ದಕ್ಷಿಣ ಕನ್ನಡ

ಮಲ್ಪೆ ಕಡಲ ತಡಿಯಲ್ಲಿ ಶ್ರೀನಿವಾಸ ಕಲ್ಯಾಣ ಸಂಪನ್ನ

Published On :

ಮಲ್ಪೆ: ಬೆಟ್ಟದೂರು ತಿರುಪತಿಯಿಂದ ಬಂದ ಶ್ರೀನಿವಾಸ ಕಡಲೂರು ಮಲ್ಪೆಯಲ್ಲಿ ಭಾನುವಾರ ಸಮುದ್ರರಾಜನ ಮಗಳು ಪದ್ಮಾವತಿಯನ್ನು ವಿವಾಹವಾದ... ಇದಕ್ಕೆ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿಗಳಾದರು...
ಭಾನುವಾರ ಇಳಿಹೊತ್ತು, ಅತ್ತ ಸೂರ್ಯ ಸಮುದ್ರದಲ್ಲಿ ಮುಳುತ್ತಿದ್ದಂತೆ ಇತ್ತ ಮಲ್ಪೆ ತೀರದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ನಡೆಸಲಾಯಿತು. ಉಡುಪಿ ಕರಂಬಳ್ಳಿಯ ಶ್ರೀವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಮಂದಿ ಭಾಗವಹಿಸಿದ್ದರು.
ಮಲ್ಪೆಗೆ ಭವ್ಯ ಮೆರವಣಿಗೆ: ತಿರುಪತಿಯ ತಿರುಮಲ ದೇವಸ್ಯಂ ಟ್ರಸ್ಟಿನ ಉಸ್ತುವಾರಿಯಲ್ಲಿ ನಡೆಯುವ ಈ ಕಲ್ಯಾಣ ಮಹೋತ್ಸವಕ್ಕೆ ತಿರುಪತಿಯಿಂದ ಶ್ರೀನಿವಾಸ, ಭೂದೇವಿ - ಶ್ರೀದೇವಿ ದೇವರ ವಿಗ್ರಹಗಳು ಶನಿವಾರ ಸಂಜೆ ಉಡುಪಿಗೆ ಆಗಮಿಸಿದ್ದು, ಅಲ್ಲಿಂದ ಭವ್ಯ ಮೆರವಣಿಗೆಯಲ್ಲಿ ಮಲ್ಪೆಗೆ ತಂದು ವೇದಿಕೆಯಲ್ಲಿ ಸ್ಥಾಪಿಸಲಾಗಿದ್ದವು. ನಂತರ ಧಾರ್ಮಿಕ ಸಭೆ ನಡೆಯಿತು.
ವಿವಿಧ ಧಾರ್ಮಿಕ ಆಚರಣೆ: ಭಾನುವಾರ ಬೆಳಗ್ಗೆ ಸುಪ್ರಭಾತ ಪೂಜೆ ನಡೆಯಿತು. ಸಂಜೆ 5.30ರಿಂದ ಕಲ್ಯಾಣೋತ್ಸವದ ಒಂದೊಂದೇ ವಿಧಿಗಳು ಆರಂಭವಾದವು. ವರ ಶ್ರೀನಿವಾಸನ ಕಡೆಯ ದಿಬ್ಬಣ, ವಧು ಪದ್ಮಾವತಿಯ ಕಡೆಯ ದಿಬ್ಬಣ, ನಂತರ ವೇದಿಕೆಯಲ್ಲಿ ವಧುವರರಿಗೆ ಸ್ನಾನ ಶೃಂಗರಾದಿಗಳು, ಕಪ್ಪ ಕಾಣಿಕೆಗಳ ಸಮರ್ಪಣೆ, ಕೊನೆಗೆ ವಿವಾಹ...
ಎಲ್ಲವೂ ತಿರಪತಿಯಿಂದ ಬಂದಿದ್ದ ವೈದಿಕರ ಉಸ್ತುವಾರಿಯಲ್ಲಿ ಸಂಪ್ರದಾಯಬದ್ಧವಾಗಿ ನರೆವೇರಿದವು. ಇದನ್ನು ಸಹಸ್ರ ಸಂಖ್ಯೆಯ ಭಕ್ತರ ಕಣ್ಮನ ತುಂಬಿಕೊಂಡರು.
ಎತ್ತರದ ಭವ್ಯ ವೇದಿಕೆಯಲ್ಲಿ ನಡೆಯುತ್ತಿದ್ದ ಈ ಎಲ್ಲಾ ಕಾರ್ಯಕ್ರಮಗಳನ್ನು ಎಲ್ಲಾ ಜನರು ನೆಲದಲ್ಲಿ ಕುಳಿತು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ವಿವಾಹದ ಕೊನೆಗೆ ಶ್ರೀನಿವಾಸ ದೇವರಿಗೆ ಅರ್ಪಿಸಿದ, ವಿಶೇಷವಾಗಿ ತಿರಪತಿಯಿಂದ ತರಿಸಲಾಗಿದ್ದ ಸುಮಾರು 30 ಸಾವಿರ ಲಡ್ಡುಗಳನ್ನು ಮತ್ತು ಪದ್ಮಾವತಿ ದೇವಿಗೆ ಉಡುಗೊರೆಯಾಗಿ ಸಲ್ಲಿಸಿದ 20 ಸಾವಿರ ಬಳೆಗಳನ್ನು ಭಕ್ತರಿಗೆ ವಿತರಿಸಲಾಯಿತು.
ಪಕ್ಷಾತೀತ ಪಾಲ್ಗೊಳ್ಳುವಿಕೆ: ಮಲ್ಪೆ ಸಮುದ್ರ ತೀರವಂತೂ ಶ್ರೀನಿವಾಸ ದೇವರ ಭಕ್ತಿಭಾವ ತುಂಬಿತ್ತು. ವಿಶೇಷವಾಗಿ ಮೊಗವೀರರಂತೂ ಅಪೂರ್ವವಾದ ಈ ಕಾರ್ಯಕ್ರಮವನ್ನು ವೀಕ್ಷಿಸಿ ಸಂತಸಪಟ್ಟರು. ಇದು ಕೇವಲ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿರದೇ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನೂ ಕಲ್ಯಾಣ ಸಮಿತಿಯಲ್ಲಿ ಒಳಗೊಳ್ಳಲಾಗಿತ್ತು ಮತ್ತು ಅವರೆಲ್ಲರೂ ಕಾರ್ಯಕ್ರಮದಲ್ಲಿ ಇದ್ದರು.
ಕರಂಬಳ್ಳಿ ದೇವಳದ ಆಡಳಿತ ಮೊಕ್ತೇಸರರೂ, ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ಉದ್ಯಮಿ ಸೂರ್ಯಪ್ರಕಾಶ್, ಗೌರವಾಧ್ಯಕ್ಷ ಉದ್ಯಮಿ ಜಿ. ಶಂಕರ್, ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಉಪಾಧ್ಯಕ್ಷರಾದ ನಗರಸಭಾಧ್ಯಕ್ಷ ಕಿರಣ್ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಕಿದಿಯೂರು, ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಜಿ. ವಾಸುದೇವ ಭಟ್, ಮನೋಹರ ಶೆಟ್ಟಿ, ಎರ್ಮಾಳು ಶಶಿಧರ ಶೆಟ್ಟಿ, ದಿವಾಕರ ಶೆಟ್ಟಿ, ಆನಂದ ಕುಂದರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.