ದಕ್ಷಿಣ ಕನ್ನಡ

ಗ್ಯಾಸ್ ಪೈಪ್‌ಲೈನ್: ಸಭೆ ಬಹಿಷ್ಕರಿಸಿದ ಗ್ರಾಮಸ್ಥರು

Published On :

ಬೆಳ್ತಂಗಡಿ: ಉದ್ದೇಶಿತ ಎಚ್‌ಪಿಸಿಎಲ್ ಗ್ಯಾಸ್ ಪೈಪ್‌ಲೈನ್ ಹಾದಿಯಲ್ಲಿನ ಕುಟುಂಬಗಳು ಈ ಬಗ್ಗೆ ಕರೆದಿದ್ದ ಸಭೆಯನ್ನು ಬಹಿಷ್ಕರಿಸಿದ ಘಟನೆ ಶನಿವಾರ ನೆರಿಯದಲ್ಲಿ ನಡೆದಿದೆ.
'ಯೋಜನೆಯ ಅನುಷ್ಠಾನಕ್ಕೆ ಬಿಡುವುದಿಲ್ಲ' ಎಂದು ಸ್ಥಳೀಯರು ಪಟ್ಟು ಹಿಡಿದಿದ್ದು, ಸ್ಥಳದಲ್ಲಿ ಭಾರಿ ಗೊಂದಲ, ವಾದ- ವಿವಾದ ತಾರಕ್ಕೇರಿ ಬಳಿಕ ಶಾಸಕರು, ಪೊಲೀಸರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ತೀವ್ರ ಆಕ್ರೋಶ: ತಾಲೂಕಿನ 12 ಗ್ರಾಮಗಳ ಮೂಲಕ ಹಾದು ಹೋಗಲಿರುವ ಎಚ್‌ಪಿಸಿಎಲ್‌ನ ಮಂಗಳೂರು- ಹಾಸನ- ಮೈಸೂರು ಗ್ಯಾಸ್ ಪೈಪ್‌ಲೈನ್‌ಗಾಗಿ ಭೂಮಿ ವಶಪಡಿಸುವಿಕೆ ಬಗ್ಗೆ ನಡೆದ ಸಂತ್ರಸ್ತರ ಸಮಾಲೋಚನೆ ಸಭೆಯಲ್ಲಿ ಗ್ರಾಮಸ್ಥರು ಯೋಜನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯಾವ ಕಾರಣಕ್ಕೂ ತಮ್ಮ ಜಮೀನಿನ ಮೂಲಕ ಪೈಪ್‌ಲೈನ್ ಹಾದು ಹೋಗಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಸಭೆಯನ್ನೇ ಬಹಿಷ್ಕರಿಸಿದರು.
ಗೊಂದಲಮಯ ವಾತಾವರಣ: ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಚ್‌ಪಿಸಿಎಲ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು. ಸಭೆ ಆರಂಭಗೊಳ್ಳುವ ಮೊದಲು ಸಭಾಂಗಣದ ಹೊರಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ಇಲ್ಲಿ ಸಭೆ ನಡೆಸುವುದು ಬೇಡ. ನಮ್ಮ ಜಮೀನುಗಳತ್ತ ಬನ್ನಿ, ಅಲ್ಲಿ ಸಭೆ ನಡೆಸುವ ಎಂದು ಒತ್ತಾಯಿಸಿದರು. ಈ ಸಂದರ್ಭ ಸಭೆ ನಡೆಸುವ ಬಗ್ಗೆ ಉತ್ಸಾಹ ತೋರಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಜನರು ಗದ್ದಲವೆಬ್ಬಿಸಿದಾಗ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿತು.
ಸರ್ವೇಗೆ ಬರುವವರ ಕೈ ಕಡಿಯುತ್ತೇವೆ: ಶಾಸಕ ವಸಂತ ಬಂಗೇರ ಅವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಜನರ ಬಳಿ ಬಂದು ಜನರ ಸಮಸ್ಯೆ ಆಲಿಸಿದರು. ಆದರೆ ಜನರು ಮಾತ್ರ ಅಧಿಕಾರಿಗಳೊಂದಿಗೆ ಯಾವ ಚರ್ಚೆಯೂ ಬೇಡ, ಈ ಯೋಜನೆಯನ್ನು ಕೈ ಬಿಡಿ ಎಂಬ ಒತ್ತಾಯವನ್ನೇ ಮುಂದಿಡುತ್ತಿದ್ದರು. ಕೆಲವರಂತೂ 'ನಾವು ಜೀವವಿದ್ದರೆ ನಮ್ಮ ಜಮೀನುಗಳನ್ನು ಬಿಟ್ಟು ಕೊಡುವುದಿಲ್ಲ, ಸರ್ವೇಗೆ ಬರುವವರ ಕೈ ಕಡಿಯುತ್ತೇವೆ' ಎಂಬ ನಿಲುವನ್ನೇ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಜನರ ಆಕ್ರೋಶ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ವಿರುದ್ಧವೂ ತಿರುಗಿ, ಪರಸ್ಪರ ಹೊಡೆದಾಡುವ ಹಂತಕ್ಕೆ ಮುಂದುವರಿದಿತ್ತು. ಶಾಸಕರು ಹಾಗೂ ಪೊಲೀಸ್ ಅಧಿಕಾರಿಗಳು ಜನರನ್ನು ಸಮಾಧಾನಪಡಿಸಿದರು. ಬಳಿಕ ಜನರ ಅಭಿಪ್ರಾಯವನ್ನು ಕೇಳಿದ ಶಾಸಕರು, ತಾಲೂಕಿನಲ್ಲಿರುವ 12 ಗ್ರಾಮಗಳ ಎಲ್ಲ ಸಂತ್ರಸ್ತರನ್ನು ಒಂದೆಡೆ ಸೇರಿಸಿ ಸಮಸ್ಯೆ ಬಗ್ಗೆ ಚರ್ಚಿಸಿ, ಅಧಿಕಾರಿಗಳು ಹಾಗೂ ಸಂತ್ರಸ್ತರು ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಭಿಪ್ರಾಯ ಮುಂದಿಟ್ಟರು. ಯೋಜನೆಯೇ ಬೇಡ, ಆದರೂ ಶಾಸಕರು ಕರೆಯುವ ಸಭೆ ಬರುತ್ತೇವೆ. ಅಧಿಕಾರಿಗಳು ಮಾತ್ರ ಅಲ್ಲಿ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಸಮ್ಮತಿಸಿದರು.
ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಭಾಸ್ಕರ ರೈ, ಗ್ಯಾಸ್ ಪೈಪ್‌ಲೈನ್ ವಿಶೇಷ ಭೂಸ್ವಾಧೀನ ಅಧಿಕಾರಿ ಯಶೋದ, ತಹಸೀಲ್ದಾರ್ ಬಸವರಾಜ್, ಎಚ್‌ಪಿಸಿಎಲ್ ಗ್ಯಾಸ್ ಪೈಪ್‌ಲೈನ್ ಪ್ರೊಜೆಕ್ಟ್ ಮ್ಯಾನೇಜರ್ ಯುವರಾಜ್, ಬೆಳ್ತಂಗಡಿ ತಹಸೀಲ್ದಾರ್ ಶ್ರೀನಿವಾಸ್ ಪುದುವೆಟ್ಟು, ಗ್ರಾ.ಪಂ ಅಧ್ಯಕ್ಷ ಗಫೂರು, ನೆರಿಯಾ ಗ್ರಾ.ಪಂ. ಮಾಜಿ ಅಧ್ಯಕ್ಷ ಅಶ್ರಫ್, ಧರ್ಮಸ್ಥಳ ಗ್ರಾ.ಪಂ. ಸದಸ್ಯ ಚಂದನ್ ಪ್ರಸಾದ್ ಕಾಮತ್, ಮಡಂತ್ಯಾರು ಗ್ರಾ.ಪಂ. ಸದಸ್ಯ ಶೈಲೇಶ್, ರಾಜಶೇಖರ ಶೆಟ್ಟಿ ಇದ್ದರು.
ರಾತ್ರಿ ಜಮೀನಿಗೆ ನುಗ್ಗುತ್ತಾರೆ!
ರಾತ್ರಿ ವೇಳೆ ಜಮೀನಿಗೆ ನುಗ್ಗುತ್ತಾರೆ. ಒಂದೆಡೆ, ಜನರೊಂದಿಗೆ ಮಾತುಕತೆ ನಡೆಸಿದ ಬಳಿಕ ಸರ್ವೇ ಕಾರ್ಯ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಮತ್ತೊಂದೆಡೆ, ರಾತ್ರಿ ವೇಳೆಯೇ ಸರ್ವೇ ನೆಪದಲ್ಲಿ ಅಧಿಕಾರಿಗಳು ಜಮೀನಿಗೆ ನುಗ್ಗುತ್ತಿದ್ದಾರೆ. ಅವರನ್ನು ಪ್ರಶ್ನಿಸಿದರೆ ಯಾವುದೇ ಉತ್ತರ ನೀಡುತ್ತಿಲ್ಲ. ಭಯದಿಂದ ಮನೆಯಲ್ಲಿರುವುದೇ ಕಷ್ಟವಾಗಿದೆ ಎಂಬುದು ಸಂತ್ರಸ್ತರ ಅಳಲು. ಈ ರೀತಿಯಾಗಿ ಬಂದವರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಅವರು ಯಾರು ಎಂಬುದು ನಮಗೆ ಸ್ಪಷ್ಟವಾಗಬೇಕು ಎಂದು ಒತ್ತಾಯಿಸಿದರು. ಕಂಪೆನಿಯ ಅಧಿಕಾರಿಗಳು ಮಾತ್ರ, 'ಇವರು ತಮ್ಮ ಕಂಪೆನಿಗೆ ಸೇರಿದವರಲ್ಲ' ಎಂಬ ವಾದದಲ್ಲಿಯೇ ಇದ್ದರು. ಕೊನೆಗೆ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ರಾತ್ರಿ ಬಂದವರು ಪೈಪ್‌ಲೈನ್‌ಗೆ ಟೆಂಡರ್ ಹಾಕಲು ಪರಿಶೀಲನೆಗೆ ಬಂದವರಾಗಿದ್ದರು ಎಂಬುದು ಸ್ಪಷ್ಟಗೊಂಡಿತು. ಈ ರೀತಿ ಯಾರೇ ಬಂದರೂ ಹಿಡಿದು ಪೊಲೀಸರಿಗೆ ಒಪ್ಪಿಸಿ ಎಂಬ ಸೂಚನೆಯನ್ನು ಶಾಸಕರು ನೀಡಿದರು.

22ರಂದು ವಿಶೇಷ ಸಭೆ
ಬೆಳ್ತಂಗಡಿ ತಾಲೂಕಿನ ಗ್ಯಾಸ್ ಪೈಪ್‌ಲೈನ್ ಸಂತ್ರಸ್ತರ ಸಮಾಲೋಚನಾ ಸಭೆ ಆ.22ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದು, ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.