ಮಹಿಳಾ ದೌರ್ಜನ್ಯದಿಂದ ನೈತಿಕ ನೆಲೆಗಟ್ಟಿಗೆ ಧಕ್ಕೆ
ಬೆಳ್ತಂಗಡಿ: ಮಹಿಳೆಯರ ಮೇಲಿನ ದೌರ್ಜನ್ಯಗಳು ನಾಗರಿಕದ ಸಮಾಜದ ನೈತಿಕ ನೆಲೆಗಟ್ಟನ್ನೇ ಅಲುಗಾಡಿಸುತ್ತಿದೆ. ರಾಕ್ಷಸೀಯತೆ ಮಿತಿ ಮೀರುತ್ತಿದ್ದು ಮಾನವೀಯತೆಯ ಸೆಲೆ ಮರಳಿ ಹುಟ್ಟಿಸುವ ಪ್ರಕ್ರಿಯೆ ಆರಂಭವಾಗಬೇಕಾಗಿದೆ ಎಂದು ಧಾರವಾಡದ ಸಾಹಿತಿ ಡಾ.ವೀಣಾ ಶಾಂತೇಶ್ವರ ಹೇಳಿದ್ದಾರೆ.
ಸೋಮವಾರ ಸಂಜೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಲಕ್ಷ ದೀಪೋತ್ಸವ ಅಂಗವಾಗಿ ನಡೆದ ಸಾಹಿತ್ಯ ಸಮ್ಮೇಳನದ 81ನೇ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೌರ್ಜನ್ಯಗಳ ವಿರುದ್ಧ ಪ್ರತಿಭಟನೆಗಳು, ಅಪರಾಧಿಗಳ ಬಂಧನ ನಡೆಯುತ್ತಿದೆ. ಆದರೆ ಕ್ರೌರ್ಯ ಮಾತ್ರ ಕೊನೆಗೊಳ್ಳುತ್ತಿಲ್ಲ. ನಿರಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಶಿಕ್ಷಕರ ಗುಣಮಟ್ಟ ಹೆಚ್ಚಿಸಿ: ಸರೋಜಿನಿ ಮಹಿಷಿ ವರದಿ ಜಾರಿಗೆ ತಂದು ಎಲ್ಲಾ ರಂಗಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಒದಗಿಸಬೇಕು. ಸರ್ಕಾರಿ ಮತ್ತು ಖಾಸಗಿ ಶಿಕ್ಷಣದ ಗುಣಮಟ್ಟ ಸಮಾನವಾಗಿ ಚಿಂತಾಜನಕವಾಗಿದೆ. ಅದು ಸುಧಾರಿಸಬೇಕಾದರೆ ಶಿಕ್ಷಕರ ಗುಣಮಟ್ಟ ಹೆಚ್ಚಿಸಬೇಕಾಗಿದೆ. ಸಮಾನರೂಪದ ಶಿಕ್ಷಣ ಎಲ್ಲ ವರ್ಗದ ಮಕ್ಕಳಿಗೆ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಮೂಢನಂಬಿಕೆ ವಿರುದ್ಧ ಶಾಸನ: ಮೂಢನಂಬಿಕೆಗಳಿಗೆ ಮಹಿಳೆಯರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಮುಂದಿನ ಪೀಳಿಗೆಯನ್ನು ಇದರಿಂದ ರಕ್ಷಿಸಲು ಮೂಢ ನಂಬಿಕೆಗಳ ವಿರುದ್ಧ ಶಾಸನ ಕೂಡಲೇ ಜಾರಿಗೆ ತರಬೇಕಾಗಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮೂಢನಂಬಿಕೆಗಳು ಅತ್ಯಂತ ಆಳವಾಗಿ ಬೇರೂರಿದ್ದು ಮಡೆಸ್ನಾನ, ಬೆತ್ತಲೆಸೇವೆ, ದೇವದಾಸಿ ಮುಂತಾದ ಅನಿಷ್ಟ ಪದ್ಧತಿಗಳು ಕೊನೆಯಾಗಲು ಪ್ರಾಥಮಿಕ ಶಾಲಾ ಹಂತದಿಂದ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸಮ್ಮೇಳನ ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ ಮಾತನಾಡಿ, ಸಾಹಿತ್ಯದ ಅಂತರಂಗದಲ್ಲಿ ಆಧ್ಯಾತ್ಮವಿರಬೇಕು. ವೈಜ್ಞಾನಿಕ ಯುಗದಲ್ಲಿ ಜ್ಞಾನದೊಂದಿಗೆ ವಿವೇಕವೂ ಬೆಳೆಯಬೇಕಾದರೆ ಸಾಹಿತ್ಯ ಚಿಂತನೆ ಅಗತ್ಯ ಎಂದರು.
ಜ್ಞಾನದಿಂದ ಆರ್ಥಿಕ ಮೌಲ್ಯ ಹೆಚ್ಚಾಗಿದೆಯೇ ಹೊರತು ಮಾನವೀಯ ಮೌಲ್ಯ ತುಂಬಿಕೊಂಡಿಲ್ಲ. ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಸಂಸ್ಕೃತಿಯ ತಿರುಳು ಮಾತ್ರ ಅಲ್ಲೇ ಇರುತ್ತದೆ ಎಂದರು.
ಸ್ವಾಗತ ಭಾಷಣ ಮಾಡಿದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಸಾಹಿತ್ಯ ಕೇವಲ ಜನಪ್ರಿಯವಾಗದೆ ಜನಪರವಾದಾಗ ಸಮಾಜಕ್ಕೆ ಹೆಚ್ಚು ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಅದು ಆಯಾ ಕಾಲದ ಸಮಸ್ಯೆಗಳಿಗೆ ಸ್ಪಂದಿಸುತ್ತಾ ರೂಪಾಂತರಗೊಳ್ಳುತ್ತಾ ಸಾಗುತ್ತಿದೆ ಎಂದರು. ಕಿರುತೆರೆ ಕಲಾವಿದೆ ನಂದಿನಿ ಆರ್ಯನ್, ಪತ್ರಕರ್ತ ಪ್ರೊ.ರವೀಂದ್ರ ರೇಷ್ಮೆ, ಉಡುಪಿಯ ಪ್ರೊ.ಉದ್ಯಾವರ ಮಾಧವ ಆಚಾರ್ಯ ಉಪನ್ಯಾಸ ನೀಡಿದರು. ಪ್ರೊ.ಪ್ರಭಾಕರ್, ಡಿ.ಹರ್ಷೇಂದ್ರ ಕುಮಾರ್ ಇದ್ದರು. ಪ್ರೊ. ಎಂ.ರಾಮಚಂದ್ರ ನಿರ್ವಹಿಸಿದರು. ಡಾ.ಎಲ್.ಎಚ್.ಮಂಜುನಾಥ್ ವಂದಿಸಿದರು.
ಗಿನ್ನಿಸ್ ಗೆದ್ದ ಗೋಪಾಲ ಖಾರ್ವಿಗೆ ಸನ್ಮಾನ
ಮಲ್ಪೆಯ ಕಡಲಿನಲ್ಲಿ ಈಜಿ ಗಿನ್ನಿಲ್ ದಾಖಲೆ ಸ್ಥಾಪಿಸಿದ ಗಂಗೊಳ್ಳಿಯ ಗೋಪಾಲ ಖಾರ್ವಿ ಅವರನ್ನು ಸಮ್ಮೇಳನ ಸಂದರ್ಭ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸಮ್ಮಾನಿಸಿದರು.
ಪುಸ್ತಕ ಬಿಡುಗಡೆ: ಬ್ರಹ್ಮಕುಮಾರಿ ಭಾರತಿ ಅವರ ಅರಿವಿನ ಅಮೃತ ಎಂಬ ಹೊತ್ತಗೆಯನ್ನು ಧರ್ಮಸ್ಥಳದ 81ನೇ ಸಾಹಿತ್ಯ ಸಮ್ಮೇಳನ ಸಂದರ್ಭ ಡಾ. ಹೆಗ್ಗಡೆ ಬಿಡುಗಡೆಗೊಳಿಸಿದರು.
ಗುಜರಾತದಿಂದ ಅಸ್ಸಾಂವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ, ವಿವಿಧ ಭಾಷಾ-ಸಾಹಿತ್ಯಗಳ ನಡುವೆ ಪರಸ್ಪರ ಆದಾನ-ಪ್ರದಾನಗಳು ನಡೆದಾಗ, ರಾಷ್ಟ್ರೀಯ ಏಕತೆಗೆ ಭದ್ರ ಬುನಾದಿ ಹಾಕಲು ಸಾಧ್ಯ.
- ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

