'ಬಿ' ಫಾರಂ ಅವಾಂತರ: ಜೆಡಿಎಸ್‌ನಲ್ಲಿ ಗೊಂದಲ
ಪುತ್ತೂರು: ಪುರಸಭೆಯ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಶನಿವಾರ ಮಧ್ಯಾಹ್ನದ ತನಕ ಪಕ್ಷದ 'ಬಿ' ಫಾರಂ ಸಿಗದೆ ಗೊಂದಲ ಸೃಷ್ಟಿಯಾಯಿತು.
ಪಕ್ಷದ 'ಬಿ' ಫಾರಂ ಅನ್ನು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ತಾಲೂಕಿನ ಕಾರ್ಯಾಧ್ಯಕ್ಷರಿಗೆ ನೀಡದೆ ಬೇನಾಮಿ ವ್ಯಕ್ತಿಗಳ ಕೈಯಲ್ಲಿ ನೀಡಿದ್ದು, ಈ ಪೈಕಿ ಎರಡು 'ಬಿ' ಫಾರಂಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಎನ್.ನಿಡ್ವಣ್ಣಾಯ ಅನಾರೋಗ್ಯದಲ್ಲಿರುವ ಹಿನ್ನಲೆಯಲ್ಲಿ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಇಬ್ರಾಹಿಂ ಗೋಳಿಕಟ್ಟೆ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಇಬ್ರಾಹಿಂ ಗೋಳಿಕಟ್ಟೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದರು. ಪುರಸಭೆಯ 27 ವಾರ್ಡ್‌ಗಳ ಪೈಕಿ 22 ವಾಡರ್‌ಗೆ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲಾಗಿತ್ತು.
ಶನಿವಾರ ಮಧ್ಯಾಹ್ನ ತನಕ ಪಕ್ಷದ 'ಬಿ'ಫಾರಂ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷರ ಕೈಗೆ ಸಿಗದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಕೊನೆಯ ಕ್ಷಣದಲ್ಲಿ 'ಬಿ'ಫಾರಂ ಸಮಸ್ಯೆ ಎದುರಾಯಿತು.
ಇದರಿಂದಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಕಚೇರಿಯ ಎದುರು ಜಮಾಯಿಸಿ ಪಕ್ಷದ ನಾಯಕರ ಧೋರಣೆಯನ್ನು ಖಂಡಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷರು ಪಕ್ಷದ ಗೌರವವನ್ನು ಗಾಳಿಗೆ ತೂರಿದ್ದಾರೆ ಎಂದು ಅವರು ಆರೋಪಿಸಿದರು. ಇದರಿಂದಾಗಿ ಗೊಂದಲ ಸೃಷ್ಠಿಯಾಯಿತು.
ಪಕ್ಷದ 'ಬಿ' ಫಾರಂ ಅನ್ನು ಜೆಡಿಎಸ್ ಜಿಲ್ಲಾಧ್ಯಕ್ಷರು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರ ಕೈಗೆ ನೀಡಿದ್ದಾರೆ. ಅವರು ಅದನ್ನು ಎಲ್ಲೋ ಅಂಗಡಿಯಲ್ಲಿ ಇಟ್ಟಿದ್ದಾರೆ. ಜೆಡಿಎಸ್‌ಗೆ ಈ ಹಿಂದೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದ ಸಂಜೀವ ಗೌಡ ಪಕ್ಷಕ್ಕೆ ಮರು ಸೇರ್ಪಡೆಯಾಗಿಲ್ಲ. ಆಗಿದ್ದರೂ ಅವರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಿಸಿ ಅವರ ಕೈಗೆ 'ಬಿ' ಫಾರಂ ತಲುಪಿಸಲಾಗಿದೆ. ಸಂಜೀವ ಗೌಡ ಅವರು 3 'ಬಿ' ಫಾರಂಗಳನ್ನು ತನ್ನಲ್ಲೇ ಉಳಿಸಿಕೊಂಡು ಆ ಪೈಕಿ ಎರಡನ್ನು ಮಾರಾಟ ಮಾಡಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಕುಳಿತಿದ್ದಾರೆ ಎಂಬ ಆರೋಪ- ಆಕ್ರೋಶ ವ್ಯಕ್ತವಾಯಿತು.
ಗೊಂದಲ ಸೃಷ್ಟಿಯಾದ ಹಿನ್ನಲೆಯಲ್ಲಿ ತಾಲೂಕು ಕಾರ್ಯಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ರಾಜ್ಯ ಜೆಡಿಎಸ್ ವರಿಷ್ಠ ನಾಯಕರನ್ನು ಅಲ್ಲದೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ, ಸುಳ್ಯದ ಜೆಡಿಎಸ್ ಮುಖಂಡ ಜಾಕೆ ಮಾಧವ ಗೌಡ ಮತ್ತಿತರರನ್ನು ಸಂಪರ್ಕಿಸಿದ್ದರು. ಈ ಹಿನ್ನಲೆಯಲ್ಲಿ ಪಕ್ಷದ ಮುಖಂಡರ ಸೂಚನೆಯಂತೆ ಅಪರಾಹ್ನ ಜಾಕೆ ಮಾಧವ ಗೌಡ ಪುತ್ತೂರಿಗೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಿದರು. ಈ ವಿದ್ಯಮಾನಗಳ ಬಳಿಕ ಸಂಜೀವ ಗೌಡ 27 ಬಿ ಫಾರಂ ಪೈಕಿ 24ನ್ನು ಕಬೇರಿಗೆ ತಲುಪಿಸಿದ್ದು, ನಂತರ ಅಭ್ಯರ್ಥಿಗಳಿಗೆ ವಿತರಿಸಲಾಯಿತು.
ಬನ್ನೂರು 5 ನೇ ವಾರ್ಡ್‌ನಿಂದ ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ ಮಣಿಯನ್ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಈ ನಡುವೆ ಸಂಜೀವ ಗೌಡ ಅವರಿಂದ 'ಬಿ' ಫಾರಂ ಪಡೆದು ದಿನಕರ್ ಎಂಬವರು ಕೂಡ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಿ ಪದ್ಮಾ ಮಣಿಯನ್ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದಾಗಿ ಜಾಕೆ ಮಾಧವ ಗೌಡ ಭರವಸೆ ನೀಡಿದ ಹಿನ್ನಲೆಯಲ್ಲಿ ಈ ಪ್ರಕರಣ ತಣ್ಣಗಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

