ಬಾವಿಗೆ ಬಿದ್ದು ವ್ಯಕ್ತಿ ಸಾವು
ಉಪ್ಪಿನಂಗಡಿ: ಇಲ್ಲಿನ ಹಿರೇಬಂಡಾಡಿ ಗ್ರಾಮದ ಮಠಂದೂರು ಎಂಬಲ್ಲಿ ಅನಂತ ಗೌಡ (50) ಎಂಬವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಬಾವಿಯಿಂದ ನೀರು ಸೇದಲೆಂದು ಹೋದ ಸಂದರ್ಭ ಈ ಅವಘಡ ಸಂಭವಿಸಿದೆ ಎಂದು ಮೃತರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದನದ ಮಾಂಸ ಸಾಗಾಟ ಪತ್ತೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಇಚ್ಲಂಪಾಡಿ ಗ್ರಾಮದ ನೇರ್ಲ ಎಂಬಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಪ್ರಕರಣವನ್ನು ನೆಲ್ಯಾಡಿ ಹೊರಠಾಣೆ ಪೊಲೀಸರು ಪತ್ತೆ ಹಚ್ಚಿ 200 ಕೆ.ಜಿ. ಮಾಂಸವನ್ನು ವಾಹನ ಸಹಿತ ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಕನಿಷ್ಠ 3ಕ್ಕಿಂತಲೂ ಹೆಚ್ಚಿನ ದನಗಳನ್ನು ವಧಿಸಿ ಮಾಂಸ ತಯಾರಿಸಿರುವ ಸಾಧ್ಯತೆ ಅಂದಾಜಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮದ್ಯ ಅಕ್ರಮ ಮಾರಾಟ: ಓರ್ವ ಸೆರೆ
ಅಜೆಕಾರು: ಇಲ್ಲಿನ ಅಂಡಾರು ಗ್ರಾಮದಲ್ಲಿ ಕ್ಯಾಂಟೀನ್ವೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ. ಆರೋಪಿಗಳಾದ ಸದಾಶಿವ ಶೆಟ್ಟಿಗಾರ ಮತ್ತು ವಿಶ್ವನಾಥ ಮೂಲ್ಯ ಎಂಬವರು ಯಾವುದೇ ಪರವಾನಗಿ ಇಲ್ಲದೆ ಮದ್ಯ ಮಾರುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಅಜೆಕಾರು ಠಾಣೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ವಿಶ್ವನಾಥ ಮೂಲ್ಯ ತಪ್ಪಿಸಿಕೊಂಡಿದ್ದಾನೆ. ಸೆರೆ ಸಿಕ್ಕ ಸದಾಶಿವ ಶೆಟ್ಟಿಗಾರನನ್ನು ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ 78 ಮದ್ಯದ ಬಾಟಲಿಗಳು, ನಗದು ಹಣ ರು. 330 ಹಾಗೂ ಮಾರುತಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾರು-ರಿಕ್ಷಾ ಡಿಕ್ಕಿ: ಇಬ್ಬರಿಗೆ ಗಾಯ
ಬ್ರಹ್ಮಾವರ: ಕಾರು- ಆಟೋ ರಿಕ್ಷಾ ಡಿಕ್ಕಿಯಾಗಿ ಆಟೋ ಚಾಲಕ ಹಾಗೂ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಗಾಯಗೊಂಡವರನ್ನು ಮನೀಷಾ ಮತ್ತು ರಂಜಿತ್ ಎಂದು ಗುರುತಿಸಲಾಗಿದೆ. ಆರೋಪಿ ಕಾರು ಚಾಲಕ ಪ್ರವೀಣ್ ಎಂಬಾತ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ಈ ಅಪಘಾತಕ್ಕೆ ಕಾರಣ ಎಂಬುದಾಗಿ ಮನೀಷಾ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಅಜೆಕಾರು: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿದ ಘಟನೆ ಸೋಮವಾರ ಅಂಡಾರು ಗ್ರಾಮದಲ್ಲಿ ನಡೆದಿದೆ. ಮೃತರು ವಾಮನ ಶೆಟ್ಟಿಗಾರ, ಅವರು ವಿಪರೀತ ಮದ್ಯ ಸೇವಿಸುವ ಚಟದವರಾಗಿದ್ದು ಕುಡಿತದ ಚಟ ಬಿಡಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳವು
ಕೋಟ: ಉಳ್ತೂರು ಗ್ರಾಮದ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರು ವಿಶ್ವನಾಥ ಶೆಟ್ಟಿ ಎಂಬವರು ನಿಲ್ಲಿಸಿದ್ದ ಬೈಕನ್ನು ಕಳವು ಮಾಡಲಾಗಿದೆ. ಕಳವಾದ ಬೈಕಿನ ಮೌಲ್ಯ ರು. 35 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಶ್ವನಾಥ ಶೆಟ್ಟಿ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಕೆಲಸದ ಯುವತಿ ನಾಪತ್ತೆ
ಕಾಪು: ಇಲ್ಲಿನ ಯೆಣಗುಡ್ಡೆ ಗ್ರಾಮದ ಹಳೆಕಟಪಾಡಿ ರಸ್ತೆಯ ನಿವಾಸಿ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಭಾನುವಾರ ನಡೆದಿದೆ. ನಾಪತ್ತೆಯಾದ ಯುವತಿ ಲತಾ (21), ಈಕೆ ಇಲ್ಲಿನ ನಿವಾಸಿ ಅಬೂಬಕ್ಕರ್ ಮೊಹಮ್ಮದ್ ಎಂಬವರ ಮನೆಯಲ್ಲಿ ನ.14ರಿಂದ ಕೆಲಸಕ್ಕಿದ್ದಳು. ಭಾನುವಾರ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಅಬೂಬಕ್ಕರ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಣಿ ಮಠ: ರು. 9.03 ಲಕ್ಷ ಉಳಿಕೆ
ವಿಟ್ಲ: ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ವಿಜಯ ಚಾತುರ್ಮಾಸ್ಯವು ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಜು. 22ರಿಂದ ಸೆ.19ರ ತನಕ ಸಂಪನ್ನಗೊಂಡಿದ್ದು, ಒಟ್ಟು ರು. 9.03 ಲಕ್ಷ ಉಳಿಕೆಯಾಗಿದೆ.
ಉಳಿಕೆ ಮೊತ್ತವನ್ನು ಶ್ರೀ ಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ ಮಾಡಲಾಯಿತು. ರು. 4 ಲಕ್ಷಗಳನ್ನು ಪೆರಾಜೆ ಮಠದ ಗೋ ಶಾಲೆಯ ಪುನಃಶ್ಚೇತನ, ರು. 2.03 ಲಕ್ಷ ಸಾಮಗ್ರಿ ಸಾಗಾಟದ ಆಪೆ ವಾಹನ, ರು. 1 ಲಕ್ಷವನ್ನು ಪೆರಾಜೆ ಮಠದ ವೇದಪಾಠ ಶಾಲೆಗೆ, ತಲಾ ರು. 1 ಲಕ್ಷವನ್ನು ಮಹಾಮಂಡಲದ ವಿದ್ಯಾ ನಿಧಿ ಮತ್ತು ಸಹಾಯನಿಧಿಗೆ ವಿನಿಯೋಗಿಸಲಾಯಿತು.
ಸೋಮವಾರ ಪೆರಾಜೆ ಮಠದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಮ್ಮುಖದಲ್ಲಿ ವಿಜಯ ಚಾತುರ್ಮಾಸ್ಯ ಸೇವಾ ಸಮಿತಿಯು ಸಮರ್ಪಿಸಿ, ಆಶೀರ್ವಾದ ಪಡೆದುಕೊಂಡಿತು.
ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕೋಶಾಧಿಕಾರಿ ಬಂಗಾರಡ್ಕ ಜನಾರ್ದನ ಭಟ್, ವಿವಿಧ ಸಮಿತಿಗಳ ಮುಖ್ಯಸ್ಥರಾದ ಹರಿಪ್ರಸಾದ್ ಪರಿಯಾಪ್ಪು, ಮೈಕೆ ಗಣೇಶ ಭಟ್, ಶ್ಯಾಮ ಶಾಸ್ತ್ರಿ ಬಡೆಕ್ಕಿಲ, ಕೇಶವಪ್ರಸಾದ್, ಸತೀಶ ಪಂಜಿಗದ್ದೆ, ಮಹಾಮಂಡಲ ಅಧ್ಯಕ್ಷ ಡಾ.ವೈ.ವಿ. ಕೃಷ್ಣಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

