ದಕ್ಷಿಣ ಕನ್ನಡ

ಜನರ ಭಾವನೆಯೊಂದಿಗೆ ಆಟವಾಡುತ್ತಿರುವ ಕಾಂಗ್ರೆಸ್, ಬಿಜೆಪಿ

Published On :

ಬಂಟ್ವಾಳ: ಎರಡು ಸಮುದಾಯಗಳ ನಡುವೆ ವಿವಾದಗಳನ್ನು ಸೃಷ್ಟಿಸಿ ಮತಪಡೆಯುವ ಓಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯದ ಜನತೆಯ ಭಾವನೆಗಳೊಂದಿಗೆ ಆಟವಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶನಿವಾರ ಸಂಜೆ ಫರಂಗಿಪೇಟೆ ಕೇಂದ್ರ ಮೈದಾನದ ಅಬ್ದುಲ್ ನಜೀರ್ ಸಾಬ್ ವೇದಿಕೆಯಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಹುಬ್ಬಳ್ಳಿಯಲ್ಲಿ ಕಳೆದ 20 ವರ್ಷಗಳ ಹಿಂದೆ ಕಾಂಗ್ರೆಸ್ ಈದ್ಗಾ ಮೈದಾನದ ವಿವಾದವನ್ನು ಹುಟ್ಟು ಹಾಕಿದೆ. ಬಿಜೆಪಿ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರದ  ಅವಧಿಯಲ್ಲಿ ಚಿಕ್ಕಮಗಳೂರು ಬಾಬಾಬುಡನ್‌ಗಿರಿ ವಿವಾದ ಸೃಷ್ಟಿಯಾಗಿದ್ದು, ಎರಡೂ ಪಕ್ಷಗಳು ಸೃಷ್ಟಿಸಿರುವ ಆ ವಿವಾದದಿಂದಾಗಿ ಜನತೆಯ ನೆಮ್ಮದಿ ಕಳೆದುಹೋಗಿದೆ ಎಂದು ಆರೋಪಿಸಿದರು.
ಬಿಜೆಪಿ ಅಕ್ರಮಕ್ಕೆ ಕಾಂಗ್ರೆಸ್ ಬೆಂಬಲ: ಉಳ್ಳಾಲದಿಂದ- ಉಡುಪಿ ವರೆಗೆ ಸಾಮರಸ್ಯಕ್ಕಾಗಿ ನಡಿಗೆಯ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಅಶಾಂತಿ ಸೃಷ್ಟಿಸುವುದರಲ್ಲಿ ನಿಸ್ಸೀಮರಾಗಿರುವ ಕಾಂಗ್ರೆಸ್‌ಗೆ ಸಾಮರಸ್ಯದ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಇದೆ ಎಂದು ಪ್ರಶ್ನಿಸಿದರು. ಕಳೆದ ಚುನಾವಣೆಯಲ್ಲಿ ಬದಲಾವಣೆಗಾಗಿ ಬಿಜೆಪಿಗೆ ಮತ ನೀಡಿ ಎಂದಿದ್ದ ಬಿಜೆಪಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯವನ್ನು ಲೂಟಿ ಹೊಡೆಯುವ ಕಾರ್ಯ ನಡೆಸಿದೆ. ಕಾಂಗ್ರೆಸ್ ಬಿಜೆಪಿಯ ಎಲ್ಲಾ ಅಕ್ರಮಗಳಿಗೂ ಬೆಂಬಲವಾಗಿ ನಿಂತಿದೆ ಎಂದು ಟೀಕಿಸಿದರು.
ಫೆ.17ರಂದು ನಡೆಯಲಿರುವ ಪುದು ಗ್ರಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಚುನಾಯಿಸುವಂತೆ ಕರೆ ನೀಡಿದ ಕುಮಾರಸ್ವಾಮಿ, ಕಳೆದ 16 ವರ್ಷದ ಹಿಂದೆ ಪುದು ಮಂಡಲ ವ್ಯಾಪ್ತಿಯಲ್ಲಿದ್ದಂತೆ ಜೆಡಿಎಸ್ ಮೆರೆಯಬೇಕು ಎಂದರು.
ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು.
ದ.ಕ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಬಿ. ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಬಿ. ನಾಗರಾಜ ಶೆಟ್ಟಿ, ಮುಖಂಡರಾದ ಮಹಮ್ಮದ್ ಕುಂಞ ವಿಟ್ಲ, ಸದಾನಂದ ಶೆಟ್ಟಿ, ಎಂ.ಜಿ. ಹೆಗ್ಡೆ, ಚಿತ್ತರಂಜನ್ ರೈ, ಡಾ. ಉದಯಕುಮಾರ್, ವಸಂತ ಪೂಜಾರಿ, ಜಯಲಕ್ಷ್ಮೀ ಹೆಗ್ಡೆ, ಡಿ.ಎಸ್. ಅಸ್ಲಂ, ರತ್ನಾಕರ ಸುವರ್ಣ, ಸೌಂದರ್ಯ ರಮೇಶ್, ಕೃಷ್ಣಪ್ಪ ಪೂಜಾರಿ, ಮಹಮ್ಮದ್ ಶಫಿ, ಅಝೀಝ್ ಮುಲಾರ್, ಶ್ರೀಕಾಂತ ಶೆಟ್ಟಿ, ಪಿ.ಎ. ರಹೀಂ, ದಿನೇಶ್ ಬಿ.ಎಸ್. ಸುಬ್ರಹ್ಮಣ್ಯ, ಬಿ. ಮೋಹನ್ ಮತ್ತಿತರರು ವೇದಿಕೆಯಲ್ಲಿದ್ದರು
ಸ್ವಾಗತ ಸಮಿತಿ ಅಧ್ಯಕ್ಷ ವಿ.ಎಚ್. ಅಬ್ದುಲ್ ಕರೀಂ ಸ್ವಾಗತಿಸಿದರು. ಗೌರವಾಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬೂಬಕ್ಕರ್ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.