ತಟ್ಟಿದ ಬಂದ್ ಬಿಸಿ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ
ಮಂಗಳೂರು: ಬಂದ್ ಮೊದಲ ದಿನ ನಗರದಲ್ಲಿ ಭಾಗಶಃ ಪರಿಣಾಮ ಬೀರಿದೆ. ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ಜೋರಾಗಿತ್ತು. ಸಿಗ್ನಲ್ಗಳಲ್ಲಿ ಲೈಟ್ ಹಾಕುವ ಅಗತ್ಯ ಕಂಡು ಬರಲಿಲ್ಲ.
ಬುಧವಾರ ಸಂಜೆ 6 ಗಂಟೆಯಿಂದ ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರಿಂದ ಎಲ್ಲ ಜಿಲ್ಲೆಗಳಿಗೂ ಬಸ್ ಸಂಚರಿಸುತ್ತಿದೆ, ಪ್ರಯಾಣಿಕರ ಅಗತ್ಯ ಕಂಡು ಬಸ್ಗಳನ್ನು ಓಡಿಸಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ಕೇರಳದ ಕಡೆಗೆ ಬಸ್ಗಳನ್ನು ಓಡಿಸುತ್ತಿಲ್ಲ.
ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಗಳು ಸಾಲಾಗಿ ನಿಂತಿದ್ದವು. ನಗರದ ಹೊರವಲಯದಲ್ಲಿ ಅಲ್ಲಲ್ಲಿ ಕೆಎಸ್ಆರ್ಟಿಸಿ ಬಸ್ಗಳು, ಆಟೋ ರಿಕ್ಷಾಗಳು ಕಾಣಿಸಿಕೊಂಡವು. ಬಸ್ ಸಂಚಾರ ವ್ಯತ್ಯಯದಿಂದ ಪ್ರಯಾಣಿಕರು ತೊಂದರೆಗೀಡಾದರು, ಬಸ್ ತಂಗುದಾಣಗಳಲ್ಲಿ ಬಾರದ ಬಸ್ಗಾಗಿ ಕಾಯುತ್ತಿದ್ದರು. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಪೊಲೀಸ್ ಬಿಗು ಬಂದೋಬಸ್ತ್ ನಡೆಸಿದ್ದರು. ಅಲಲ್ಲಿ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.
ನಗರದಲ್ಲಿ ಬ್ಯಾಂಕ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ಮೆಡಿಕಲ್, ಆಸ್ಪತ್ರೆ ತೆರೆದಿದ್ದವು. ಕೆಲವೆಡೆ ಜಿನಸಿ ಅಂಗಡಿಗಳು, ಹೋಟೆಲ್ಗಳು ತೆರೆದಿದ್ದವು.
ನಗರದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು ಹೀಗಾಗಿ ಹೆತ್ತವರ ಜತೆ ಶಾಲೆಗೆ ಬಂದ ಮಕ್ಕಳನ್ನು ಬೆಳಗ್ಗೆಯೇ ಅವರ ಜತೆಯಲ್ಲಿ ವಾಪಸ್ ಕಳುಹಿಸಿದರು. ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಿ ಇತ್ತು.
'ನಗರದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆ ರಜೆ ನೀಡಲಾಯಿತು. ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಶಾಲೆಗಳು ತೆರೆದಿದ್ದವು. ಬಿಸಿಯೂಟ ಬಗ್ಗೆ ದೂರುಗಳು ಬಂದಿಲ್ಲ' ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಮೊಸೆಸ್ ಜಯಶೇಖರ್ ತಿಳಿಸಿದ್ದಾರೆ. ಹಬ್ಬ ಹರಿದಿನಗಳು ಇರುವುದರಿಂದ ಬಸ್ ಸಂಚಾರ ಆರಂಭಿಸುವುದಾಗಿ ಕೆನರಾ ಬಸ್ ಮಾಲೀಕರ ಸಂಘ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದರು. ಆದರೆ ನೌಕಕರು ಕರ್ತವ್ಯಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಬಸ್ ಸಂಚರಿಸಲಿಲ್ಲ.
ಬಸ್ ಸಂಚಾರ ಸಾಧ್ಯತೆ: ಗುರುವಾರ ಖಾಸಗಿ ಬಸ್ಗಳು ಸಂಚರಿಸುವ ಸಾಧ್ಯತೆ ಇದೆ. ಖಾಸಗಿ ಬಸ್ಗಳನ್ನು ಚಾಲಕ, ನಿರ್ವಾಹಕರೇ ಗುತ್ತಿಗೆ ಪಡೆದು ಓಡಿಸುವುದರಿಂದ ಹೆಚ್ಚಿನ ನೌಕರರು ಕೆಲಸಕ್ಕೆ ಮರಳುವ ಸಾಧ್ಯತೆ ಇದೆ ಎಂದು ಬಸ್ ಮಾಲೀಕರು ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ, ಸುಬ್ರಹ್ಮಣ್ಯಗಳಲ್ಲಿ ಮುಷ್ಕರದ ಬಿಸಿ ಜನರಿಗೆ ತಟ್ಟಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

