ಕುಂವೀ, ಹಂಸಲೇಖ ಸಹಿತ 9 ಮಂದಿಗೆ ಸಂದೇಶ ಪ್ರಶಸ್ತಿ
ಮಂಗಳೂರು: ಮಂಗಳೂರಿನ ಸಂದೇಶ ಪ್ರತಿಷ್ಠಾನ ಆಶ್ರಯದಲ್ಲಿ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ಪತ್ರಕರ್ತ ಅರ್ಜುನದೇವ ಸಹಿತ 9 ಮಂದಿಗೆ ಪ್ರತಿಷ್ಠಿತ 'ಸಂದೇಶ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಪ್ರತಿಷ್ಠಾನ ಅಧ್ಯಕ್ಷ, ಬಳ್ಳಾರಿ ಧರ್ಮಪ್ರಾಂತ್ಯ ಅಧ್ಯಕ್ಷ ಡಾ.ಹೆನ್ರಿ ಡಿಸೋಜ, ನಿರ್ದೇಶಕ ಫಾ.ವಿಕ್ಟರ್ ವಿಜಯ ಲೋಬೋ, ಪ್ರಾಂಶುಪಾಲ ಫಾ.ಜಯಪ್ರಕಾಶ್ ಡಿಸೋಜ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನೆರವೇರಿಸಲಾಯಿತು. ಪ್ರಶಸ್ತಿಯು ತಲಾ ರು. 10 ಸಾವಿರ ನಗದು, ಸ್ಮರಣಿಕೆ, ಮಾನಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರು: ಕುಂ.ವೀರಭದ್ರಪ್ಪ(ಕನ್ನಡ ಸಾಹಿತ್ಯ), ಲಿಯೋ ಜೋನ್ ಡಿಸೋಜ(ಕೊಂಕಣಿ ಸಾಹಿತ್ಯ), ವಿಜಯ ಕುಮಾರ್ ಕೊಡಿಯಾಲಬೈಲ್ (ತುಳು ಸಾಹಿತ್ಯ), ಜಯಲಕ್ಷ್ಮೀ ಆಳ್ವ (ಕಲಾ), ಅರ್ಜುನದೇವ (ಪತ್ರಿಕೋದ್ಯಮ), ಹಂಸಲೇಖ (ಸಿನಿಮಾ/ಟಿವಿ), ಡಾ.ಕೆ.ಈ.ರಾಧಾಕೃಷ್ಣ (ಅತ್ಯುತ್ತಮ ಶಿಕ್ಷಕ), ಯು.ಸಿ.ಪೌಲೋಸ್ (ವಿಶೇಷ ಗೌರವ) ಹಾಗೂ ಫಾ.ವಲೇರಿಯನ್ ಮೆಂಡೋನ್ಸಾ (ಕೊಂಕಣಿ ಸಂಗೀತ)ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತ್ಯಕ್ಕೆ ಕ್ರೈಸ್ತರ ಕೊಡುಗೆ ಅನನ್ಯ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಕುಂ.ವೀರಭದ್ರಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಭಾರತಕ್ಕೆ ಕ್ರೈಸ್ತರ ಕೊಡುಗೆ ಅನನ್ಯ. ಬಳ್ಳಾರಿ ಅನಂತಪುರದಲ್ಲಿ ಕಾರ್ಯಭಾರ ಮಾಡುತ್ತಿದ್ದ ಸರ್ ಥಾಮಸ್ರೋ ಕುರಿತು ಅರಮನೆ ಕಾದಂಬರಿಯಲ್ಲಿ ಬರೆದಿದ್ದೇನೆ. ಕಡಪಾದಲ್ಲಿ ಮಂಜೋಳಯ್ಯ, ಕಿಟ್ಟೆಲ್ ಮುಂತಾದವರ ಕೊಡುಗೆ ಸಾಹಿತ್ಯಕ್ಕೆ ಅನನ್ಯ. ತನಗೆ ಲಭಿಸಿದ ಸಂದೇಶ ಪ್ರಶಸ್ತಿ ಉಳಿದೆಲ್ಲ ಪ್ರಶಸ್ತಿಗಿಂತ ಮೌಲಿಕವಾದ್ದು ಎಂದು ನುಡಿದರು.
ಪ್ರಸಿದ್ಧ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಕರಾವಳಿಯು ಸಾಮರಸ್ಯದ ಕಲಾವಳಿಯಾಗಿದೆ.
ಇಲ್ಲಿ ಮತ, ಧರ್ಣ, ಭಾಷೆಯ ವೈವಿಧ್ಯ ನಲಿದಾಡುತ್ತಿದೆ. ಸಾಂಸ್ಕೃತಿಕ ಪ್ರಭಾವಳಿ ಇಲ್ಲಿ ಗಟ್ಟಿಯಾಗಿದೆ. ಭಾರತದ ಸಾಮರಸ್ಯವನ್ನು ಸಂಗೀತ ಎತ್ತಿ ಹಿಡಿದಿದೆ. ಪ್ರದರ್ಶನ ಕಲೆಗಳ ಕೋರ್ಸ್ಗಳನ್ನು ನಿಲ್ಲಿಸಬೇಡಿ, ಈ ಕೋರ್ಸ್ನಿಂದ ರಾಜ್ಯದಲ್ಲಿ ಸುಮಾರು 2 ಲಕ್ಷದಷ್ಟು ಉದ್ಯೋಗಕ್ಕೆ ಬೇಡಿಕೆ ಇದೆ ಎಂದರು.
ತುಳು ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ಮಾತನಾಡಿ, 27 ವರ್ಷದ ತನ್ನ ರಂಗಭೂಮಿ ಸಾಧನೆಯಲ್ಲಿ ಸಂದೇಶ ಪ್ರಶಸ್ತಿಗೆ ಬೆಲೆ ಕಟ್ಟಲಾಗದು. ಮುಂದಿನ ತಿಂಗಳು ಸೆಟ್ಟೇರಲಿರುವ 'ಮದಿಮೆ' ತುಳು ಚಿತ್ರ 'ಒರಿಯರ್ದೊರಿ ಅಸಲ್' ಚಿತ್ರವನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

