ಪೋಲಿಯೊ ಪೀಡಿತನ ಈಜು ಸಾಧನೆ 'ಲಿಮ್ಕಾ ದಾಖಲೆ'
ಉಡುಪಿ: ಪೋಲಿಯೊ ಪೀಡಿತ ಕಾಲಿನೊಂದಿಗೆ, ಕೈಗಳೆರಡನ್ನೂ ಬೆನ್ನ ಹಿಂದೆ ಪೊಲೀಸ್ ಕೋಳಗಳಿಂದ ಬಿಗಿದುಕೊಂಡು ಸುಮಾರು 3.33 ನಾಟಿಕಲ್ ಮೈಲಿ (6 ಕಿ.ಮೀ.) ದೂರವನ್ನು 7 ಗಂಟೆಗಳಲ್ಲಿ ಕ್ರಮಿಸಿದ ಜಿಲ್ಲೆಯ ಸಾಧಕ ಪ್ರಕಾಶ್ ಖಾರ್ವಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನ ಮಾನ್ಯತೆ ದೊರಕಿದೆ.
ಉಡುಪಿ ಜಿಲ್ಲೆಯ ಕೋಡಿ ಕನ್ಯಾನ ಗ್ರಾಮದ ಪ್ರಕಾಶ್ ಖಾರ್ವಿಗೆ 35ರ ಹರೆಯ. ಹುಟ್ಟಿನಿಂದಲೇ ಒಂದು ಕಾಲು ಪೋಲಿಯೊ ಪೀಡಿತವಾಗಿದೆ. ಅವರು 2011ರ ಫೆ. 7ರಂದು ಮಲ್ಪೆ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್ ವರೆಗೆ ಈ ದೂರ ಕ್ರಮಿಸಿ ಈ ವಿಕ್ರಮ ಸಾಧಿಸಿದ್ದಾರೆ. ಈ ಸಾಧನೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ತಮ್ಮ ದಾಖಲೆಗಳ ಪುಸ್ತಕದಲ್ಲಿ ಸೇರಿಸಿಕೊಂಡು ಪ್ರಕಾಶ್ ಖಾರ್ವಿ ಅವರ ಸಾಹಸಕ್ಕೆ ಶಹಬಾಸ್ ಎಂದಿದೆ.
ಈ ಬಗ್ಗೆ ಪ್ರಕಾಶ್ ಖುದ್ದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಮಗಾದ ಸಂತೋಷವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.
ಸಾಧನೆ ಸಾಮಾನ್ಯವಲ್ಲ: ಮೀನುಗಾರಿಕೆ ಕುಲಕಸುಬಾಗಿರುವ ಮೊಗವೀರ ಸಮುದಾಯದ ಈ ಯುವಕನಿಗೆ ಈಜು ಮೀನಿಗಿರುವಷ್ಟೇ ಸಲೀಸು. ಆದರೂ ಸಮುದ್ರದಲ್ಲಿ ಭಾರಿ ಅಲೆಗಳ ನಡುವೆ ಅದೂ ಕೈಗಳ ನೆರವಿಲ್ಲದೆ ಒಂಟಿ ಕಾಲಿನಲ್ಲಿ ತಾಸುಗಟ್ಟಲೆ ಈಜುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಅಂದು ಪ್ರಕಾಶ್ ಖಾರ್ವಿ ಈ ಸಾಧನೆ ಮಾಡಿದ ದಿನ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿತ್ತು, ಸಹಜವಾಗಿಯೇ ಅಲೆಗಳು ಅವರನ್ನು ಹಿಂದಕ್ಕೆ ತಳ್ಳುತಿದ್ದವು. ಆದರೂ ಅವರು ಕೇವಲ 7 ಗಂಟೆಗಳಲ್ಲಿ ದಡ ಸೇರಿದ್ದರು. ತನ್ನ ತಂದೆ ಸೋಮ ಖಾರ್ವಿಯಿಂದ ಈಜು ಕಲಿತು ಅವರಿಂದಲೇ ಈ ಸಾಧನೆ ಸ್ಫೂರ್ತಿ ದೊರಕಿತು. ಅಲ್ಲದೆ ಮುಂದೆ ಗಿನ್ನಿಸ್ ದಾಖಲೆ ಮಾಡುವ ಆಸೆ ಇದೆ, ಅದಕ್ಕಾಗಿ ಪ್ರತಿದಿನ ಈಜು ಅಭ್ಯಾಸ ಮಾಡುತ್ತಿದ್ದೇನೆ ಎಂದರು. ಅವರು ಈ ಹಿಂದೆಯೂ ಇದಕ್ಕೂ ಮೀಗಿಲಾದ ಸಾಧನೆಗಳನ್ನು ಮಾಡಿದ್ದರು. ಅವರು ಹಂಗಾರಕಟ್ಟೆಯಿಂದ ಮಲ್ಪೆ ತೀರದವರೆಗೆ ಸಮುದ್ರದಲ್ಲಿ 25 ಕಿ.ಮೀ. ಮತ್ತು ಗಂಗೊಳ್ಳಿ ಅಳಿವೆಯಿಂದ ಹಂಗಾರಕಟ್ಟೆವರೆಗೆ 50 ಕಿ.ಮೀ. ದೂರವನ್ನು ಈಜಿ ಕ್ರಮಿಸಿದ್ದಾರೆ. ಪ್ರಕಾಶ್ ಖಾರ್ವಿ ತಂದೆ ಸೋಮ ಖಾರ್ವಿ, ಸಲಹೆಗಾರ (ಹಲ್ಲಿನಿಂದ ತೆಂಗಿನಕಾಯಿ ಸುಲಿದು ಗಿನ್ನಿಸ್ ದಾಖಲೆ ಮಾಡಿರುವ) ರಾಜೇಶ್ ಪ್ರಭು, ಅವರ ಬೆಂಬಲಕ್ಕೆ ನಿಂತಿರುವ ಸುಮಧುರ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಖಾರ್ವಿ ಮತ್ತು ಪೊಲೀಸ್ ಇಲಾಖೆಯ ಅಶೋಕ್ ಖಾರ್ವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

