ವಿಷಪ್ರಾಷನದಿಂದ ಹಸುಗಳ ಹತ್ಯೆ: ದೂರು
ಬೆಳ್ತಂಗಡಿ: ಹಸುಗಳೆರಡನ್ನು ವಿಷ ಹಾಕಿ ಕೊಂದ ಬಗ್ಗೆ ನಾರಾವಿ ಗ್ರಾಮದ ವ್ಯಕ್ತಿಯೊಬ್ಬರು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಜಲು ಮನೆಯ ಶಂಕರ ಎಂಬವರು ಕಳೆದ ಒಂದು ತಿಂಗಳ ಹಿಂದೆ ಮೇಯಲು ಬಿಟ್ಟ ಸಂದರ್ಭ ಅದು ಹಟ್ಟಿಗೆ ಬಾರದೆ ಅಸು ನೀಗಿತ್ತು. ಬಳಿಕ ಇನ್ನೊಂದು ಹಸುವನ್ನು ಜ.19 ರಂದು ಮೇಯಲು ಹೊರಗಡೆ ಬಿಟ್ಟಿದ್ದರು. ಅದು ಕೂಡ ಸಂಶಯಾಸ್ಪದವಾಗಿ ಮೃತಪಟ್ಟಿತ್ತು. ಎರಡನೇ ದನವನ್ನು ಅಂದೇ ಪರಿಸರದ ಸಿಪ್ರಿ ಪಿರೇರಾ ಎಂಬವರು ಕಟ್ಟಿ ಹಾಕಿದ್ದರು. ಮಧ್ಯರಾತ್ರಿ ಅದು ಗಾಯಗಳೊಂದಿಗೆ ಮನೆಗೆ ಬಂದಿತ್ತಾದರೂ ಬಳಿಕ ಮೃತಪಟ್ಟಿತ್ತು. ಹೀಗಾಗಿ ಶಂಕರ ಅವರಿಗೆ ಸುಮಾರು ರು. 50 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸಿಪ್ರಿ ಅವರು ದನಗಳಿಗೆ ವಿಷ ಹಾಕಿ ಸಾಯಿಸಿದ್ದಾರೆಂದು ದೂರಲಾಗಿದೆ. ಕ್ರಮಕ್ಉಕೆ ಬೆಳ್ತಂಗಡಿ ಪೊಲೀಸರಲ್ಲಿ ವಿನಂತಿಸಲಾಗಿದೆ.
ನಾಳೆ ಕೆಲವೆಡೆ ವಿದ್ಯುತ್ ಇಲ್ಲ
ಮಂಗಳೂರು: ಕಾವೂರು ಉಪಕೇಂದ್ರದ ಪರಿವರ್ತಕ ಸಂಖ್ಯೆ 7ರಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಫೆ. 7ರಂದು ಬೆಳಗ್ಗೆ 10 ರಿಂದ ಸಂಜೆ 5ರ ತನಕ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ನಿಲುಗಡೆ ಪ್ರದೇಶಗಳು: ಬಜಪೆ ಫೀಡರ್, ಇನ್ಫೋಸಿಸ್ ಫೀಡರ್, ಪಚ್ಚನಾಡಿ ಫೀಡರ್, ವಾಮಂಜೂರು, ಹರಿಪದವು, ಯೆಯ್ಯಾಡಿ, ಸುತ್ತಮುತ್ತಲಿನ ಪ್ರದೇಶಗಳು.
ಇಂದು ರೇಡಿಯೋ ಸಂಘ ಉಪನ್ಯಾಸ
ಮಂಗಳೂರು: ಮಂಗಳೂರಿನ ರೇಡಿಯೋ ಕೇಳುಗರ ಸಂಘದ ಆಶ್ರಯದಲ್ಲಿ 'ಜೀವನದ ಗುರಿ' ಕುರಿತು ಉಪನ್ಯಾಸ ಕಾರ್ಯಕ್ರಮ ಫೆ.6ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಯು.ರಾಮ ರಾವ್, ಸಂಜೆ 6ಕ್ಕೆ ನಗರದ ಎಸ್ಡಿಎಂ ಕಾಲೇಜು ಸಭಾಭವನದಲ್ಲಿ ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎಸ್.ಕೃಷ್ಣ ಭಟ್ ಉಪನ್ಯಾಸ ನೀಡುವರು. ಸುರತ್ಕಲ್ ವಿದ್ಯಾದಾಯಿನಿ ಹೈಸ್ಕೂಲ್ ಸಂಚಾಲಕಿ ಉಮಾದೇವಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ಎನ್.ಉಪೇಂದ್ರ ಪ್ರಭು ಅಧ್ಯಕ್ಷತೆ ವಹಿಸುವರು ಎಂದರು.
ಇಂದಿನಿಂದ ಎಸ್ಡಿಎಂನಲ್ಲಿ ಚಲನಚಿತ್ರೋತ್ಸವ
ಮಂಗಳೂರು: ಮಂಗಳೂರಿನ ಸಹಮತ ಫಿಲಂ ಸೊಸೈಟಿ ಆಶ್ರಯದಲ್ಲಿ ಎಸ್ಡಿಎಂ ಬಿಸಿನೆಸ್ ಮೆನೇಜ್ಮೆಂಟ್ ಕಾಲೇಜಿನಲ್ಲಿ ಭಾರತೀಯ ಸಿನಿಮಾ ರಂಗದ ಒಂದು ನೂರು ವರ್ಷಗಳ ನೆನಪಲ್ಲಿ 'ಚಲನಚಿತ್ರೋತ್ಸವ-2013' ಫೆ.6ರಿಂದ 10ರ ವರೆಗೆ ನಡೆಯಲಿದೆ ಎಂದು ಸಹಮತ ಫಿಲಂ ಸೊಸೈಟಿ ಅಧ್ಯಕ್ಷ ಪ್ರೊ.ಕೆ.ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 6ರಂದು ಸಂಜೆ 3ಕ್ಕೆ ರಂಗಭೂಮಿ, ಸಿನಿಮಾ ನಿರ್ದೇಶಕ ಸದಾನಂದ ಸುವರ್ಣ ಅಧ್ಯಕ್ಷತೆಯಲ್ಲಿ ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಉದ್ಘಾಟಿಸುವರು. ಪ್ರತಿದಿನ ಬೆಳಗ್ಗೆ 10, ಸಂಜೆ 4 ಹಾಗೂ 6.30ಕ್ಕೆ ಆಯ್ದ ಸಿನಿಮಾ ಪ್ರದರ್ಶನವಿರುತ್ತದೆ. ಕನ್ನಡ, ಹಿಂದಿ, ಇಂಗ್ಲಿಷ್, ಬಂಗಾಳಿ, ಮಲಯಾಳಂ, ತೆಲುಗು, ಅಸ್ಸಾಮ್, ತಮಿಳು ಭಾಷೆಗಳ 15 ಸಿನಿಮಾ ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ ವಿದ್ಯಾರ್ಥಿಗಳಿಗೆ ಪ್ರದರ್ಶನವಾಗಲಿದೆ ಎಂದರು.
ಇಂದು 'ವೃತ್ತಿ ಶಿಕ್ಷಣ ವಸ್ತುಗಳ ಪ್ರದರ್ಶನ'
ಮಂಗಳೂರು: ದ.ಕ. ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವೃತ್ತಿಪರ ಶಿಕ್ಷಣ ಸಂಘ ವತಿಯಿಂದ ಫೆ. 6 ರಿಂದ 7ರ ತನಕ ಅತ್ತಾವರದ ಎಸ್ಎಂ. ಕುಶೆ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಮಟ್ಟದ 'ವೃತ್ತಿ ಶಿಕ್ಷಣ ವಸ್ತುಗಳ ವಸ್ತುಪ್ರದರ್ಶನ' ನಡೆಯಲಿದೆ. ಪ್ರದರ್ಶನವನ್ನು ಬೆಳಗ್ಗೆ 10ಕ್ಕೆ ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಉದ್ಘಾಟಿಸುವರು. ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಸಹ ನಿರ್ದೇಶಕಿ ಫಿಲೋಮಿನಾ ಲೋಬೋ ಅಧ್ಯಕ್ಷತೆ ವಹಿಸುವರು. ವಸ್ತುಪ್ರದರ್ಶನದಲ್ಲಿ ಜಿಲ್ಲೆಯ 11 ಸರ್ಕಾರಿ ಪ್ರೌಢಶಾಲೆ, 29 ಅನುದಾನಿತ ಪ್ರೌಢಶಾಲೆ, 10 ಅನುದಾನರಹಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 50 ವೃತ್ತಿ ಶಿಕ್ಷಣ ಶಿಕ್ಷಕರು ಹಾಗೂ 250 ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಳ್ಳುವರು. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ತಯಾರಿಸಿದ ವಿವಿಧ ನಮೂನೆಯ ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯದ ಅಡಿಯಲ್ಲಿ ತಯಾರಿಸಿದ ಅಲಂಕಾರಿ, ಆಟಿಕೆ, ಪಾಠೋಪಕರಣ ವಸ್ತುಗಳು ಹಾಗೂ ಕಸದಿಂದ ರಸ, ಕಲಾಕೃತಿಗಳು, ಫಿನಾಯಿಲ್, ದ್ರವಸಾಬೂನು, ವ್ಯಾಸಲೀನ್, ಮ್ಯಾಟ್ ಕ್ಯಾಂಡಲ್. ಕಸಿಕಟ್ಟಿದಗಿಡಗಳು ಪ್ರದರ್ಶನಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಶಾಖೆ ಅಧ್ಯಕ್ಷ ಡಿ.ಬಿ. ಹನುಮಂತರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಜಿಲ್ಲಾ ಭಾವೈಕ್ಯತಾ ಮಕ್ಕಳ ಮೇಳ
ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಪುತ್ತೂರು ತಾಲೂಕು ಸಮಿತಿ ಹಾಗೂ ಕೆಯ್ಯೂರು ಜಿಲ್ಲಾ ಪಂಚಾಯಿತಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಫೆ.6ರಂದು ಜಿಲ್ಲಾ ಭಾವೈಕ್ಯತಾ ಮಕ್ಕಳ ಮೇಳವು ಕೆಯ್ಯೂರಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಭಾರತ ಸೇವಾದಳ ತಾಲೂಕು ಸಮಿತಿ ಅಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ ಧ್ವಜಾರೋಹಣಗೈಯಲಿದ್ದಾರೆ. ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಸಂಪ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಫಕೀರ ಮೇಳವನ್ನು ಉದ್ಘಾಟಿಸಲಿದ್ದಾರೆ. ಭಾರತ ಸೇವಾದಳ ತಾಲೂಕು ಸಮಿತಿಯ ಅಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಪ್ರದರ್ಶನ ಮಳಿಗೆ ಉದ್ಘಾಟಿಸಲಿದ್ದಾರೆ. ಮೇಳದಲ್ಲಿ ಸುಮಾರು 3000 ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆರ್ಥಿಕ ಸಮಿತಿ ಅಧ್ಯಕ್ಷ ಕೆ. ಶಶಿಧರ ರಾವ್ ಬೊಳಿಕ್ಕಳ, ಪುತ್ತೂರು ತಾಲೂಕು ಭಾರತ ಸೇವಾದಳ ಕಾರ್ಯದರ್ಶಿ ಪುಷ್ಪಾವತಿ ಪಿ., ಭಾರತ ಸೇವಾದಳ ಸಮನ್ವಯಾಧಿಕಾರಿ ಬಿ.ಜಿ. ಬಾಗೇವಾಡಿ ಹಾಜರಿದ್ದರು.
ಇಂದು ಪಂಜ ದೇಗುಲ ಬ್ರಹ್ಮರಥೋತ್ಸವ
ಸುಬ್ರಹ್ಮಣ್ಯ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಸೀಮೆಯ ಭಕ್ತರಿಂದ ಹಸಿರು ಕಾಣಿಕೆ ಸಮರ್ಪಣಾ ಭಾನುವಾರ ನಡೆಯಿತು. ಪಂಜದ ಪುತ್ಯ ಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿವಿಧ ಕಡೆಗಳಿಂದ ತಂದ ಹಸಿರು ಕಾಣಿಕೆಯು ಮೆರವಣಿಗೆ ಮೂಲಕ ದೇವಳಕ್ಕೆ ಸಮರ್ಪಣೆ ಗೊಂಡಿತು. ಸೋಮವಾರ ಹಗಲು ಬೈಗಿನ ಬಲಿ, ರಾತ್ರಿ ಉತ್ಸವ ಹಾಗೂ ಮಹಾಲಪೂಜೆ ನಡೆಯಿತು. ಮಂಗಳವಾರ ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ, ರಾತ್ರಿ ದೀಪೋತ್ಸವ ನಡೆಯಿತು. ಸಹಸ್ರಾರು ಭಕ್ತರು ಶ್ರೀ ದೇವರ ದರುಶನ ಬಲಿಯನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ದರ್ಶನ ಬಲಿಯ ಸಂದರ್ಭದಲ್ಲಿ ಬಸವ ಮತ್ತು ಕೇರಳದ ಚೆಂಡೆ ವಿಶೇಷ ಆಕರ್ಷಣೆಯಾಗಿತ್ತು. ರಾತ್ರಿ ಶ್ರೀ ದೇವರ ದೀಪೋತ್ಸವ ನೆರವೇರಿತು. ಬುಧವಾರ ರಾತ್ರಿ ವೈಭವದ ಬ್ರಹ್ಮರಥೋತ್ಸವ ಜರುಗಲಿದೆ. ದೇವಳದ ಜಾತ್ರೋತ್ಸವದಲ್ಲಿ ಪ್ರಮುಖ ಉತ್ಸವವಾದ ದರ್ಶನ ಬಲಿ ವೀಕ್ಷಿಸಲು ಭಕ್ತ ಸಾಗರವೇ ಹರಿದು ಬಂದಿದ್ದು, ಸುಡು ಬಿಸಿಲಿನ ನಡುವೆಯೂ ಶ್ರೀ ದೇವರ ಉತ್ಸವ ವೀಕ್ಷಿಸಿ, ಬಟ್ಟಲು ಕಾಣಿಕೆ ಅರ್ಪಿಸಿ ಪ್ರಸಾದ ಸ್ವೀಕರಿಸಿದರು. ಈ ಬಾರಿ ಜಾತ್ರೋತ್ಸವ ನಡೆಯುವ ಸ್ಥಳದಲ್ಲಿ ಪ್ರತಿ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ವ್ಯಾಪಾರಿ ಮಳಿಗೆಗಳನ್ನು ತೆರೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

