ಶಾಲೆ ಅಳಕೆಮಜಲು: ಪರಿಸ್ಥಿತಿ ಗೊಜಲು
ವಿಶೇಷ ವರದಿ
ವಿಟ್ಲ: ಇಲ್ಲಿನ ಇಡ್ಕಿದು ಗ್ರಾಮದ ಅಳಿಕೆಮಜಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಭಯಭೀತರಾಗಿ ಪಾಠ ಪ್ರವಚನ ಕೇಳಬೇಕಾದ ದುಃಸ್ಥಿತಿ ಬಂದೊದಗಿದೆ.
ಉತ್ತಮ ಶಿಕ್ಷಕರು ಹಾಗೂ 76 ಪುಟಾಣಿ ವಿದ್ಯಾರ್ಥಿಗಳನ್ನು ಒಳಗೊಂಡ ಈ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆ ಬಾಗಿಲು ತೆರೆಯುವಲ್ಲಿಂದ ಹಿಡಿದು ಬಾಗಿಲು ಮುಚ್ಚುವವರೆಗೂ ಇಲ್ಲಿ ಹಾವು, ವಿಷಪೂರಿತ ಜಂತುಗಳು, ಇವೆಯೇ ಎಂದು ಹೆದರಿಕೊಂಡು ತರಗತಿಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ.
ನಿಜ, ಇವರು ಹೆದರುವುದು ಶಾಲೆಯ ಹಿಂದಿರುವ ದೊಡ್ಡ ದೊಡ್ಡ ಮರಗಳಿಗೆ ಮಾತ್ರ. ನಮ್ಮ ಮನೆ ಸುತ್ತ ದೊಡ್ಡ ಮರಗಳಿದ್ದರೆ, ಯಾವಾಗ ಗಾಳಿ ಬಂದು ಮರ ಬೀಳುತ್ತೋ ಇಲ್ಲಿ ಮರದಿಂದ ಬಿದ್ದ ತರಗೆಲೆಗಳ ಅಡಿಯಲ್ಲಿ ಹಾವುಗಳು, ಚೇಳುಗಳು, ಬಂದು ಕುಳಿತುಕೊಳ್ಳುತ್ತೋ ಅನ್ನೋ ಭಯದಿಂದ ನಾವು ಮರಗಳನ್ನು ಕಡಿದೇ ಬಿಡುತ್ತೇವೆ. ಕೊನೆಯ ಪಕ್ಷ ಟೊಂಗೆಗಳನ್ನಾದರೂ ಕಡಿಯುತ್ತೇವೆ. ಹಾಗಿರುವಾಗ ಶಾಲೆಯ ಹಿಂದೆ, ಅದೂ ಪುಟಾಣಿ ಮಕ್ಕಳಿರುವ ಜಾಗದಲ್ಲಿ ಶಿಕ್ಷಕರಿಗೆ ಮತ್ತು ರಕ್ಷಕರಿಗೆ ಯಾವ ರೀತಿ ಭಯ ಆಗಬೇಡ ಹೇಳಿ.
ಮಳೆಗಾಲದಲ್ಲಿ ಪರದಾಟ: ಅಳಿಕೆಮಜಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮರಗಳು ಸಾಲಾಗಿ ಶಾಲೆಯ ಗೋಡೆ, ಕಿಟಕಿಗಳಿಗೆ ತಾಗುತ್ತಿವೆ. ಇದರಿಂದ ತರೆಗೆಲೆಗಳು ಬಿದ್ದು, ಗೆಲ್ಲುಗಳ ಮೂಲಕ ಹಾವು, ಚೇಳುಗಳು ಶಾಲೆ ಒಳಗೆ ಬಂದ ಎಷ್ಟೋ ಉದಾಹರಣೆಗಳಿವೆ.
ಮಳೆಗಾಲದಲ್ಲಂತೂ ಕೇಳುವುದೇ ಬೇಡ. ಮರದಿಂದ ಇಳಿದ ನೀರು ನೇರವಾಗಿ ಶಾಲೆಯ ಗೋಡೆಗೆ, ಕಿಟಕಿಯ ಮೂಲಕ ತರಗತಿಯ ಒಳಗೆ ಬರುವುದು ಸಾಮಾನ್ಯವಾಗಿದೆ. ಒಂದೆಡೆ ನೀರು ಬಿದ್ದು ಗೋಡೆ ಕುಸಿಯುವ ಭೀತಿಯಾದರೆ, ಇನ್ನೊಂದೆಡೆ ಗಾಳಿಗೆ ಎಲ್ಲಿ ಮರ ಬೀಳುತ್ತದೋ ಅನ್ನೋ ಭಯ. ಈ ವಾತಾವರಣದಲ್ಲಿ ಶಿಕ್ಷಕರು, ಪುಟಾಣಿ ಮಕ್ಕಳನ್ನು ಹಿಡಿದುಕೊಂಡು ಭಯದಿಂದಲೇ ಕಾಲ ಕಳೆಯುತ್ತಿದ್ದುದುಂಟು.
ದಶಕದಿಂದಲೂ ಹೀಗೆ: ಕಳೆದ 10- 13 ವರ್ಷಗಳಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಕಾರಣ ಈ ಮರಗಳಿರುವ ಜಾಗಕ್ಕೆ ಸಂಬಂಧಿಸಿ ವಿವಾದವಿದೆ. ಜಾಗದ ವ್ಯಕ್ತಿಗಳು ಗಡಿಗುರುತು ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಶಾಲಾಭಿವೃದ್ಧಿ ಮಂಡಳಿ ಕೊನೆಯ ಪಕ್ಷ ಮರದ ಕೊಂಬೆಗಳನ್ನಾದರೂ ತೆರವುಗೊಳಿಸಿ ಎಂದು ಅರಣ್ಯ ಇಲಾಖೆಗೆ, ಸ್ಥಳೀಯ ಗ್ರಾ.ಪಂ.ಗೆ, ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಪಂಚಾಯಿತಿಯವರು ಬಂದು ಪರಿಶೀಲನೆ ನಡೆಸಿದ್ದಾರೆ. ಪಿ.ಡಿ.ಒ. ಮತ್ತು ಪಂಚಾಯಿತಿ ಅಧ್ಯಕ್ಷ ಮರಗಳನ್ನು ತೆರವುಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಅದೇನೇ ಇರಲಿ, ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿಯದೆ ಕಾರ್ಯರೂಪಕ್ಕೆ ಬಂದರೆ ಹೆತ್ತವರು ಹಾಗೂ ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

