ದಕ್ಷಿಣ ಕನ್ನಡ

ಪಾಲಿ ಕ್ಲಿನಿಕ್‌ನಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ: ಖಾದರ್

Published On :

ಮಂಗಳೂರು: ಜಿಲ್ಲೆ ಸರ್ಕಾರಿ ಆಸ್ಪತ್ರೆಯ ಒತ್ತಡ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮತ್ತು ಎಲ್ಲ ವರ್ಗದ ಜನರಿಗೂ ಉಚಿತ ಚಿಕಿತ್ಸೆ ನೀಡಲು ಮಂಗಳೂರು ಮತ್ತು ಉಳ್ಳಾಲದಲ್ಲಿ ಮಲ್ಟಿ ಸ್ಪೆಶಾಲಿಟಿ ಪಾಲಿ ಕ್ಲಿನಿಕ್‌ಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
 ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿ 8.6 ಕೋಟಿ ವೆಚ್ಚದಲ್ಲಿ ಮಂಗಳೂರಲ್ಲಿ 20 ಕೋಟಿ ವೆಚ್ಚದಲ್ಲಿ ಪಾಲಿ ಕ್ಲಿನಿಕ್ 4 ತಿಂಗಳ ಒಳಗೆ ಆರಂಭಿಸಲಾಗುವುದು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಈ ಸೌಲಭ್ಯ ಇತ್ತು, ಈ ಬಾರಿ ನಗರ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಬೆಂಗಳೂರು, ಬಾಗಲಕೋಟೆ, ಮೈಸೂರಲ್ಲಿಯೂ ಸರ್ಕಾರಿ ಕ್ಲಿನಿಕ್ ತೆರೆಯಲಾಗುವುದು ಎಂದರು.
 ಸ್ತ್ರೀರೋಗ, ಮಕ್ಕಳ ರೋಗ, ಹೃದಯರೋಗ ತಜ್ಞರು ಸಹಿತ ನಾಲ್ವರು ವೈದ್ಯರ ಸೇವೆ ಬಳಸಿಕೊಳ್ಳಲಾಗುವುದು. ಖಾಸಗಿ ಕ್ಲಿನಿಕ್‌ಗಳಿಗೆ ಸ್ಪರ್ಧೆ ಒಡ್ಡುವಂತೆ ರೂಪಿಸಲಾಗುವುದು. 60 ಸಾವಿರ ಜನಸಂಖ್ಯೆಗೆ ಒಂದು ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುವುದು. ಕಂಪ್ಯೂಟರೀಕೃತ ಪ್ರಯೋಗಾಲಯವಿದ್ದು ರಕ್ತ ಸಹಿತ ಇನ್ನಿತರ ಪರೀಕ್ಷೆ ಉಚಿತವಾಗಿ ಮಾಡಲಾಗುವುದು ಎಂದರು.
ಮುಷ್ಕರ ರದ್ದು ಆದೇಶ: 194 ಆರೋಗ್ಯ ಕವಚ ಸಿಬ್ಬಂದಿಗಳ ಅಮಾನತು ರದ್ದುಗೊಳಿಸಲು ಸೂಚಿಸಲಾಗಿದೆ. ಮುಷ್ಕರ ರದ್ದುಗೊಳಿಸುವಂತೆ ಹೈಕೋರ್ಟ್ ಸೂಚಿಸಿದ್ದು, ಆ.14ರಂದು ಸರ್ಕಾರ ಈ ಬಗ್ಗೆ ಸಭೆ ನಡೆಸಿದ ಬಳಿಕ ಆ.19ರಂದು ಕೋರ್ಟ್‌ಗೆ ವರದಿ ನೀಡುವಂತೆ ಸೂಚಿಸಿದೆ ಎಂದರು.
ಸಮಾಜ ವಿದ್ರೋಹಿಗಳ ಮತ ಬೇಡ!
ದನ ಕಳ್ಳ ಸಾಗಣಿಕೆದಾರರ ಪರವಾಗಿ ಸಚಿವರು ಮಾತನಾಡುತ್ತಿದ್ದಾರೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಸಿಟ್ಟಿಗೆದ್ದ ಖಾದರ್, 'ಸಮಾಜ ದ್ರೋಹಿಗಳಿಗೆ ಯಾವತ್ತೂ ಬೆಂಬಲ ಇಲ್ಲ. ಅಂತವರ ಮತಗಳು ನನಗೆ ಬೇಡ. ಬಿಜೆಪಿ ಬೆಂಬಲಿಸಿದವರಲ್ಲಿ ಸಮಾಜ ದ್ರೋಹಿಗಳು, ಅಪರಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು' ಎಂದು ಕುಟುಕಿದರು.
ಸಚಿವರಿಗೆ ಹೀಗೆ? ಜನರ ಪಾಡೇನು?
ಸಮಾಜದ್ರೋಹಿಗಳನ್ನು ಹತ್ತಿಕ್ಕಿ ಇಲ್ಲಾ ಜಾಗ ಖಾಲಿ ಮಾಡಿ ಎಂದು ಖಾದರ್ ಬರೆದ ಪತ್ರ ಪೊಲೀಸ್ ಕಮಿಷನರ್‌ಗೆ ತಲುಪಿಲ್ಲ ಎಂದು ಹೇಳಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ' ಸಚಿವರ ಪತ್ರವೇ ಪೊಲೀಸ್ ಕಮಿಷನರ್‌ಗೆ ತಲುಪಲು ಇಷ್ಟು ಸಮಯ ಬೇಕಾದರೆ ಜನಸಾಮಾನ್ಯರ ಪಾಡೇನು' ಎಂದು ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೊ, ಎನ್.ಎಚ್.ಎಂ. ಆಧಿಕಾರಿಗಳಾದ ನಾರಾಯಣ, ನಿಶ್ಚಿತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.