ಶಿಕ್ಷಕಿಯ ಕನಸು ಹೊಸಕಿದ ಕಾಮುಕ
ಬಂಟ್ವಾಳ: ಕೆಲವು ತಿಂಗಳ ಹಿಂದೆಯಷ್ಟೇ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವ ವೇಳೆಯಲ್ಲಿಯೇ ಕಲ್ಲಡ್ಕದಲ್ಲಿ ಸೋಮವಾರ ನಡೆದಿರುವ ಸೌಮ್ಯ ಅತ್ಯಾಚಾರ ಯತ್ನ-ಕೊಲೆ ಘಟನೆ ಪ್ರಕರಣ ಕಾನೂನು ಸುವ್ಯವಸ್ಥೆಯ ಮಟ್ಟವನ್ನೇ ಪ್ರಶ್ನಿಸುವಂತಾಗಿದೆ.
ಉಡುಪಿಯ ಚಿಕ್ಕಮ್ಮನ ಮನೆಯಿಂದ ಬಂಟ್ವಾಳ ಬಾಳ್ತಿಲದ ತನ್ನ ಮನೆಗೆ ನಡುಮಧ್ಯಾಹ್ನ ಹೆಜ್ಜೆ ಹಾಕುತ್ತಿದ್ದ ಸೌಮ್ಯ, ಕಾಮುಕನಿಗೆ ಬಲಿಯಾಗಿದ್ದಾಳೆ. ತನ್ನೊಡನೆ ಸೇರಲೊಪ್ಪದ ಆಕೆಯ ಕುತ್ತಿಗೆ ಹಿಚುಕಿ ಕೊಂದ ಆರೋಪಿ ಸತೀಶ ದೇಹವನ್ನು ಕೆರೆಗೆ ಎಸೆದಿದ್ದಾನೆ.
ಬಡಕುಟುಂಬ...: ಮಂಗಳವಾರ ಸೌಮ್ಯಳ ಮೃತದೇಹದ ಅಂತ್ಯಸಂಸ್ಕಾರದ ವಿಧಿವಿಧಾನಗಳು ಬಾಳ್ತಿಲದ ಕೂರ್ಯ ಎಂಬಲ್ಲಿ ನಡೆಯಿತು. ನೂರಾರು ಜನ ಸೇರಿದ್ದರೂ ಎಲ್ಲರ ಕಣ್ಣಲ್ಲಿ ನೀರು ತುಂಬಿದ್ದು ಬಿಟ್ಟರೆ ಯಾರ ಬಾಯಿಯಿಂದಲೂ ಮಾತುಗಳೇ ಹೊರಡುತ್ತಿರಲಿಲ್ಲ. ಸೌಮ್ಯಳ ಸಾವಿನಿಂದ ಕಂಗೆಟ್ಟ ಬಡ ಕುಟುಂಬದ ಸದಸ್ಯರಂತೂ ಸಿಡಿಲು ಬಡಿದಂತೆ ಮೌನವಾಗಿದ್ದರು.
ಮಣಿಪಾಲದ ಖಾಸಗಿ ಶಾಲೆಯಲ್ಲಿ ಕಳೆದ 15 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಸೌಮ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಹಾಕುವ ಕಾರ್ಯ ನಿಮಿತ್ತ ಸೋಮವಾರ ಉಡುಪಿಯ ಚಿಕ್ಕಮ್ಮನ ಮನೆಯಿಂದ ತನ್ನ ಮನೆಗೆ ಬರುತ್ತಿದ್ದಳು. ಆದರೆ ಕಾಮುಕನ ಕ್ರೌರ್ಯ ಎಲ್ಲದಕ್ಕೂ ಇತಿಶ್ರೀ ಹಾಡಿತು.
ಜೋಪಡಿಯಲ್ಲೇ ವಾಸ...: ಅದು ಪ್ಲಾಸ್ಟಿಕ್ ಹೊದಿಕೆಯಿಂದ ಕೂಡಿದ ಸಣ್ಣ ಜೋಪಡಿ. ಅದರೊಳಗೆ 7 ಜನ ಸದಸ್ಯರ ಕಷ್ಟದ ಜೀವನ. ಹೊರಗೆ ಇನ್ನೊಂದು ಗೂಡಿನ ತರಹದ ಜೋಪಡಿಯಲ್ಲಿ ದೇವರ ಫೋಟೋ. ಮನೆಗೆ ಬಂದ ಅತಿಥಿಗಳಿಗೆ ಕುಳಿತುಕೊಳ್ಳಲು ಅಲ್ಲೊಂದು ಮರದ ಬೆಂಚು. ಅಲ್ಲಿನ ಸನ್ನಿವೇಶಗಳೇ ಹೇಳುತ್ತದೆ ಅವರ ಬಡತನ ಎಷ್ಟರಮಟ್ಟದ್ದು ಅಂತ...
ಅಕ್ಕ ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ನಾವೂ ಇತರರಂತೆ ಉನ್ನತ ಸ್ಥಾನಕ್ಕೆ ಹೋಗುತ್ತೇವೆ ಎನ್ನುವ ಮನೆ ಮಂದಿಯ ಎಲ್ಲಾ ಕನಸುಗಳು ಅಕ್ಕನ ಸಾವಿನೊಂದಿಗೆ ಕೊಚ್ಚಿ ಹೋಗಿವೆ.
ವಾದ್ಯ ನುಡಿಸುವ ವೃತ್ತಿ: ಸೌಮ್ಯಾ ತಂದೆ ಸೀತಾರಾಮ ಸೇರಿಗಾರ ಕುಲಕಸುಬಾದ ವಾದ್ಯ ನುಡಿಸುವ ವೃತ್ತಿಯಿಂದ ಬರುವ ಆದಾಯವೇ ಇವರ ಕುಟುಂಬ ನಿರ್ವಹಣೆಗೆ ಆಧಾರ.
ಪತ್ನಿ ನಳಿನಾಕ್ಷಿ ಬೇರೆ ಮನೆಗಳಲ್ಲಿ ಕೆಲಸ ಮಾಡುತ್ತಾ, ಮನೆ ವಾರ್ತೆ ನೋಡಿಕೊಳ್ಳುತ್ತಿದ್ದರೆ, ಈ ದಂಪತಿಗೆ ನಾಲ್ಕು ಹೆಣ್ಣು ಹಾಗೂ ಒಬ್ಬ ಗಂಡು ಮಗನ ಜವಬ್ದಾರಿಯೂ ಇತ್ತು.
ಸೌಮ್ಯ ಹಿರಿಯವಳು. ಪಿಯುಸಿ ಮುಗಿಸಿ, ಡಿಎಡ್ ಪೂರೈಸಿದ್ದಳು. ಸ್ಥಳೀಯ ಬಾಳ್ತಿಲ ಗ್ರಾ.ಪಂ. ಈ ಕುಟುಂಬಕ್ಕೆ ಇತ್ತೀಚೆಗೆ ಬಸವ ಕಲ್ಯಾಣ ಯೋಜನೆಯಲ್ಲಿ ಸ್ವಂತ ಮನೆ ನಿರ್ಮಿಸಲು ಅನುದಾನ ಒದಗಿಸಿದ್ದು, ಮನೆನಿರ್ಮಾಣ ಕಾಮಗಾರಿಯೂ ಈಗ ಅರ್ಧಕ್ಕೆ ನಿಂತಿದೆ.ಸೌಮ್ಯ,
ಕೃತ್ಯ ಒಪ್ಪಿದ ಆರೋಪಿ....
ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರಿಂದ ಬಂಧಿಸಲ್ಪಟ್ಟ ಆರೋಪಿ ಸತೀಶ ಕೊಲೆ ಕೃತ್ಯ ಒಪ್ಪಿಕೊಂಡಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೌಮ್ಯಾಳನ್ನು ತಾನು ಹಿಂಬಾಲಿಸಿದ್ದು, ಆಕೆಯ ಕೈ ಹಿಡಿದು ಎಳೆದಾಗ ಆಕೆ ನಿರಾಕರಿಸಿದಳು, ಹಾಗಾಗಿ ಕುತ್ತಿಗೆ ಹಿಸುಕಿ ಕೊಂದು ಕೆರೆಗೆ ಹಾಕಿರುವುದಾಗಿ ಸತೀಶ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಬಳಿಕ ಮನೆಗೆ ತೆರಳಿದ ಸತೀಶ, ಬಟ್ಟೆ ಬದಲಾಯಿಸಿಕೊಂಡು ಕೃತ್ಯ ನಡೆದ ಸ್ಥಳದಲ್ಲಿ ಜಮಾಯಿಸಿದ್ದ ಗುಂಪಿನ ಮಧ್ಯೆ ಏನೂ ಅರಿಯದವನಂತೆ ನಿಂತಿದ್ದ, ಪ್ರಾಥಮಿಕ ತನಿಖೆ ಆಧಾರದಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡ ವಿಚಾರಣೆ ನಡೆಸಿದ ಪೊಲೀಸರು ಆತನಿಂದ ನೈಜ ಸಂಗತಿ ಬಯಲಿಗೆಳೆದಿದ್ದಾರೆ.
'ಸೌ'ಜನ್ಯ ತೋರದ ಕೊಲೆಗಡುಕರು...
ದಕ್ಷಿಣ ಕನ್ನಡದಲ್ಲಿ ಅತ್ಯಾಚಾರ-ಕೊಲೆ ಪ್ರಕರಣಕ್ಕೂ 'ಸೌ' ಅಕ್ಷರಕ್ಕೂ ಕಾಕತಾಳಿಯ ನಂಟು ಅಂಟಿಕೊಂಡಿದೆ. ಈ ಹಿಂದೆ ನಡೆದ ಹಲವಾರು ಪ್ರಕರಣಗಳು ಇದಕ್ಕೆ ಸಾಕ್ಷಿ. 12 ವರ್ಷಗಳ ಹಿಂದೆ ಪುತ್ತೂರಿನ ಅಮಾಯಕ ಹುಡುಗಿ ಸೌಮ್ಯ ಭಟ್ನ್ನು ಕಾಮುಕ ಮನೆ ದಾರಿಯಲ್ಲಿ ಅತ್ಯಾಚಾರಕ್ಕೆ ಪ್ರಯತ್ನಿಸಿ ಕೊಲೆ ನಡೆಸಿದ್ದ. ಕೆಲ ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಸೌಜನ್ಯ ಎನ್ನುವ ಹುಡುಗಿಯ ಮೇಲೂ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಬಂಟ್ವಾಳದಲ್ಲಿ ಇದೀಗ ಸೌಮ್ಯಳ ಕೊಲೆಯಾಗಿದೆ. ಆಗಿರುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗದಿರುವುದೇ ಇಂತಹಾ ಅಪರಾಧ ಮರುಕಳಿಸಲು ಕಾರಣ ಎಂಬ ಅಭಿಪ್ರಾಯ ಕೇಳಿಬಂದಿದೆ.
-ಮೌನೇಶ ವಿಶ್ವಕರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

