ಅಡಕೆ ನಿಷೇಧ: ಬೆಳೆಗಾರರ ಚಿಂತನಾ ಸಭೆಯಲ್ಲಿ ಹೋರಾಟದ ನಿರ್ಣಯ
ಉಪ್ಪಿನಂಗಡಿ: ಅಡಕೆ ಬೆಳೆ ನಿಷೇಧದ ಬಗ್ಗೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಸಮಿತಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಹೋರಾಟ ಹಾಗೂ ಎದುರಾಗುವ ಸಮಸ್ಯೆಯ ಬಗ್ಗೆ ಕೊಯಿಲ- ರಾಮಕುಂಜ ಗ್ರಾಮದ ಅಡಕೆ ಬೆಳೆಗಾರರ ಚಿಂತನಾ ಸಭೆ ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಬಡಿಲ ಎನ್.ಈಶ್ವರ ಭಟ್, ಅಡಕೆ ಬೆಳೆಗಾರರ ಹೋರಾಟ ಇಂದು ನಿನ್ನೆಯದಲ್ಲ. ಸುಮಾರು 30 ವರ್ಷಗಳಿಂದ ಅನೇಕ ಹೋರಾಟ ಮಾಡುತ್ತ ಬಂದಿದ್ದಾರೆ. ಅಡಕೆ ವಿಷಕಾರಿ ಎಂಬ ಮಾಹಿತಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದರೆ ಅಡಕೆಯಲ್ಲಿ ಅದೆಷ್ಟೋ ಔಷಧೀಯ ಗುಣಗಳಿದ್ದು, ಅವುಗಳನ್ನು ಅನಾವರಣಗೊಳಿಸಬೇಕಾಗಿದೆ. ಅಡಕೆ ಬೆಳೆ ಬಗ್ಗೆ ಇರುವ ಡಾ. ಗೊರಕ್ ಸಿಂಗ್ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದು, ಅದನ್ನು ಕಣ್ಣೆತ್ತಿಯೂ ನೋಡಿಲ್ಲ. ರೈತರ ಪರ ಎನಿಸುವ ಯಾವುದೇ ಸಂಘ ಸಂಸ್ಥೆಗಳನ್ನು ನಂಬಿರಲು ಸಾಧ್ಯವಿಲ್ಲ. ಆದ್ದರಿಂದ ರೈತರೇ ಒಗ್ಗೂಡಬೇಕು ಎಂದರು.
ಕಿರಣ ಉಪಾಧ್ಯಾಯ ಮಾತನಾಡಿ, ಅಡಕೆ ಬೆಳೆಗಾರರಿಗೆ ಈ ನಿಷೇಧದ ಬಿಸಿ ಇನ್ನೂ ತಟ್ಟಿಲ್ಲ. ಹಲವು ಸಂಸ್ಥೆಗಳು ರೈತರ ಮೇಲೆ ತಮಗೇ ತಿಳಿಯದ ಹಾಗೆ ದಾಳಿ ಮಾಡುತ್ತಿವೆ. ತಂಬಾಕು ಬೆಳೆಯನ್ನೇ ಅನುಮೋದಿಸಿದ ಸರ್ಕಾರ ಅಡಕೆಯನ್ನು ಯಾಕೆ ನಿಷೇಧಿಸಬೇಕು? ಈ ಬಗ್ಗೆ ಹೋರಾಟ ಮಾಡಿದಾಗ ಮಾತ್ರ ಫಲ ಸಿಗಬಹುದು ಎಂದರು.
ವಿಶ್ವನಾಥ ಭಟ್ ಮಾತನಾಡಿ, ಅಡಕೆ ನಿಷೇಧದಿಂದ ಸಂಕಷ್ಟಗಳು ಬರಬಹುದು. ಅದಕ್ಕೆ ಈಗಾಗಲೇ ಮಾನಸಿಕವಾಗಿ ತಯಾರಾಗಬೇಕು ಎಂದರು. ಹೊಂತಿಲ ವೆಂಕಟೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿವರಾಮ ಭಟ್ ಇದ್ದರು. ಉದಯಕಶ್ಯಪ್ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು.
29ರಂದು ಅಡಕೆ ಬೆಳೆಗಾರರ ಹಿತರಕ್ಷಣಾ ವೇದಿಕೆ ಸ್ಥಾಪನೆ
ಮುಂದಿನ ಸಭೆ ಡಿ.29ರಂದು ರಾಮಕುಂಜದಲ್ಲಿ ನಡೆಯಲಿದ್ದು, ರಾಮಕುಂಜ-ಕೊಯಿಲ- ಹಳೆನೇರೆಂಕಿ ಗ್ರಾಮದ ಅಡಕೆ ಬೆಳೆಗಾರರನ್ನು ಸೇರಿಸಿ ಅಡಕೆ ಬೆಳೆಗಾರರ ಹಿತರಕ್ಷಣಾ ವೇದಿಕೆ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

