ದಕ್ಷಿಣ ಕನ್ನಡ

ಆರೋಗ್ಯ ಇಲಾಖೆ ಎಚ್ಚರಿಸಿದರೂ ಜನಸಾಮಾನ್ಯರ ನಿರ್ಲಕ್ಷ್ಯ

Published On :

ಪುತ್ತೂರು: ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಿ... ಎಂದು ಆರೋಗ್ಯ ಇಲಾಖೆ ನಿರಂತರ ಎಚ್ಚರಿಸುತ್ತಾ ಬಂದಿದ್ದರೂ ಜನ ಸಮುದಾಯ ಮಾತ್ರ ಇನ್ನೂ ಎಚ್ಚತ್ತುಕೊಂಡಿಲ್ಲ.
ಆರೋಗ್ಯ ಇಲಾಖೆಯು ತಮ್ಮ ಅಧೀನದ ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ ಕಳೆದ ಹಲವಾರು ವರ್ಷಗಳಿಂದ ಹೇಳುತ್ತಲೇ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಕರಪತ್ರ ಇನ್ನಿತರ ಮಾಹಿತಿಗಳನ್ನು ಇಲಾಖೆ ಮನೆ ಮನೆಗಳಿಗೆ ನೀಡುತ್ತಾ ಎಚ್ಚರಿಸಿದೆ. ಆದರೆ, ಚಿಕೂನ್‌ಗುನ್ಯಾ ಹೊರತು ಪಡಿಸಿ ಸೊಳ್ಳೆಗಳಿಂದ ಹರಡುತ್ತಿರುವ ಇತರ ರೋಗಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದ್ದು, ಇದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಜನಸಮುದಾಯ ಇನ್ನೂ ಎಚ್ಚರಗೊಳ್ಳದಿರುವುದು ಮತ್ತು ಮಂಜಾಗ್ರತೆ ವಹಿಸದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಪುತ್ತೂರು ತಾಲೂಕಿನ ಆರೋಗ್ಯ ಇಲಾಖೆಯ ಮಾಹಿತಿಯಂತೆ ತಾಲೂಕಿನಲ್ಲಿ ಪ್ರಸ್ತುತ ವರ್ಷದಲ್ಲಿ ಸುಮಾರು 102 ಮಲೇರಿಯಾ ಮತ್ತು 91 ಡೆಂಘೀ ಪ್ರಕರಣ ದಾಖಲಾಗಿದೆ. ನಗರ ಪ್ರದೇಶಗಳಲ್ಲಿ ಮಲೇರಿಯಾ ಮತ್ತು ಡೆಂಘೀ ಪ್ರಕರಣ ಬಹುತೇಕ ಕಂಡು ಬಂದಿದೆ. ಇತ್ತೀಚೆಗೆ ಪುತ್ತೂರು ನಗರದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಲ್ಲಿ ಮತ್ತು ನಗರದ ಕಾಲೋನಿಗಳಲ್ಲಿ ಮಲೇರಿಯಾ ಪ್ರಕರಣ ಪತ್ತೆಯಾಗಿತ್ತು. ಹಲವಾರು ಮಂದಿ ಮಲೇರಿಯಾ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಗರದಲ್ಲಿ ಹೆಚ್ಚಾಗುತ್ತಿರುವ ಸೊಳ್ಳೆ ಉತ್ಪತ್ತಿ ಮತ್ತು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಸಮರ್ಪಕವಾದ ಕ್ರಮ ಕೈಗೊಳ್ಳದಿರುವುದೇ ರೋಗ ಹರಡಲು ಮೂಲ ಕಾರಣವಾಗಿತ್ತು.
ಇಲ್ಲಿಗೆ ಬಿಹಾರ, ಗದಗ, ಕೊಪ್ಪಳ ಜಿಲ್ಲೆಗಳಿಂದ ಕಟ್ಟಡ ಕಾರ್ಮಿಕರು ಆಗಮಿಸಿದ್ದು, ಅವರು ಪುತ್ತೂರು ಹಾಗೂ ಮಂಗಳೂರಿನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರು ಸೊಳ್ಳೆ ಕಡಿತದ ಬಗ್ಗೆ ಯಾವುದೇ ಮುಂಜಾಗ್ರತೆವಹಿಸುತ್ತಿಲ್ಲ. ಇದರಿಂದಾಗಿ ಮಲೇರಿಯಾ ಪೀಡಿತರಾಗಿದ್ದಾರೆ ಎಂಬುದು ವೈದ್ಯರ ಸ್ಪಷ್ಟನೆ.
ಶೀಘ್ರ ಪತ್ತೆ- ತ್ವರಿತ ಚಿಕಿತ್ಸೆ: ಇದೀಗ ಆರೋಗ್ಯ ಇಲಾಖೆಯು ನಗರದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಗಳಿಗೆ ಟಿಮೋಫೋಸ್ ಎಂಬ ರಾಸಾಯನಿಕವನ್ನು ಸಿಂಪಡಿಸಿ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. 'ಶೀಘ್ರ ಪತ್ತೆ- ತ್ವರಿತ ಚಿಕಿತ್ಸೆ' ಎಂಬ ಧ್ಯೇಯದಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗುತ್ತಿಲ್ಲ. ಜನರು ಸೊಳ್ಳೆ ಕಡಿತದಿಂದ ಸಂಪೂರ್ಣ ಮುಕ್ತರಾದಲ್ಲಿ ಮಾತ್ರ ಈ ರೋಗವನ್ನು ನಿಯಂತ್ರಿಸಲು ಸಾಧ್ಯ ಎನ್ನುತ್ತಾರೆ ಆರೋಗ್ಯಾಧಿಕಾರಿ.
ತಡವಾಗಿ ಬೆಳಕಿಗೆ: ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದೇ ರೋಗ ತಡೆಯ ಪ್ರಥಮ ಸೂತ್ರವಾಗಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಸೊಳ್ಳೆ ಉತ್ಪಾದನೆಯನ್ನು ತಡೆಗಟ್ಟಬಹುದು. ಕೂಡಿಟ್ಟ ನೀರನ್ನು ವಾರಕ್ಕೊಮ್ಮೆಯಾದರೂ ಬದಲಾಯಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಸುತ್ತದೆ. ಆದರೆ, ಜನ ಮಾತ್ರ ಯಾವುದಕ್ಕೂ ಗಮನ ಹರಿಸಿದಂತೆ ಕಾಣುತ್ತಿಲ್ಲ. ಮಾತ್ರವಲ್ಲದೆ ಜ್ವರ ಬಂದ ತಕ್ಷಣ ರಕ್ತ ಪರೀಕ್ಷೆ ನಡೆಸದಿರುವುದರಿಂದ ರೋಗ ಉಲ್ಬಣಾವಸ್ಥೆಯನ್ನು ತಲುಪಿದ ಸಾಕಷ್ಟು ಪ್ರಕರಣವೂ ಬೆಳಕಿಗೆ ಬಂದಿದೆ.
ಕನಿಷ್ಠ ಸೊಳ್ಳೆ ಪರದೆಯನ್ನು ಬಳಸುವುದು. ಮುಸ್ಸಂಜೆ ವೇಳೆಯಲ್ಲಿ ಮನೆಯ ಕಿಟಿಕಿ ಬಾಗಿಲುಗಳನ್ನು ಮುಚ್ಚಿ ಮನೆಯೊಳಗೆ ಹೊಗೆ ಹಾಕುವುದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಮೈ ಸಂಪೂರ್ಣ ಮುಚ್ಚುವ ಬಟ್ಟೆ ಧರಿಸುವುದರಿಂದ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಬಹುದು. ರೋಗ ಬಂದಾಗ ಸಂಬಂಧಿಸಿದ ಇಲಾಖೆಯನ್ನು ದೂಷಿಸುವ ಬದಲು ರೋಗ ಬಾರದಂತೆ ತಡೆಯಲು ಎಚ್ಚರ ವಹಿಸುವುದು ಉತ್ತಮ.
ನಗರದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಗಳಿಗೆ ಟಿಮೋಫೋಸ್ ಎಂಬ ರಾಸಾಯನಿಕವನ್ನು ಸಿಂಪಡಿಸಿ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. 'ಶೀಘ್ರ ಪತ್ತೆ- ತ್ವರಿತ ಚಿಕಿತ್ಸೆ' ಎಂಬ ಧ್ಯೇಯದಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ. ಆದರೂ, ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗುತ್ತಿಲ್ಲ. ಜನರು ಸೊಳ್ಳೆ ಕಡಿತದಿಂದ ಸಂಪೂರ್ಣ ಮುಕ್ತರಾದಲ್ಲಿ ಮಾತ್ರ ಈ ರೋಗವನ್ನು ನಿಯಂತ್ರಿಸಲು ಸಾಧ್ಯ.
 ಆರೋಗ್ಯಾಧಿಕಾರಿ



-ಸಂಶುದ್ದೀನ್ ಸಂಪ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.