವರ-ಶಾಲಿನಿ.
ಮೂಲ್ಕಿ ವರದಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಕೃಷ್ಣಪ್ಪ ಜಯ ಗಳಿಸಿದ್ದಾರೆ.
ಗ್ರಾಮ ಪಂಚಾಯಿತಿಯ 2ನೇ ಕ್ಷೇತ್ರದ ಅಭ್ಯರ್ಥಿಯ ಸತತ ಗೈರು ಹಾಜರಿಯಿಂದ ತೆರವಾದ ಸ್ಥಾನಕ್ಕೆ ಆ.4ರಂದು ಚುನಾವಣೆ ನಡೆದಿತ್ತು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆ. ಹರೀಶ್ ರಾಣ್ಯ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕೃಷ್ಣಪ್ಪ ಸ್ಪರ್ಧೆಯಲ್ಲಿದ್ದರು. ಹರೀಶ್ ತಮ್ಮ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಕಾಂಗ್ರೆಸ್ ಸಚಿವ ಕೆ. ಅಭಯಚಂದ್ರ ಜೈನ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಸಾಲ್ಯಾನ್ ಪೈಯೊಟ್ಟು ಭಾವಚಿತ್ರ ಪ್ರಕಟಿಸಿದ್ದರ ಬಗ್ಗೆ ಬಿಜೆಪಿಯವರು ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದರು.
ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರದ ವಿಚಾರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಹಿನ್ನಡೆ ಉಂಟುಮಾಡಿದೆ. ಕೃಷ್ಣಪ್ಪ 462 ಮತ ಪಡೆದರೆ, ಹರೀಶ್ 330 ಮತಗಳನ್ನು ಪಡೆದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಒಟ್ಟು 21 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 14 ಹಾಗೂ ಕಾಂಗ್ರೆಸ್ ಬೆಂಬಲಿತ 7 ಸದಸ್ಯರಿದ್ದಾರೆ.
ಬೆಳ್ತಂಗಡಿ ವರದಿ: ತಾಲೂಕಿನ 6 ಗ್ರಾಮ ಪಂಚಾಯಿತಿಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ ಬಿಜೆಪಿ 1 ಸ್ಥಾನ ಗೆದ್ದುಕೊಂಡಿದೆ.
ಧರ್ಮಸ್ಥಳ ಹಾಗೂ ಕಳಿಯ ಗ್ರಾ.ಪಂ.ನ ತಲಾ 1 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು. ಉಳಿದ 4 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮಾಲಾಡಿ ಗ್ರಾ.ಪಂ.ನ 1ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ರಾಮಚಂದ್ರ ಪ್ರಭು ಆಯ್ಕೆಯಾದರು. ಮಾಲಾಡಿ ಗ್ರಾ.ಪಂ.ನ 2ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಅಳದಂಗಡಿ ಗ್ರಾ.ಪಂ.ನ ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಕೇಶವತಿ ಆಯ್ಕೆಯಾಗಿದ್ದಾರೆ. ಉಜಿರೆ ಗ್ರಾ.ಪಂ.ನ 2ನೇ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಪ್ರಭಾತ್ ಕುಮಾರ್ ಆಯ್ಕೆಯಾಗಿದ್ದಾರೆ.
ಪುತ್ತೂರು ವರದಿ: ತಾಲೂಕಿನ 4 ಗ್ರಾಮ ಪಂಚಾಯಿತಿಗಳ 5 ಸ್ಥಾನಗಳಿಗೆ ಉಪಚುನಾವಣೆಯಲ್ಲಿ ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ ಮತ್ತು ಎಸ್‌ಡಿಪಿಐಗೆ ತಲಾ ಒಂದೊಂದು ಸ್ಥಾನ ಲಭಿಸಿದೆ. ಎಣಿಕೆ ಕಾರ್ಯ ಪುತ್ತೂರು ತಾಲೂಕು ಕಚೇರಿಯಲ್ಲಿ ಬುಧವಾರ ನಡೆಯಿತು. 11 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.
ಅರಿಯಡ್ಕ ಗ್ರಾ.ಪಂ.ನ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯ ಪೈಕಿ ಅರಿಯಡ್ಕ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತೆ ಯಶೋಧಾ 503 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿಯ ನಾಗಮ್ಮ ಅವರನ್ನು 13 ಮತಗಳ ಅಂತರದಿಂದ ಸೋಲಿಸಿದ್ದಾರೆ. ನಾಗಮ್ಮಗೆ 400 ಮತಗಳು ಲಭಿಸಿವೆ. 17 ಮತಗಳು ಅಸಿಂಧುಗೊಂಡಿವೆ.  
ಮಾಡ್ನೂರು ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತೆ ರತ್ನಾವತಿ 347 ಮತ ಪಡೆದು ಜಯಶಾಲಿಯಾಗಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತೆ ಸುಮತಿಯನ್ನು 17 ಮತ ಅಂತರದಿಂದ ಸೋಲಿಸಿದ್ದಾರೆ. ಸುಮತಿಗೆ 330 ಮತ ಲಭಿಸಿವೆ. 9 ಮತಗಳು ಅಸಿಂಧುಗೊಂಡಿವೆ.
ಸವಣೂರು ಗ್ರಾ.ಪಂ.ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆದಿದ್ದು, ಎಸ್‌ಡಿಪಿಐ ಬೆಂಬಲಿತೆ ಸಬೀನಾ 305 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ಇವರ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಬೆಂಬಲಿತೆ ವಾರಿಜಾ 296 ಮತಗಳು ಮತ್ತು ಬಿಜೆಪಿ ಬೆಂಬಲಿತೆ ರೇಖಾ 294 ಮತ ಪಡೆದು ಸೋಲನುಭವಿಸಿದ್ದಾರೆ. 4 ಮತಗಳು ಅಸಿಂಧುಗೊಂಡಿವೆ.
ಕಬಕ: ಕಬಕ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತೆ ಸವಿತಾ 408 ಮತ ಪಡೆದು ಗೆಲವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತೆ ಶಶಿಕಲಾ ಅವರು 408 ಮತಗಳನ್ನು ಪಡೆದಿದ್ದು, 41 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. 8 ಮತಗಳು ಅಸಿಂಧುಗೊಂಡಿವೆ.
ಕಾಣಿಯೂರು: ಕಾಣಿಯೂರು ಗ್ರಾ.ಪಂ.ನಲ್ಲಿ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತೆ ಸುಮಿತ್ರಾ ಕೆ. 383 ಮತ ಪಡೆದು ಜಯಗಳಿಸಿದ್ದಾರೆ. ಇವರು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತೆ ಪುಷ್ಪಾವತಿಯನ್ನು 89 ಮತಗಳ ಅಂತರದಿಂದ ಸೋಲಿಸಿದರು. ಪುಷ್ಪಾವತಿಗೆ 294 ಮತಗಳು ಲಭಿಸಿವೆ.  9 ಮತಗಳು ಅಸಿಂಧುಗೊಂಡಿವೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳನ್ನು ಬಿಜೆಪಿಯಿಂದ ಕಸಿದುಕೊಂಡಿದ್ದು, ಕಳೆದ ಬಾರಿ ಕಬಕ, ಅರಿಯಡ್ಕ ಮತ್ತು ಮಾಡ್ನೂರು ಕ್ಷೇತ್ರ ಬಿಜೆಪಿಯ ವಶದಲ್ಲಿತ್ತು.
ಸವಣೂರು ಮತ್ತು ಕಾಣಿಯೂರು ಕ್ಷೇತ್ರ  ಹಿಂದಿನ ಬಾರಿಯೂ ಎಸ್‌ಡಿಪಿಐ ಮತ್ತು ಬಿಜೆಪಿಯ ವಶದಲ್ಲಿದ್ದು, ಈ ಎರಡೂ ಪಕ್ಷಗಳನ್ನು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ತಹಸೀಲ್ದಾರ್ ಕುಳ್ಳೇಗೌಡ ಎಂ.ಟಿ. ಮತ ಎಣಿಕೆ ಉಸ್ತುವಾರಿ ವಹಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.