ಪಕ್ಷಾಂತರ ಮೂಲಕ ಸರ್ಕಾರ ಅಸ್ಥಿರಕ್ಕೆ ಕಾಂಗ್ರೆಸ್ ಷಡ್ಯಂತ್ರ
ಪುತ್ತೂರು: ಬಿಜೆಪಿಯ ಶಾಸಕರು ಮತ್ತು ಮಂತ್ರಿಗಳನ್ನು ಪಕ್ಷಾಂತರಗೊಳಿಸುವ ಮೂಲಕ ರಾಜ್ಯದಲ್ಲಿ ಅಸ್ಥಿರ ಸರ್ಕಾರ ನಿರ್ಮಿಸುವ ಪ್ರಯತ್ನ ಕಾಂಗ್ರೆಸ್ ನಡೆಸುತ್ತಿದೆ. ಈ ಮೂಲಕ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅವಧಿಯ ಕೊನೆಯ ದಿನಗಳಲ್ಲಿ ಕರ್ನಾಟಕದ ಇತಿಹಾಸದಲ್ಲಿಯೇ ಕಂಡರಿಯದ ಪಕ್ಷಾಂತರದ ಪರ್ವ ನಡೆಯುತ್ತಿದ್ದು, ಇಂತಹ ರಾಜಕೀಯ ವಿದ್ಯಮಾನಗಳು ನಡೆಯುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಕೇಂದ್ರದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಅದರಿಂದ ತಪ್ಪಿಸಿಕೊಳ್ಳಲು ಪಕ್ಷಾಂತರ ಮಾಡಿಸುವ ಕೆಲಸಕ್ಕೆ ಕೈಹಾಕಿದೆ. ಇದೊಂದು ಕೆಟ್ಟ ಸಂಪ್ರದಾಯ ಎಂದು ಅವರು ದೂರಿದರು.
ಜನರಿಂದಲೇ ಉತ್ತರ: ಇನ್ನೊಬ್ಬರಿಗೆ ಬುದ್ಧಿ ಹೇಳುವವರಿಗೆ ಸ್ವ ಬುದ್ಧಿ ಇರಬೇಕು ಎಂದು ಕಾಂಗ್ರೆಸಿಗರನ್ನು ಟೀಕಿಸಿದ ಡಿ.ವಿ. ಸದಾನಂದ ಗೌಡ, ರಾಜ್ಯದಲ್ಲಿ ಅಭಿವೃದ್ಧಿಯನ್ನು ಕೊನೆಗಾಣಿಸುವ ಕೆಟ್ಟ ಚಾಳಿಯ ಕಾಂಗ್ರೆಸ್ ತನ್ನ ಹೊಂಡವನ್ನು ತಾನೇ ತೋಡಿಕೊಳ್ಳುತ್ತಿದೆ. ಇವರ ಚಾಳಿಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರಿಸಲಿದ್ದಾರೆ ಎಂದರು.
ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದ ಅವರು ಮುಂದಿನ ಅವಧಿಯಲ್ಲಿ ನಾವೆಲ್ಲ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ ಎಂದ ಅವರು ಪಕ್ಷದ ರಾಷ್ಟ್ರಾಧ್ಯಕ್ಷರನ್ನು ಭೇಟಿ ಮಾಡಲು ತಾನು ದೆಹಲಿಗೆ ಹೋಗಿದ್ದು ಅವರೊಂದಿಗೆ ರಾಜ್ಯದ ರಾಜಕೀಯ ವಿದ್ಯಮಾನದ ಬಗ್ಗೆ ಹಾಗೂ ಪಕ್ಷದ ಆಂತರಿಕ ವಿಚಾರದ ಬಗ್ಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
'ಕೋಟಿ'ಚೇಷ್ಟೆ ಗೊತ್ತು: ಧನಂಜಯ ಕುಮಾರ್ ಅವರಂತಹ ಚಿಲ್ಲರೆ ರಾಜಕೀಯ ಮಾಡುವ ವ್ಯಕ್ತಿಗಳ ಹೇಳಿಕೆಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಡಿ.ವಿ.ಸದಾನಂದ ಗೌಡರು ಧನಂಜಯ ಕುಮಾರ್ ಅವರಿಗೆ ತನ್ನ ಮೇಲೆ ಹಳೆಯ ಕೋಪವಿದೆ, ಅಲ್ಲದೆ ನಂಜು ಜಾಸ್ತಿ ಇದೆ. ಅವರು ನಡೆಸಿದ 'ಕೋಟಿ'ಚೇಷ್ಟೆ ಎಲ್ಲರಿಗೂ ಗೊತ್ತಿದೆ. ಮುಂಬೈನಲ್ಲಿ ತನ್ನ ಕೊಠಡಿಗೆ ಕರೆಸಿಕೊಂಡದ್ದು, ದೆಹಲಿಯಿಂದ ಚೀಲದಲ್ಲಿ ದುಡ್ಡು ತರಿಸಿಕೊಂಡದ್ದು ಇದೆಲ್ಲವೂ ಬಹಿರಂಗಗೊಂಡಿರುವ ವಿಚಾರ. ಇವೆಲ್ಲಾ ಕಾರಣದಿಂದಾಗಿ ಅವರನ್ನು ದೆಹಲಿ ಪ್ರತಿನಿಧಿತ್ವದಿಂದ ಕೈ ಬಿಡಲಾಗಿತ್ತು. ಇದೀಗ ತನ್ನ ರಾಜಕೀಯದ ಮುಕ್ತಾಯದ ಹಂತದಲ್ಲಿ ಇಂತಹ ಹೇಳಿಕೆಯನ್ನು ಅವರು ನೀಡುತ್ತಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

