ದಕ್ಷಿಣ ಕನ್ನಡ

ವಿಟ್ಲ: ಅಮಲಿನಲ್ಲಿ ತಾಯಿಯನ್ನೇ ಕೊಂದ ಮಗ

Published On :

ವಿಟ್ಲ: ಕುಡಿತದ ಅಮಲಿನಲ್ಲಿದ್ದ ಮಗ ತನ್ನ ತಾಯಿಯ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
 ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಪಿಲಿಂಜ ನಿವಾಸಿ ಸಂಕಮ್ಮ (75 ) ಮೃತರು. ಈಕೆಯ ಏಕಮಾತ್ರ ಪುತ್ರ ಡೊಂಬಯ್ಯ ಪೂಜಾರಿ (51) ಆರೋಪಿಯಾಗಿದ್ದು, ವಿಟ್ಲ ಪೊಲೀಸ್ ವಶದಲ್ಲಿದ್ದಾನೆ.
ನಡೆದಿದ್ದೇನು?: ಕುಡಿತದ ದಾಸನಾಗಿದ್ದ ಡೊಂಬಯ್ಯ, ಮಂಗಳವಾರ ರಾತ್ರಿ ಮನೆಗೆ ಬಂದವನು ಜಗಳ ಎಬ್ಬಿಸಿ ಹೊರಗಡೆ ಜಗಲಿಯಲ್ಲಿ ಕುಳಿತುಕೊಂಡಿದ್ದ ತಾಯಿಯ ತಲೆಗೆ ತಾಳೆ ಕಟ್ಟಿಗೆಯಲ್ಲಿ ಹೊಡೆದಿದ್ದಾನೆ. ತಡೆಯಲು ಬಂದ ಪತ್ನಿ ಲಲಿತ ಮತ್ತು ಇಬ್ಬರು ಮಕ್ಕಳನ್ನು ಬೆದರಿಸಿ ಓಡಿಸಿದ್ದಾನೆ.
 ರಾತ್ರಿಯೀಡೀ ಕಾಡಿನಲ್ಲಿ ಕಾಲಕಳೆದ ಪತ್ನಿ ಮತ್ತು ಮಕ್ಕಳು ಬೆಳಗ್ಗೆ ಮನೆಗೆ ಬಂದಾಗ, ಪತಿಯ ತಾಯಿ ಜಗಲಿಯ ಮುಂಭಾಗ ಶವವಾಗಿರುವುದು ಕಂಡುಬಂತು. ತಕ್ಷಣ ಪತಿ ವಿಷಯವನ್ನು ಯಾರಲ್ಲೂ ತಿಳಿಸದಂತೆ ಪತ್ನಿಗೆ ತಿಳಿಸಿ ಹೆಣವನ್ನು ಒಳಗೆ ಕೊಂಡೊಯ್ದು ಇರಿಸಿದ್ದಾನೆ.
 ಅತ್ತೆಯನ್ನು ತನ್ನ ಗಂಡ ಕೊಂದು ಗುಟ್ಟಾಗಿ ದಹನ ಮಾಡಲು ಮುಂದಾಗಿರುವ ಬಗ್ಗೆ ಆತಂಕಿತಳಾದ ಪತ್ನಿ ಲಲಿತಾ ನೆರೆಮನೆಗೆ ಹೇಳಿ ಬರುವುದಾಗಿ ಮನೆಯಿಂದ ಹೋರಟವಳು ನೇರವಾಗಿ ವಿಟ್ಲ ಪೊಲೀಸ್ ಠಾಣೆಗೆ ತೆರಳಿ ತನ್ನ ಗಂಡನಿಂದ ಕೊಲೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ.
ಅಂತ್ಯಕ್ರಿಯೆಗೆ ಉದ್ಯುಕ್ತ: ಪೊಲೀಸರು ಸ್ಥಳಕ್ಕೆ ಬಂದಾಗ ನೆರೆಹೊರೆಯವರು ಸ್ಥಳದಲ್ಲಿ ಸೇರಿದ್ದು, ಕೆಲವು ಸಂಬಂಧಿಕರಿಗೆ ವಿಷಯ ತಿಳಿಸಿ ಅಂತ್ಯಕ್ರಿಯೆ ನಡೆಸಲು ಮುಂದಾಗಿ ಕಟ್ಟಿಗೆ ಸಂಗ್ರಹಕ್ಕೆ ಆರಂಭಿಸಿದ್ದ. ಮೊದಲು  ಪೊಲೀಸರಲ್ಲಿ ತಾಯಿಯ ಮರಣವಾಗಿರುವುದಾಗಿ ತಿಳಿಸಿದ ಡೊಂಬಯ್ಯ, ಮತ್ತೆ ಯಾರೋ ಕೊಲೆ ನಡೆಸಿರುವುದಾಗಿ ಹೇಳಲು ಯತ್ನಿಸಿ, ನಂತರ ತಾನೇ ಹೊಡೆದು ಕೊಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ಉಪವಿಭಾಗದ ಪ್ರೊಬೆಷನರಿ ಎ.ಎಸ್.ಪಿ ಕುಲದೀಪ್ ಜೈನ್, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಸದಾನಂದ ವರ್ಣೇಕರ್, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಅನೀಲ್ ಕುಲಕರ್ಣಿ ಭೇಟಿ ನೀಡಿದ್ದು, ವಿಟ್ಲ ಎಸ್‌ಐ ಮಾದವ ಕೂಡ್ಲು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಡೊಂಬಯ್ಯ ಪೂಜಾರಿ ಹಿಂದೆ ಪುತ್ತೂರು ತಾಲೂಕಿನ ಬಲ್ನಾಡುವಿನಿಂದ ಮದುವೆಯಾದ ಮೊದಲನೇ ಪತ್ನಿ ಮತ್ತು ನಾಲ್ಕು ಮಂದಿ ಗಂಡು ಮಕ್ಕಳನ್ನು ಸುಮಾರು 13 ವರ್ಷಗಳ ಹಿಂದೆ ಹೊಡೆದೋಡಿಸಿ, ನಂತರ ಲಲಿತಳನ್ನು ಮದುವೆಯಾಗಿದ್ದನು. ಇದೀಗ ಶಶಿಕುಮಾರ್ ಮತ್ತು ಶರತ್ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.