ಕಸಾಪದಷ್ಟು ರಾಜಕೀಯ ರಾಜಕಾರಣದಲ್ಲಿಲ್ಲ
ವಿದ್ಯಾಗಿರಿ, ಮೂಡುಬಿದಿರೆ: ಇರುವುದೊಂದೇ ಕನ್ನಡ ಸಾಹಿತ್ಯ. ಆದರೆ, ಅದರಲ್ಲಿರುವಷ್ಟು ರಾಜಕೀಯ ರಾಜಕಾರಣದಲ್ಲೂ ಇಲ್ಲ. ಕೆಲವು ಜ್ಞಾನಪೀಠಿಗಳು ಮಾತನಾಡುವುದನ್ನು ನೋಡಿದರೆ ರಾಜಕಾರಣಿಗಳೇ ಪರವಾಗಿಲ್ಲ ಅನ್ನಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ನ ಎಂ.ಸಿ. ನಾಣಯ್ಯ ಹೇಳಿದ್ದಾರೆ.
ವಿಶ್ವನುಡಿಸಿರಿಯಲ್ಲಿ ಶನಿವಾರ ಅವರು ರಾಜಕಾರಣ ಕುರಿತು ಸಮಾವೇಶಗೋಷ್ಠಿಯಲ್ಲಿ ಮಾತನಾಡಿದರು.
ಸಾಹಿತ್ಯದಲ್ಲಿ ಎಷ್ಟು ರಾಜಕಾರಣವಿಲ್ಲ, ಇರುವುದೊಂದು ಕನ್ನಡ ಸಾಹಿತ್ಯ. ಒಂದೇ ಸಾಹಿತ್ಯ ಪರಿಷತ್. ಆದರೂ, ಬಂಡಾಯ, ದಲಿತ, ಬ್ರಾಹ್ಮಣ, ವೀರಶೈವ, ನವ್ಯ, ವಿಚಾರವಾದಿಗಳು ಹೀಗೆ ವಿಧಗಳಿದ್ದು, ಅವರ ನಡುವಿನ ರಾಜಕೀಯ ರಾಜಕಾರಣದಲ್ಲಿಯೂ ಇಲ್ಲ. ಕೆಲವು ಜ್ಞಾನಪೀಠಿಗಳು ಮಾತನಾಡುವುದು, ಬರೆಯುವುದು ನೋಡಿದರೆ ನಾವು ರಾಜಕಾರಣಿಗಳೇ ಪರವಾಗಿಲ್ಲ ಎಂಬ ಭಾವನೆ ಮೂಡುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ರಾಜ್ಯ ಸರ್ಕಾರ ಸಹಾಯ ಮಾಡದಿದ್ದರೆ ಸಾಹಿತ್ಯ ಪರಿಷತ್ಗೆ ಬೀಗ ಹಾಕುವುದಾಗಿ ಹೇಳಿದ್ದಾರೆ. ಅವರ ಬಾಯಿಂದ ಅಂತಹ ಮಾತು ಬರಬಾರದು. ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಆಸ್ತಿ. ಅದು ಯಾವತ್ತೂ ಇರಬೇಕು. ಒಂದು ಸಾಹಿತ್ಯ ಸಮ್ಮೇಳನ ನಡೆಸಲು ಸಾಹಿತಿಗಳು ಸರ್ಕಾರದ ಮುಂದೆ ಭಿಕ್ಷೆ ಬೇಡುತ್ತಾರೆ. ಇದರ ಅಗತ್ಯವಿದೆಯೇ..., 6 ಕೋಟಿ ಕನ್ನಡಿಗರ ಸಹಾಯದಿಂದ ವರ್ಷಕ್ಕೊಂದು ಸಮ್ಮೇಳನ ನಡೆಸಲು ನಮ್ಮ ಸಾಹಿತಿಗಳಿಗೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಆಯ್ಕೆ ನಿಮ್ಮದು: ಭ್ರಷ್ಟ, ಗೂಂಡಾ, ಭಯೋತ್ಪಾದಕ, ದಂಧೆಕೋರ ಅಥವಾ ಉತ್ತಮ ರಾಜಕಾರಣಿ ಇವರಲ್ಲಿ ಯಾರು ಬೇಕು ಎಂಬುದನ್ನು ನೀವೇ ನಿರ್ಧರಿಸಿ. ನೀವು ಕೈಗೊಂಡ ನಿರ್ಧಾರವೇ ಮುಂದಿನ ರಾಜಕೀಯವನ್ನು ನಿರ್ಧರಿಸಲಿದೆ. ಈಗಾಗಲೇ ಲೋಕಸಭೆಯಲ್ಲಿ ಶೇ. 30- 35ರಷ್ಟು ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ರಾಜಕೀಯ ಹಳಿತಪ್ಪಿದೆ. ಅದರಲ್ಲಿ ಜನರ ಪಾಲು ಏನೂ ಇಲ್ಲವೇ ದಿಲ್ಲಿ ಚುನಾವಣೆ ಫಲಿತಾಂಶ ಉತ್ತಮ ನಿದರ್ಶನ. ದಿಲ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅಷ್ಟು ಸ್ಥಾನಗಳು ದೊರೆಯದೇ ಇದ್ದಲ್ಲಿ ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಅಂಗೀಕಾರಗೊಳ್ಳುತ್ತಿರಲಿಲ್ಲ. ಆದರೆ, ಲೋಕಪಾಲ, ಲೋಕಾಯಕ್ತದಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ನಂಬಿದ್ದರೆ ನಮ್ಮಷ್ಟು ಮೂರ್ಖರು ಬೇರಾರು ಇರುವುದಿಲ್ಲ. ಪ್ರಜಾಪ್ರಭುತ್ವಕ್ಕೆ ಅಪಾಯ ಎಂಬುದಿದ್ದರೆ ಅದು ಭ್ರಷ್ಟಾಚಾರದಿಂದ ಮಾತ್ರ ಎಂದರು.
ಅಪರಾಧ ಪ್ರಕರಣ ದಾಖಲಾದವರು ಮತ್ತು ಪ್ರಕರಣಗಳಲ್ಲಿ 3 ವರ್ಷಕ್ಕಿಂತ ಹೆಚ್ಚು ಶಿಕ್ಷೆಗೊಳಗಾದ ಜನಪ್ರತಿನಿಧಿಗಳು ಅನರ್ಹಗೊಳ್ಳುತ್ತಾರೆ ಮತ್ತು ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ಆಗ ಎಲ್ಲ ಪಕ್ಷಗಳ ರಾಜಕಾರಣಿಗಳು ವೈಮನಸ್ಸು, ವಿರೋಧಗಳನ್ನು ಮರೆತು ಒಂದಾಗಿ ಸುಗ್ರೀವಾಜ್ಞೆ ಅಂಗೀಕಾರ ಮಾಡಿದರು. ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಇಷ್ಟೇ ಕಾಳಜಿ ತೋರಿಸಿದ್ದರೆ ಒಳ್ಳೆಯದಿತ್ತು ಎಂದರು.
ಸದನದ ನಡತೆ ಕುಸಿದಿದೆ: ಕಾಂಗ್ರೆಸ್ನ ಬಿ.ಎಲ್. ಶಂಕರ್ ಮಾತನಾಡಿ, ವಿಧಾನಸಭೆ ಇರಬಹುದು, ಲೋಕಸಭೆ ಇರಬಹುದು ಸದನದ ನಡತೆ ಕುಸಿದಿದೆ. ವಿಪ್ ಎನ್ನುವ ಅಸ್ತ್ರದ ಮೂಲಕ ಶಾಸಕರನ್ನೆಲ್ಲ ಕಟ್ಟಿ ಹಾಕಲಾಗಿದೆ. ಹಿಂದೆ ರಾಜಕಾರಣಗಳನ್ನು ಬೆಂಬಲಿಸಿ, ತಮ್ಮ ಕೆಲಸ ಮಾಡಿಕೂಳ್ಳುತ್ತಿದ್ದ ಉದ್ಯಮಿಗಳು ಇಂದು ನೇರವಾಗಿ ರಾಜಕೀಯಕ್ಕೆ ಇಳಿಯುತ್ತಿದ್ದಾರೆ. ಇದರಿಂದ ರಾಜಕೀಯದ ವ್ಯಾಪಾರೀಕರಣ, ಅಪರಾಧೀಕರಣವಾಗುತ್ತಿದ್ದು, ವೈಯಕ್ತಿಕ ಹಿತಾಸಕ್ತಿಗಳ ಸಂಘರ್ಷ ಉಂಟಾಗುತ್ತಿದೆ ಎಂದರು.
ರಾಜಕೀಯ ಸುಧಾರಿಸಬೇಕೆಂದರೆ ಉಪಚುನಾವಣೆಗೆ ಅವಕಾಶ ಇರಬಾರದು. ಆಯ್ಕೆಯಾದ ಅಭ್ಯರ್ಥಿ ಅನರ್ಹಗೊಂಡಲ್ಲಿ ಅಥವಾ ಯಾವುದೇ ಕಾರಣಕ್ಕೆ ಆತನ ಸ್ಥಾನ ಖಾಲಿಯಾದಲ್ಲಿ ಚುನಾವಣೆಯಲ್ಲಿ 2ನೇ ಸ್ಥಾನ ಪಡೆದವನಿಗೆ ಮುಂದಿನ ಅವಧಿಗೆ ಅವಕಾಶ ನೀಡಬೇಕು ಎಂದರು.
ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

