ದಕ್ಷಿಣ ಕನ್ನಡ

ದುರ್ಬಲರ ಪ್ರೋತ್ಸಾಹಿಸಿದರೆ ಸರ್ವಾಂಗೀಣ ಬೆಳವಣಿಗೆ: ವಾಸು

Published On :

ಪುತ್ತೂರು: ಆರೋಗ್ಯಕರ ಸಮಾಜ ಕಟ್ಟುವಲ್ಲಿ ಎಲ್ಲಾ ಪ್ರಜ್ಞಾವಂತ ನಾಗರಿಕರಿಗೆ ಜವಾಬ್ದಾರಿಯಿದೆ. ಪ್ರತಿಯೊಂದು ಸಮಾಜದಲ್ಲಿ ಪ್ರಬಲರು ದುರ್ಬಲರನ್ನು ಪ್ರೋತ್ಸಾಹಿಸಿದಾಗ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದು ಚಾಮರಾಜನಗರದ ಶಾಸಕ ವಾಸು ಅವರು ಹೇಳಿದರು.
ಅವರು ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಗೌಡ ಸಂಘ, ಗೌಡ ಮಹಿಳಾ ಸಂಘ, ಗೌಡ ವಿದ್ಯಾಥಿ ಸಂಘ ಮತ್ತು ತಾಲೂಕಿನ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ವಾರ್ಷಿಕ ಸಮಾವೇಶ, ಯುವ ಗೌಡ ಸಂಘದ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದ ಸಭಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಪುತ್ತೂರು ಮತ್ತು ವಿಟ್ಲ ಒಕ್ಕಲಿಗ ಗೌಡ ಸಂಘಕ್ಕೆ ದೇಣಿಗೆ ನೀಡಿದರು.
ಮಾಜಿ ಮುಖ್ಯಮಂತ್ರಿ, ಡಿ.ವಿ. ಸದಾನಂದ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಪಿ.ಕೆ. ರಾಜಶೇಖರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ, ಗಂಗ, ಚೋಳ, ಹೊಯ್ಸಳ, ಚಾಲುಕ್ಯ ಮುಂತಾದವರು ಒಕ್ಕಲಿಗರೇ ಆಗಿದ್ದು, ಅವರ ಆಡಳಿತದಲ್ಲಿ ದಕ್ಷಿಣದಿಂದ ಉತ್ತರದ ನೇಪಾಳದವರೆಗೆ ರಾಜ್ಯಭಾರ ನಡೆಯುತ್ತಿತ್ತು, ಕಲಾಕ್ಷೇತ್ರದಲ್ಲಿ ಹೆಸರಾಂತ ನಾಟ್ಯರಾಣಿ ಶಕುಂತಳೆ, ಬೆಂಗಳೂರಿನ ರುವಾರಿ ಕೆಂಪೇಗೌಡ, ವಿಧಾನಸಭಾ ಕಟ್ಟಡದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಪಿಟೀಲು ಚೌಡಯ್ಯ, ನಟಿ ಸರೋಜಾದೇವಿ ಕೂಡಾ ಒಕ್ಕಲಿಗರೇ ಆಗಿದ್ದಾರೆ. ಒಕ್ಕಲಿಗರು ಸಮಾಜದ ಅನ್ನದಾತದಾಗಿದ್ದಾರೆ ಎಂದರು.  ಯುವ ಗೌಡ ಸಂಘದ ನಿರ್ಗಮನ ಅಧ್ಯಕ್ಷ ಪ್ರವೀಣ್ ಕುಂಟ್ಯಾನ ನೂತನ ಅಧ್ಯಕ್ಷ ಎ.ವಿ ನಾರಾಯಣಗೆ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ಎ.ವಿ ನಾರಾಯಣ ಮಾತನಾಡಿ, ಸಂಘದ ಬೆಳವಣಿಗೆಯ ನಿಟ್ಟಿನಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಮೆಡಿಕಲ್ ಕ್ಯಾಂಪ್, ರಕ್ತದಾನ ಶಿಬಿರ, ರೋಗಿಗಳಿಗೆ ವೈದ್ಯಕೀಯ ನೆರವು ಅಲ್ಲದೆ ಈಗಾಗಲೇ ಸ್ವಸಹಾಯ ಗುಂಪುಗಳ ನಿರ್ವಹಣೆಗಾಗಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪ್ರಾರಂಭಿಸಿದ್ದು, ಮುಂದೆ ಬಡ ವಿದ್ಯಾರ್ಥಿಗಳ ನೆರವಿಗೆ ವಿದ್ಯಾನಿಧಿ ಯೋಜನೆ ಆರಂಭಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.