ದಕ್ಷಿಣ ಕನ್ನಡ

ಕಾಡಾನೆ ಬೇಟೆಗೆ ಹೊರಟ ವಿಕ್ರಮ, ಹರ್ಷ

Published On :

ಬಾಲಕೃಷ್ಣ ಭೀಮಗುಳಿ
ಸುಬ್ರಹ್ಮಣ್ಯ: ಕೃಷಿಕರನ್ನು ಗಂಭೀರವಾಗಿ ಕಾಡುತ್ತಿರುವ ಮತ್ತು ಕೆಲವೇ ದಿನಗಳ ಅಂತರದಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿರುವ ಕಾಡಾನೆಯನ್ನು ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
 ಮಲೆನಾಡಿನ ತಪ್ಪಲಿನ ಪ್ರದೇಶಗಳ ಕಾಡಂಚಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ ಜೀವನ ನಡೆಸುತ್ತಿರುವ ಕೃಷಿಕರಿಗೆ ಕಾಡು ಪ್ರಾಣಿಗಳ ಉಪಟಳ ಕಳೆದ ಕೆಲವು ಸಮಯಗಳಿಂದ ಗಂಭೀರವಾಗಿ ಕಾಡುತ್ತಿದೆ. ಕಾಡಾನೆಗಳ ಹಿಂಡು ಕೃಷಿ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುವುದಲ್ಲದೆ ಕೃಷಿ ತೋಟದಲ್ಲಿ ನೀರು ಹಾಯಿಸಲು ಜೋಡಿಸಲ್ಪಟ್ಟ ಪೈಪ್, ಸ್ಪಿಂಕ್ಲರ್, ಹನಿ ನೀರಾವರಿಗಳನ್ನು ಹಾಳುಗೆಡವುತ್ತಿವೆ.
 ಕಾಡಾನೆ ದಾಳಿಗೆ ಸುಬ್ರಹ್ಮಣ್ಯ, ಐನೆಕಿದು, ಕೊಲ್ಲಮೊಗ್ರ, ಬಾಳುಗೋಡು, ಮಡಪ್ಪಾಡಿ ಪ್ರದೇಶಗಳು ಪೂರ್ಣವಾಗಿ ನಲುಗಿಹೋಗಿದೆ. ಮರ್ಕಂಜ, ಪಂಜ, ಆಲೆಟ್ಟಿ, ಮಂಡೆಕೋಲು, ಸಂಪಾಜೆ, ಪುಳಿಕುಕ್ಕು ಈ ಭಾಗಗಳ ಕೃಷಿಕರು ಕೂಡ ದಾಳಿಗೊಳಗಾಗಿದ್ದಾರೆ. ಮಂಗಳವಾರ ಕೊಲ್ಲಮೊಗ್ರದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಈ ವಿಚಾರವಾಗಿ ಗಂಭೀರ ಚರ್ಚೆ ನಡೆದು ಕಾಡಾನೆ ಓಡಿಸಲು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿ ಕಾಡಾನೆಯನ್ನು ಓಡಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದರಲ್ಲದೆ ಕಾಡಾನೆ ಓಡಿಸಲು ಕೂಡಲೇ ಕಾರ್ಯಪ್ರವೃತ್ತರಾಗುವುದಾಗಿ ಸಭೆಯಲ್ಲಿದ್ದ ಉಪಸಂರಕ್ಷಣಾಧಿಕಾರಿ ಪದ್ಮನಾಭ ಗೌಡ ತಿಳಿಸಿದರು.
 ಅದರಂತೆ ಕಾಡಾನೆಗಳನ್ನು ಕಾಡಿನ ಒಳಕ್ಕೆ ಓಡಿಸಲು ಅರಣ್ಯ ಇಲಾಖೆ ಕುಶಾಲನಗರದ ಆನೆಕಾಡಿನ ದುಬಾರೆಯಿಂದ ತರಿಸಿದ ವಿಕ್ರಮ ಮತ್ತು ಹರ್ಷ ಕಲ್ಮಕಾರುವಿನಲ್ಲಿ ಬೀಡುಬಿಟ್ಟಿದೆ. ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ನಾಡಾನೆಯೊಂದಿಗೆ ಕಾಡಿಗೆ ತೆರಳುತ್ತಿದ್ದಾರೆ.
ಮೊಕ್ಕಾಂ: ಮಂಗಳವಾರ ಸಂಜೆ ಕಾಡಾನೆಗಳು ಕಾಡಿನತ್ತ ಪ್ರಯಾಣ ಬೆಳೆಸಿ ಕಾಡಾನೆಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿದೆ. ಆದರೆ, ಕಾಡಾನೆಯ ಸುಳಿವು ದೊರಕಲಿಲ್ಲ. ಮತ್ತೆ ಬುಧವಾರ ಬೆಳಗ್ಗೆ ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಆನೆಯೊಂದಿಗೆ ಕಾಡಿನತ್ತ ತೆರಳಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ, ಮಾರ್ಗದರ್ಶನ ನೀಡುತ್ತಿದ್ದಾರೆ.
 ಕಾಡಾನೆಗಳನ್ನು ಹಿಡಿಯುವ ಪ್ರಕ್ರಿಯೆ ಇದು ಅಲ್ಲ. ಕಾಡಾನೆಗಳನ್ನು  ನಾಡಾನೆ ಬಳಸಿ ಕಾಡಿನ ಒಳಕ್ಕೆ ಅಟ್ಟುವ ಪ್ರಕ್ರಿಯೇ ಅಷ್ಟೆ. ಕಾಡಾನೆ ಹಿಡಿಯಲು ಸರ್ಕಾರದ ಮಟ್ಟದಲ್ಲಿ ಅನುಮತಿ ಮತ್ತು ಕಾನೂನಿನ ತೊಡಕು ಇರುವುದರಿಂದ ಈಗ ಅದು ಸಾಧ್ಯವಿಲ್ಲ. ಹೀಗಾಗಿ ಕೃಷಿ ತೋಟಗಳಿಗೆ ದಾಳಿ ಮಾಡುವ ಕಾಡಾನೆಗಳನ್ನು ಬಹುದೂರ ಓಡಿಸುವ ಕೆಲಸವನ್ನು ಪ್ರಾಥಮಿಕವಾಗಿ ಆರಂಭಿಸಿದ್ದೇವೆ.
 ಕಲ್ಮಕಾರು ಕೊಲ್ಲಮೊಗ್ರ ಭಾಗಗಳಲ್ಲಿ ಆರಂಭಿಸಲಾಗಿದೆ. ನಂತರ ಹೊಸೋಳಿ, ದೇವಚಳ್ಳ, ಬಾಳುಗೋಡು, ಪುಳಿಕುಕ್ಕು ಈ ಪ್ರದೇಶಗಳಿಗೆ ವಿಸ್ತರಿಸಲಾಗುವುದು.
ಫಲ ನೀಡಿದಲ್ಲಿ ಮುಂದೆ ಆನೆ ಹಾವಳಿಯ ಎಲ್ಲ ಭಾಗಗಳಲ್ಲಿ ಕಾರ್ಯಾಚರಣೆ ಮುಂದುವರಿಸಲಾಗುವುದು. ಈ ಭಾಗದಲ್ಲಿ ಒಂದು ವಾರಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಮುಂದೆ ಮೇಲಾಧಿಕಾರಿಗಳ ಆದೇಶದಂತೆ ಮುಂದುವರಿಯಲಾಗುವುದು ಎಂದು ಡಾ. ದಿನೇಶ್ ಪತ್ರಿಕೆಗೆ ತಿಳಿಸಿದ್ದಾರೆ.


ಅರಣ್ಯದಲ್ಲಿ ತರೆಗೆಲೆಗಳು ಜಾಸ್ತಿ ಇರುವುದರಿಂದ ಕಾಡಾನೆ ಸರಿದಾಡಿದ ಕಾಲಿನ ಹೆಜ್ಜೆ ಗುರುತು ಗೋಚರಿಸುತ್ತಿಲ್ಲ. ಹೀಗಾಗಿ ಜಾಡು ಹಿಡಿದು ಹುಡುಕಾಡುವುದು ಕಷ್ಟ. ಇರುವ ಸಂಧಿಗಳಲ್ಲಿ ಹಾದು ಹೋಗಿ ಹುಡುಕಾಡುವ ಕೆಲಸ ಮಾಡುತ್ತಿದ್ದೇವೆ.
ಟಿ ಚಿನ್ನಪ್ಪ, ಹಿರಿಯ ಮಾವುತ
ಕಾಡಾನೆಗಳನ್ನು ಕಾಡಿಗೆ ಅಟ್ಟವುದರಿಂದ ಅಷ್ಟೇನು ಪ್ರಯೋಜನ ಆಗದು. ಆನೆಗಳನ್ನು ಹಿಡಿದು ಆನೆ ಶಿಬಿರಕ್ಕೆ ಸೇರಿಸಿದಲ್ಲಿ ಏನಾದರೂ ಪ್ರಯೋಜನವಾಗಬಹುದು.
ಟಿ ಡಿ.ಎಸ್. ಹರ್ಷಕುಮಾರ, ದೇವಜನ, ಸಹಕಾರಿ ದುರೀಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.