ದಕ್ಷಿಣ ಕನ್ನಡ

ಬೀದಿಗೆ ಬಿದ್ದ ಕಂಪ್ಯೂಟರ್ ಗುತ್ತಿಗೆ ಶಿಕ್ಷಕರು

Published On :

ಮಂಗಳೂರು: ಸರ್ಕಾರಿ ಹೈಸ್ಕೂಲ್‌ಗಳಲ್ಲಿ ಕಂಪ್ಯೂಟರ್ ಬೋಧಿಸುತ್ತಿದ್ದ ಗುತ್ತಿಗೆ ಶಿಕ್ಷಕರ ನೇಮಕ ಅವಧಿ ಸಪ್ಟೆಂಬರ್‌ಗೆ ಕೊನೆಗೊಂಡಿದೆ. ಈಗ ಕಂಪ್ಯೂಟರ್ ಶಿಕ್ಷಕರು ಕೆಲಸವಿಲ್ಲದೆ, ವೇತನವೂ ಸಿಗದೆ ಬೀದಿಗೆ ಬಿದ್ದಿದ್ದಾರೆ. ಕಳೆದ ಎರಡು ತಿಂಗಳಿಂದ ಹೈಸ್ಕೂಲ್‌ಗಳಲ್ಲಿ ಕಂಪ್ಯೂಟರ್ ಬೋಧನೆ ವಸ್ತುಶಃ ಸ್ಥಗಿತಗೊಂಡಿದೆ.
 ಎಜುಕಾಂ ಕಂಪನಿ ಆಶ್ರಯದಲ್ಲಿ 2008 ಸಪ್ಟೆಂಬರ್‌ನಲ್ಲಿ ಐಸಿಟಿ(ಮಾಹಿತಿ ತಂತ್ರಜ್ಞಾನ ಮಾಧ್ಯಮ)2ನೇ ಹಂತ ಯೋಜನೆಯಲ್ಲಿ 2,450 ಶಿಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿತ್ತು. ಅವರಿಗೆ ಮಾಸಿಕ ರು. 3,332 ಗೌರವಧನ ನಿಗದಿಪಡಿಸಲಾಗಿತ್ತು. ಇವರಲ್ಲಿ 1,571 ಶಿಕ್ಷಕರು ಹೈಸ್ಕೂಲ್‌ನಲ್ಲಿ ಕಂಪ್ಯೂಟರ್ ಬೋಧಿಸುತ್ತಾರೆ. ಉಳಿದ ಶಿಕ್ಷಕರು ಪದವಿಪೂರ್ವ ಕಾಲೇಜಿಗೆ ಕಂಪ್ಯೂಟರ್ ಪಾಠ ಮಾಡುತ್ತಾರೆ. 2013 ಸಪ್ಟೆಂಬರ್‌ಗೆ ಹೈಸ್ಕೂಲ್ ಶಿಕ್ಷಕರ ಗುತ್ತಿಗೆ ಅವಧಿ ಮುಗಿದಿದೆ.
3ನೇ ಹಂತಕ್ಕೆ ಸಿದ್ಧತೆ: ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಸಲು ಜಾರಿಗೊಳಿಸಲಾದ ಮಾಹಿತಿ ಸಿಂಧು ಕಾರ್ಯಕ್ರಮದ ಯಶಸ್ಸು ಕಂಡು ಸರ್ಕಾರ ಐಸಿಟಿಯನ್ನು ಜಾರಿಗೊಳಿಸಿತ್ತು. ಪ್ರಥಮ ಹಂತದಲ್ಲಿ ಸೀಮಿತ ಶಾಲೆಗಳಿಗೆ ಕಂಪ್ಯೂಟರ್ ಕಲಿಕೆಗೆ ಅವಕಾಶವಿದ್ದರೆ, ಎರಡನೇ ಹಂತದಲ್ಲಿ ಪದವಿಪೂರ್ವ ಕಾಲೇಜಿಗೂ ವಿಸ್ತರಿಸಿತ್ತು. ಒಂದು ಹೈಸ್ಕೂಲ್‌ಗೆ ಒಬ್ಬರಂತೆ ಕಂಪ್ಯೂಟರ್ ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗಿತ್ತು. ಈ ಶಿಕ್ಷಕರು ವಾರದಲ್ಲಿ 45 ಅವಧಿ ಕಂಪ್ಯೂಟರ್ ಪಾಠ ಮತ್ತು ಪ್ರಾಕ್ಟಿಕಲ್ ಮಾಡಬೇಕು. ಐಸಿಟಿ 2ನೇ ಹಂತದ ಉದ್ದೇಶ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮೂಲಕ ಪಾಠ ಮಾಡುವುದು. ಈಗ 3ನೇ ಹಂತ ಜಾರಿಗೊಳಿಸಲು ಚಿಂತನೆ ನಡೆಯುತ್ತಿದ್ದು, 1 ಮತ್ತು 2ನೇ ಹಂತದಲ್ಲಿ ಬಾಕಿ ಉಳಿದ ಶಾಲೆಗಳಲ್ಲಿ ಕಂಪ್ಯೂಟರ್ ಮುಖೇನ ಶಿಕ್ಷಣ ನೀಡಲು ಸರ್ಕಾರ ಹೊರಟಿದೆ.
ಕಂಪ್ಯೂಟರ್ ಶಿಕ್ಷಕರ ಕೊರತೆ: ಹೈಸ್ಕೂಲ್‌ಗೆ ಕಂಪ್ಯೂಟರ್ ಸಿಲೆಬಸ್ ಕಡ್ಡಾಯ. ಕಂಪ್ಯೂಟರ್ ಶಿಕ್ಷಕರನ್ನು ಮನೆಗೆ ಕಳುಹಿಸಿರುವುದರಿಂದ ಬದಲಿ ಪಾಠ ಮಾಡುವವರ ಕೊರತೆ ತಲೆದೋರಿದೆ. ಹಾಗಾಗಿ ಹೈಸ್ಕೂಲ್‌ನಲ್ಲಿ ಕಂಪ್ಯೂಟರ್ ಪಾಠ ಭಾಗಶಃ ಸ್ಥಗಿತಗೊಂಡಿದೆ.
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರೇ ಕಂಪ್ಯೂಟರ್ ಕಲಿಸಬೇಕು. ಇತರೆ ಪಾಠ ಮಾಡುವುದರ ಜತೆ ಕಂಪ್ಯೂಟರ್ ಕಲಿಸಲು ಹಾಲಿ ಶಿಕ್ಷಕರಿಂದ ಸಾಧ್ಯವಾಗುತ್ತಿಲ್ಲ. ಈ ಶಿಕ್ಷಕರಿಗೆ ಸಾಕಷ್ಟು ಕಂಪ್ಯೂಟರ್ ಜ್ಞಾನದ ಕೊರತೆ ಇರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚೇನೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಉದ್ದೇಶಿತ ಐಸಿಟಿ ಯೋಜನೆಗೆ ಮಂಕು ಕವಿದಂತಾಗಿದೆ.
6 ತಿಂಗಳಿಂದ ಗೌರವಧನ ಬಾಕಿ: ಕಂಪ್ಯೂಟರ್ ಶಿಕ್ಷಕರಿಗೆ ಮೇ ತಿಂಗಳಿಂದ ಗೌರವಧನ ಪಾವತಿಯಾಗಿಲ್ಲ. ಗುತ್ತಿಗೆ ಸಂಸ್ಥೆ ಎಜುಕಾಂನ್ನು ಪ್ರಶ್ನಿಸಿದರೆ, ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ, ಹಾಗಾಗಿ ಶಿಕ್ಷಕರಿಗೆ ಕೊಡಲು ಹಣವಿಲ್ಲ ಎಂಬ ಸಬೂಬು ಹೇಳುತ್ತಿದೆ. ಸರ್ಕಾರ ಮತ್ತು ನಿಮ್ಮ ನಡುವಿನ ಸಂಬಂಧ ನಮಗೆ ಅಗತ್ಯವಿಲ್ಲ, ಬಾಕಿ ಮೊತ್ತ ಪೂರ್ತಿ ಪಾವತಿಸಿ ಎಂದು ಕಂಪ್ಯೂಟರ್ ಶಿಕ್ಷಕರು ಎಜುಕಾಂ ಮುಂದೆ ಅವಲತ್ತಿದ್ದಾರೆ. ಆದರೆ ಶಿಕ್ಷಕರ ಅಳಲನ್ನು ಎಜುಕಾಂ ಕೇಳಿಸುತ್ತಿಲ್ಲ. ಹೀಗಾಗಿ ಎಜುಕಾಂ ಕಾನೂನು ಹೋರಾಟಕ್ಕೆ ನೊಂದ ಶಿಕ್ಷಕರು ನಿರ್ಧರಿಸಿದ್ದಾರೆ.
'ಕಂಪ್ಯೂಟರ್ ಶಿಕ್ಷಕರನ್ನು ಮುಂದುವರಿಸುವಂತೆ ಶಿಕ್ಷಣ ಸಚಿವರಲ್ಲಿ ಕೋರಿದ್ದೇವೆ. ಯಾವುದೇ ಕಾರಣಕ್ಕೂ ಕಂಪನಿಗಳಿಗೆ ಗುತ್ತಿಗೆ ನೀಡದೆ ನೇರವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಮೇ ತಿಂಗಳಿಂದ ಎಜುಕಾಂ ಕಂಪನಿ ಕಂಪ್ಯೂಟರ್ ಶಿಕ್ಷಕರಿಗೆ ಗೌರವಧನ ಪಾವತಿಗೆ ಬಾಕಿ ಇರಿಸಿದೆ. ಪದವಿಪೂರ್ವ ಕಾಲೇಜುಗಳಲ್ಲಿ ಕಂಪ್ಯೂಟರ್ ಕಲಿಸುವ ಶಿಕ್ಷಕರ ಗುತ್ತಿಗೆ ಅವಧಿ 2014 ಮಾರ್ಚ್‌ಗೆ ಮುಗಿಯಲಿದೆ. ಅವರಿಗೂ ಕಳೆದ 5 ತಿಂಗಳಿಂದ ಗೌರವಧನ ಕೊಡಲು ಬಾಕಿ ಇದೆ. ಹೀಗಾದರೆ ಶಿಕ್ಷಕರು ಜೀವನಕ್ಕೆ ಏನು ಮಾಡಬೇಕು?'
ಟಿ ಎಲ್.ಬಿ.ಮುಂಡಾಸಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಸರ್ಕಾರಿ ಶಾಲಾ ಕಾಲೇಜು ಕಂಪ್ಯೂಟರ್ ಶಿಕ್ಷಕರ ಒಕ್ಕೂಟ.




-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.