ಕಳವಾಗಿದ್ದ ಪುರಾತನ ವಿಗ್ರಹ ಪತ್ತೆ
ಕಾಪು: ಉದ್ಯಾವರ ಮಹಾಗಣಪತಿ ದೇವಸ್ಥಾನದಲ್ಲಿ ಆ. 26ರಂದು ವಿಗ್ರಹಗಳನ್ನು ಕಳವು ಮಾಡಿದ ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಕಾಪು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಮತ್ತು ಕಳವು ಮಾಡಿದ ಹತ್ತಾರು ಲಕ್ಷ ಮೌಲ್ಯದ ಪುರಾತನ ಗಣಪತಿಯ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಚೆನ್ನರಾಯಪಟ್ಟಣದ ಕೊಪ್ಪಿ ನಾಗ ಎಂದು ಗುರುತಿಸಲಾಗಿದೆ. ಈ ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಗಜ, ಮಧು ಮತ್ತು ರವಿ ಎಂಬವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಚೇತನ್ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಈ ಪ್ರಕರಣದ ಬಗ್ಗೆ ನಿಗಾ ವಹಿಸಿದ್ದ ಹಿನ್ನೆಲೆಯಲ್ಲಿ 5 ತಿಂಗಳ ಬಳಿಕ ಈ ವಿಗ್ರಹವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಚೆನ್ನರಾಯಪಟ್ಟಣಕ್ಕೆ ತೆರಳಿದ ಪೊಲೀಸರು, ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ನಾಗನನ್ನು ಬಂಧಿಸಿದ್ದಾರೆ. ಈ ಪಂಚಲೋಹದ ಗಣಪತಿ ವಿಗ್ರಹವು 15ನೇ ಶತಮಾನದ್ದಾಗಿದ್ದು, ಬೆಳ್ಳಿಯ ಪೀಠದ ಸಹಿತ 3.50 ಕಿಲೋ ತೂಕವಿದೆ. ಮಾರುಕಟ್ಟೆಯ ಇದರ ಲೋಹ ಬೆಲೆಯೇ ರು. 5 ಲಕ್ಷವಾಗಿದ್ದು, ಅಂತಾರಾಷ್ಟ್ರೀಯ ಕಳ್ಳ ಮಾರುಕಟ್ಟೆಯಲ್ಲಿ ಇನ್ನೂ ಅನೇಕ ಪಟ್ಟು ಬೆಲೆಬಾಳುತ್ತದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ ಎಂದು ಕಾಪು ವೃತ್ತ ನಿರೀಕ್ಷಕರು ತಿಳಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕ ಸುನಿಲ್ ನಾಯಕ್ ಮತ್ತು ಅವರ ವಿಶೇಷ ತಂಡ ಭಾಗವಹಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

