ಮೂಲ್ಕಿ ಪರಿಸರದಲ್ಲಿ ಚಿರತೆ ಹಾವಳಿ
ಮೂಲ್ಕಿ: ದೀಪಾವಳಿ ಸಂದರ್ಭ ಇಲ್ಲಿನ ಪಡುಪಣಂಬೂರು ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ, ಬೆಳ್ಳಾಯರು, ಕೆರೆಕಾಡು ಪರಿಸರದಲ್ಲಿ ಎರಡು ಮರಿಗಳೊಂದಿಗೆ ತಿರುಗಾಡುತ್ತಿದ್ದ ಚಿರತೆಯು ಇದೀಗ ಪುನರೂರಿನ ಭಾರತಾ ಮಾತಾ ಶಾಲೆಯ ಹಿಂಬದಿಯ ಕಾಡು ಪ್ರದೇಶದಲ್ಲಿ ತಿರುಗಾಡುತ್ತಿರುವುದನ್ನು ಸ್ಥಳೀಯ ನಾಗರಿಕರು ನೋಡಿದ್ದು, ಪರಿಸರದಲ್ಲಿ ಭಯದ ವಾತಾವರಣ ಮೂಡಿದೆ.
ಕಳೆದ ಒಂದು ತಿಂಗಳಿನಿಂದ ಚಿರತೆಯು ಪಡುಪಣಂಬೂರು ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಪ್ರದೇಶದಲ್ಲಿ ರಸ್ತೆಯಲ್ಲಿ ರಾತ್ರಿ ಹೊತ್ತು ಮಲಗಿದ್ದನ್ನು ಹಾಗೂ ಕಾಡಿನಲ್ಲಿ ಸಂಚರಿಸುತ್ತಿದ್ದುದನ್ನು ಹಲವಾರು ಮಂದಿ ನೋಡಿದ್ದಾರೆ. ಈ ಪ್ರದೇಶದ ಬೀದಿ ನಾಯಿಗಳು ಕಣ್ಮರೆಯಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೆಳ್ಳಾಯರು ಕಾಡು ಪ್ರದೇಶದಲ್ಲಿ ದೊಡ್ಡ ಬೋನು ತಂದಿಟ್ಟರೂ ಚಿರತೆ ಸಿಕ್ಕಿ ಬೀಳಲಿಲ್ಲ.
ಕಾಡಿನ ಹೆಗ್ಗಣಗಳು, ಬೀದಿ ನಾಯಿಗಳು, ಮನೆಗಳ ಕೋಳಿ, ಬೆಕ್ಕುಗಳನ್ನು ತಿನ್ನುತ್ತ ಪರಿಸರದಲ್ಲಿ ತಿರುಗಾಡುತ್ತಿದ್ದುದರಿಂದ ಜನರು ರಾತ್ರಿ ಹೊತ್ತಿನಲ್ಲಿ ತಿರುಗಾಡಲು ಭಯಪಡುವ ವಾತಾವರಣ ಉಂಟಾಗಿತ್ತು.
ಇದೀಗ ಆಹಾರ ಅರಸಿಕೊಂಡು ಬೆಳ್ಳಾಯರು, ಕೆರೆಕಾಡು ಮೂಲಕ ಪುನರೂರಿನತ್ತ ಚಿರತೆಯು ತನ್ನ ಮರಿಗಳೊಂದಿಗೆ ಆಗಮಿಸಿದ್ದು, ಬುಧವಾರ ಬೆಳಗ್ಗೆ ಪುನರೂರಿನ ಭಾರತಾ ಮಾತಾ ಶಾಲೆಯ ಹಿಂದುಗಡೆ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮನೆ ಹಿಂದುಗಡೆ ಕಾಡು ಪ್ರದೇಶದಲ್ಲಿ ತಿರುಗಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆಯವರು ಬೆಳ್ಳಾಯರಿನಲ್ಲಿಟ್ಟಿದ್ದ ಬೋನು ತಂದು ಪುನರೂರಿನ ಕಾಡಿನಲ್ಲಿ ಇಟ್ಟಿದ್ದಾರೆ. ಈ ವ್ಯಾಪ್ತಿಯಲ್ಲಿ ಮಕ್ಕಳು ಶಾಲೆಗೆ ಹೋಗುವುದರಿಂದ ಮನೆಯವರು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಕಳೆದ ಒಂದು ತಿಂಗಳಿನಿಂದ ಚಿರತೆಯ ಬಗ್ಗೆ ಅರಣ್ಯ ಇಲಾಖೆಯವರು ಹೆಚ್ಚಿನ ಗಮನ ನೀಡದಿರುವುದರಿಂದ ಚಿರತೆಯು ನಿರಾಂತಕವಾಗಿ ತನ್ನ ಮಕ್ಕಳೊಂದಿಗೆ ತಿರುಗಾಡುತ್ತಿದೆ. ಅರಣ್ಯ ಇಲಾಖೆಯವರು ಸ್ಥಳೀಯರಲ್ಲಿ ಜಾಗ್ರತೆ ವಹಿಸುವಂತೆ ಹೇಳುತ್ತಿದ್ದಾರೆ. ಅದರೆ ಕಾರ್ಯಾಚರಣೆ ಮಾಡಿ ಚಿರತೆ ಹಿಡಿಯಲು ಪ್ರಯತ್ನಿಸದಿರುವುದರಿಂದ ಜನರು ಆಕ್ರೋಶಿತಗೊಂಡಿದ್ದಾರೆ.
ಚಿರತೆ ಹಿಡಿಯಲು ಆಗ್ರಹ: ಮೂಲ್ಕಿ ಪರಿಸರದ ಭಾರತಮಾತಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಶಿಮಂತೂರು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕೆರೆಕಾಡು ಸರ್ಕಾರಿ ಶಾಲೆ, ತೋಕೂರು ಸುಬ್ರಹ್ಮಣ್ಯ ಹಾಗೂ ಪದ್ಮನೂರು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸಂಚರಿಸುವ ಪ್ರದೇಶದಲ್ಲಿ ಚಿರತೆ ಅಡ್ಡಾಡುತ್ತಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಅನಾಹುತ ನಡೆಯುವ ಮುನ್ನ ಚಿರತೆಯನ್ನು ಹಿಡಿದು ಜನರಲ್ಲಿನ ಭಯದ ವಾತಾವರಣ ನಿವಾರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

