ಬಾವಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆ
ವಿಟ್ಲ: ವಿಟ್ಲ ಕಸಬಾ ಗ್ರಾಮದ ದೇವಸ್ಯ ಎಂಬಲ್ಲಿ ಬಾವಿಯೊಂದರಲ್ಲಿ ವ್ಯಕ್ತಿ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ದೇವಸ್ಯ ನಿವಾಸಿ ಪೂವಪ್ಪ ದೇವಾಡಿಗ (60) ಎಂದು ಗುರುತಿಸಲಾಗಿದೆ. ಅವರು ಆ.24ರಂದು ವಿಟ್ಲ ಪೇಟೆಗೆಂದು ತೆರಳಿದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಸೋಮವಾರ ಬೆಳಗ್ಗೆ ಪೂವಪ್ಪ ಎಂಬವರ ಮನೆ ಸಮೀಪದ ಕೃಷ್ಣ ಭಟ್ ಅವರಿಗೆ ಸೇರಿದ ಕೆರೆಯಲ್ಲಿ ಶವವೊಂದು ತೇಲಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಶವದ ಗುರುತು ಪತ್ತೆ ಹಚ್ಚಿದ್ದಾರೆ. ಮೃತರ ಪುತ್ರ ಹರೀಶ ದೇವಾಡಿಗ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಕೊಲೆ
ಪಡುಬಿದ್ರಿ: ಇಲ್ಲಿನ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಉಷ್ಣ ವಿದ್ಯುತ್ ಸ್ಥಾವರ ಯೋಜನಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಈ ಘಟಕದಲ್ಲಿ ಡಾಲ್ಫಿ ಡಿಸೋಜ ಎಂಬವರು ಗಾರ್ಡನರ್ ಆಗಿದ್ದು, ಅವರ ಕೈಕೆಳಗೆ 3 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಶನಿವಾರ ಕೆಲಸಕ್ಕೆ ಬಂದಿದ್ದು, ಭಾನುವಾರ ರಜೆ ಇತ್ತು. ಸೋಮವಾರ ಮೂವರು ಕಾರ್ಮಿಕರು ಕೆಲಸಕ್ಕೆ ಬಂದಿಲ್ಲ, ಈ ಬಗ್ಗೆ ಕೇಳಲು ಅವರು ಉಳಿದುಕೊಂಡಿದ್ದ ಲೇಬರ್ ಕಾಲನಿಯ ಕೊಠಡಿಗೆ ಹೋದಾಗ ಅದರ ಬಾಗಿಲು ಮುಚ್ಚಿತ್ತು. ಕಿಟಕಿ ಮೂಲಕ ಒಳಗೆ ನೋಡಿದಾಗ ಸುಮಾರು 34-40 ವರ್ಷ ಪ್ರಾಯದ ಒಬ್ಬ ವ್ಯಕ್ತಿಯ ಶವ ಪತ್ತೆಯಾಯಿತು. ಮುಖ ಜಜ್ಜಿಹೋಗಿದ್ದು, ತಲೆಯಲ್ಲಿ ರಕ್ತ ಮತ್ತು ಪಕ್ಕದಲ್ಲಿ ಕಲ್ಲು ಬಿದ್ದುಕೊಂಡಿತ್ತು. ಈ ಬಗ್ಗೆ ಡಿಸೋಜ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 3 ಮಂದಿ ಕಾರ್ಮಿಕರು ರೂಮಿನಲ್ಲಿ ಇರದೆ ಇದ್ದುದರಿಂದ ಅವರ ಮೇಲೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಮಹಿಳೆ ಆತ್ಮಹತ್ಯೆ
ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಮೀನು ಮಾರುಕಟ್ಟೆಯ ಬಳಿಯ ನಿವಾಸಿ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತರು ಪ್ರತೀಕ್ಷಾ ನಾಯಕ್ (55), ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಾನಸಿಕವಾಗಿ ನೊಂದು ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಡಿರುತ್ತಾರೆ. ಈ ಬಗ್ಗೆ ಅವರ ಮಗ ವಿಜೇಂದ್ರ ನಾಯಕ್ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾವಿಗೆ ಬಿದ್ದು ವ್ಯಕ್ತಿ ಸಾವು
ಗಂಗೊಳ್ಳಿ: ಇಲ್ಲಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ಎಂಬಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಮೃತರು ಪಾವ್ಲ್ ಕರ್ವಾಲೋ (42), ಸೋಮವಾರ ಬೆಳಗ್ಗೆ 9.30 ಗಂಟೆಗೆ ಮನೆಯ ಬಾವಿಯ ಬಳಿ ಹೋಗುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಅವರ ತಂದೆ ಬಸ್ತಿನ್ ಕರ್ವಾಲೊ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಬೈಂದೂರು: ಇಲ್ಲಿನ ಗೋಳಿಹೊಳೆ ಗ್ರಾಮದ ಅರೆಶಿರೂರು ಎಂಬಲ್ಲಿ ವ್ಯಕ್ತಿಯೊಬ್ಬರು ಭಾನುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರು ಮಂಜುನಾಥ ಜೋಗಿ (66), ಹೃದಯ ಮತ್ತು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು ಹಲವಾರು ಕಡೆ ಚಿಕಿತ್ಸೆ ಮಾಡಿಸಿದರೂ ಗುಣಮುಖವಾಗದೆ, ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಭಾನುವಾರ ಅರೆಶಿರೂರು ಗೇರು ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಮಗ ಗಣೇಶ ಜೋಗಿ ಅವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ: ಒಡಿಶಾದ ವ್ಯಕ್ತಿ ಸಾವು
ಉಡುಪಿ: ಬೈಕ್ ಡಿಕ್ಕಿಯಾಗಿ ನಗರದಲ್ಲಿ ರಸ್ತೆ ದಾಟುತ್ತಿದ್ದ ಒಡಿಶಾದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತರು ಪ್ರೇಮಾನಂದ ಪಾಣಿ (50), ಅವರು ಒಡಿಶಾ ರಾಜ್ಯದ ಕಟಕ್ ಜಿಲ್ಲೆಯ ನಖಾರ ಗ್ರಾಮದ ನಿವಾಸಿ. ಅವರು ಚಿಕಿತ್ಸೆಗಾಗಿ ಮಗ ಮಾನಸರಂಜನ್ ಪಾಣಿ ಅವರೊಂದಿಗೆ ಉಡುಪಿಗೆ ಬಂದಿದ್ದರು. ಭಾನುವಾರ ರಾತ್ರಿ 8.30 ಗಂಟೆಗೆ ಪ್ರೇಮಾನಂದ ಪಾಣಿ ಅವರು ಕವಿ ಮುದ್ದಣ ರಸ್ತೆಯ ಮೆಡಿಕಲ್ಸ್ನಿಂದ ಔಷಧ ಖರೀದಿಸಿ ವಾಪಾಸ್ ರಸ್ತೆ ದಾಟುತ್ತಿದ್ದಾಗ ರುಡಾಲ್ಪ್ ಪ್ರಜ್ವಲ್ ಎಂಬಾತ ಅತೀವೇಗದಿಂದ ಬೈಕಿನಲ್ಲಿ ಬಂದು ಅವರಿಗೆ ಡಿಕ್ಕಿ ಹೊಡೆದ, ಪರಿಣಾಮ ತಲೆಗೆ ಮತ್ತು ಎಡಕಾಲಿಗೆ ತೀವ್ರ ಗಾಯಗೊಂಡ ಅವರನ್ನು ತಕ್ಷಣ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ರಾತ್ರಿ 9.30 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಗ ಮಾನಸರಂಜನ್ ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹಿತ ವ್ಯಕ್ತಿ ನಾಪತ್ತೆ: ದೂರು
ಬಂಟ್ವಾಳ: ಕೊಳ್ನಾಡು ಗ್ರಾಮದ ವಿವಾಹಿತ ವ್ಯಕ್ತಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ. ಕೊಳ್ನಾಡು ಗ್ರಾಮದ ತಾಳಿತ್ತನೂಜಿ ನಿವಾಸಿ ಅಬ್ದುಲ್ ಖಾದರ್ ಪುತ್ರ ಅಬ್ದುಲ್ ಸಲಾಂ(28) ನಾಪತ್ತೆಯಾದವರು. ಸಲಾಂ ಕೋಡಪದವು-ಮಜ್ಜೋನಿ ಎಂಬಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದು, ಫಾರೂಕ್ ಅವರೊಂದಿಗೆ ಲೈಟಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ನಾಪತ್ತೆಯಾದ ದಿನ ಅವರು ತನ್ನ ಆಟೋ ರಿಕ್ಷಾವನ್ನು ತಾಳಿತ್ತನೂಜಿಯ ಮನೆಯಲ್ಲಿಯೇ ಬಿಟ್ಟು ಹೋಗಿದ್ದು, ಅವರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ಪತ್ನಿ ರಾಬಿಯ ಎಂಬವರು ವಿಟ್ಲ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ. ಮನೆಯಿಂದ ಹೊರಡುವಾಗ ಅವರು ನೀಲಿ ಪ್ಯಾಟ್ ಹಾಗೂ ಕೆಂಪು ಅಂಗಿ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ವಿಟ್ಲ ಪೊಲೀಸ್ ಠಾಣೆ(08255-239233)ಯನ್ನು ಸಂಪರ್ಕಿಸಬೇಕೆಂದು ಪೊಲೀಸರು ಕೋರಿದ್ದಾರೆ.
ಅಪರಿಚಿತ ಶವ ಪತ್ತೆ
ಮಂಗಳೂರು: ಬಾವುಟ ಗುಡ್ಡೆ ಜೋಸ್ ಆಲುಕಾಸ್ ಎದುರುಗಡೆ ಶನಿವಾರ ರಾತ್ರಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ 45 ಪ್ರಾಯದ ಮಹಿಳೆಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕೇಸರಿ ಹಾಗೂ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದು, ಗೋಧಿ ಮೈ ಬಣ್ಣ, ಕಪ್ಪು ಕೂದಲು ಹೊಂದಿದ್ದಾರೆ. ವಾಸ ಸ್ಥಳ ಹಾಗೂ ವಾರಸುದಾರರು ಪತ್ತೆಯಾಗದ ಕಾರಣ ಮೃತ ದೇಹವನ್ನು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಂಬಂಧಪಟ್ಟವರು ಸಂಚಾರ ಪಶ್ಚಿಮ ಪೊಲೀಸ್ ಠಾಣೆ 0824-2220524 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

