ದಕ್ಷಿಣ ಕನ್ನಡ

ಅಸಮರ್ಪಕ ಬಳಕೆಯಿಂದ ನೀರಿನ ಕೊರತೆ

Published On :

ಮೂಲ್ಕಿ: ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ನೀರಿನ ಸಮಸ್ಯೆಯಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡು ಹುಡುಕುವಲ್ಲಿ ಮೂಲ್ಕಿ ನಗರ ಪಂಚಾಯಿತಿ ಆಸಕ್ತಿ ವಹಿಸದಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.
ಇಲ್ಲಿನ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಬಹು ಮಹಡಿ ಸಂಕೀರ್ಣಗಳು ತಲೆಯೆತ್ತುತ್ತಿದ್ದು ಹಾಗೂ ಮೂಲ್ಕಿಯ ಕೆ.ಎಸ್. ರಾವ್ ನಗರದ ಬಿಜಾಪುರ ಕಾಲನಿಯಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದು ನೀರಿನ ಸಮಸ್ಯೆಗೆ ಕಾರಣವಾಗಲಿದೆ.
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 17,000 ಜನಸಂಖ್ಯೆಯನ್ನು ಹೊಂದಿದ್ದು, 17 ವಾರ್ಡ್‌ಗಳಿದ್ದು, ಅದರಲ್ಲಿ 6 ವಾರ್ಡ್‌ಗಳು ಕೆ.ಎಸ್. ರಾವ್ ನಗರ ವ್ಯಾಪ್ತಿಯಲ್ಲಿದೆ. ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ 9000ದಷ್ಟು ಜನಸಂಖ್ಯೆ ಕೆ.ಎಸ್. ರಾವ್ ನಗರದಲ್ಲಿದ್ದು, ಈ ಪ್ರದೇಶದಲ್ಲಿ ಹಲವಾರು ಕೊಳವೆ ಬಾವಿ ತೊಡಿದ್ದು ಯಾವುದರಲ್ಲಿಯೂ ನೀರಿನ ಒರತೆಯಿಲ್ಲ.
ಉಪ್ಪು ನೀರು ಸಮಸ್ಯೆ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳಚಿಕಂಬಳ, ಚಿತ್ರಾಪು, ಮಾನಂಪಾಡಿ, ಪಡುಬೈಲು ಸೇರಿದಂತೆ ಕೆಲವು ಪ್ರದೇಶಗಳು ನದಿ ಸಮೀಪದಲ್ಲಿದ್ದು, ಇಲ್ಲಿ ಉಪ್ಪು ನೀರಿನ ಸಮಸ್ಯೆಯಿದೆ. ಬಾವಿ ತೋಡಲು, ಕೊಳವೆ ಬಾವಿ ತೂಡಲು ಅಸಾಧ್ಯವಾಗಿದ್ದು, ಈ ಹಿಂದೆ ಹೆಜಮಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದ ಬಾವಿಯಲ್ಲಿ ಬೇಕಾದಷ್ಟು ನೀರಿದ್ದು, ಅಲ್ಲಿಂದ ಮೂಲ್ಕಿ ನಗರ ಪಂಚಾಯಿತಿಗೆ ಪೈಪ್‌ಲೈನ್ ಮೂಲಕ ತರಲಾಗಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಬಳಿಕ ಬಾವಿ ಪ್ರದೇಶದಲ್ಲಿ ಹೆದ್ದಾರಿ ಬಂದಿದ್ದು, ಬಾವಿಯನ್ನು ಮುಚ್ಚಲಾಗಿದೆ.
ಸದ್ಯಕ್ಕಿದೆ ತುಂಬೆ ನೀರು: ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರು. 4 ಕೋಟಿಯ ತುಂಬೆಯಿಂದ ಬರುವ ಕುಡಿಯುವ ನೀರಿನ ಯೋಜನೆ ಕಳೆದ 2 ವರ್ಷದಿಂದ ಆರಂಭಗೊಂಡಿದ್ದು, ಇದೀಗ ಮೂಲ್ಕಿಗೆ ಮಂಗಳೂರು ಮಹಾನಗರ ಪಾಲಿಕೆ ಮೂಲಕ ಕುಳಾಯಿಂದ ಪೈಪ್‌ಲೈನ್ ಮೂಲಕ ತುಂಬೆಯ ಕುಡಿಯವ ನೀರಿನ ಯೋಜನೆ ಕಾರ್ಯಗತಗೊಂಡಿದೆ.
ಈ ಮೂಲಕ ನೀರು ಬರುತ್ತಿದ್ದು, ಮೂಲ್ಕಿಯ ಕೆ.ಎಸ್. ರಾವ್ ನಗರದಲ್ಲಿ ಬೃಹತ್ ಟ್ಯಾಂಕ್ ಅಳವಡಿಸಲಾಗಿದ್ದು, ಆ ಮೂಲಕ ಸದ್ಯಕ್ಕೆ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ.
ಇನ್ನು ಮುಂದಿನ ದಿನಗಳಲ್ಲಿ ತುಂಬೆಯಿಂದ ಬರುವ ನೀರು ಸ್ಥಗಿತಗೊಂಡಲ್ಲಿ ಮೂಲ್ಕಿ ನಗರ ಪಂಚಾಯಿತಿ ಪರ್ಯಾಯ ವ್ಯವಸ್ಥೆ ಕೈಗೊಳ್ಳದಿರುವುದರಿಂದ ಬೃಹತ್ ರೀತಿಯ ಸಮಸ್ಯೆ ಎದುರಾಗಲಿದೆ.
ಟ್ಯಾಂಕರ್ ನೀರು ಸರಬರಾಜಿಗೆ ಮಾತ್ರ ಅವಕಾಶ:  ಮುಂದಿನ ಬೇಸಿಗೆ ಸಂದರ್ಭ ನೀರಿನ ಸಮಸ್ಯೆ ತಲೆದೊರಲಿದ್ದು, ಈ ಬಗ್ಗೆ ಅಧ್ಯಕ್ಷರು ಬಾವಿ ತೋಡುವ ಅಥವಾ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಒತ್ತನ್ನು ನೀಡಿದೆ. ಆದರೆ, ಜಿಲ್ಲಾಡಳಿತವು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಮಾತ್ರ ಅವಕಾಶ ನೀಡಿದೆ.
ಟ್ಯಾಂಕರ್ ಮೂಲಕ ನೀರು ಸರಬರಾಜು ತಾತ್ಕಾಲಿಕ ಪರಿಹಾರವಾಗಿದ್ದು, ಮೂಲ್ಕಿಗೆ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ಯೋಜನೆಯ ಅಗತ್ಯವಿದೆ. ನದಿಗೆ ಅಣೆಕಟ್ಟು ನಿರ್ಮಿಸಿ ಸದುಪಯೋಗಪಡಿಸುವಂತಹ ಯೋಜನೆಗೆ ಆದ್ಯತೆ ನೀಡಿದಲ್ಲಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯ.
ಮೂಲ್ಕಿ ಪರಿಸರದಲ್ಲಿ ಹೆಚ್ಚಿನ ವಸತಿ ಸಂಕೀರ್ಣಗಳು ನಿರ್ಮಾಣವಾಗುತ್ತಿರುವುದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬೃಹತ್ ಮಟ್ಟದಲ್ಲಿ ನಗರ ಪಂಚಾಯಿತಿ ಆಡಳಿತವನ್ನು ಕಾಡಲಿದೆ. ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆ.ಎಸ್. ರಾವ್ ನಗರ, ಮೂಲ್ಕಿಯ ಮೆಡಲಿನ್ ಶಾಲೆಯ ಬಳಿ, ಬಪ್ಪನಾಡು ದೇವಳದ ಬಳಿ ಸೇರಿದಂತೆ ಅಲ್ಲಲ್ಲಿ ನೀರನ್ನು ಸಂಗ್ರಹಿಸುವ ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಿದ್ದು, ನೀರು ಬರುವ ಸಮಸ್ಯೆ ಬಗೆಹರಿಸಬೇಕಾಗಿದೆ.
ಮೂಲ್ಕಿ ಸಮೀಪದ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು ಪದವಿನ ಬಳಿ ಕಿನ್ನಿಗೋಳಿ, ಮೆನ್ನಬೆಟ್ಟು, ಐಕಳ ಗ್ರಾಮ ಪಂಚಾಯಿತಿ ಸೇರಿದಂತೆ 17 ಗ್ರಾಮಗಳಿಗೆ ನೀರು ಸರಬರಾಜಿನ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಂಡಿದೆ. ಆದರೆ, ಕಾಮಗಾರಿ ಕುಂಟುತ್ತಾ ಸಾಗಿದ್ದು ಅದಕ್ಕೆ ನೀರು ಸರಬರಾಜು ಮಾಡಲು ಸಂಕಲಕರಿಯದ ಬಳಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಅದೇ ರೀತಿ ಮೂಲ್ಕಿ ಪರಿಸರದಲ್ಲಿ ಹರಿಯುತ್ತಿರುವ ಶಾಂಭವಿ ನದಿಯ ನೀರನ್ನು ಸದುಪಯೋಗ ಪಡಿಸಿದಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸಬಹುದು.

ನೀರಿದ್ದರೂ ಬಳಕೆಯಾಗುತ್ತಿಲ್ಲ
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ನಾಡಿನ ಗಾಂಧಿ ಮೈದಾನದ ಬಳಿ ಮಡಿವಾಳ ಕೆರೆ, ಬಪ್ಪನಾಡು ದೇವಳದ ಬಳಿ ಕೆರೆ ಸೇರಿದಂತೆ ಹಲವಾರು ಕೆರೆಗಳಿದ್ದು, ಇದನ್ನು ದುರಸ್ತಿ ಪಡಿಸಿದಲ್ಲಿ ನೀರಿನ ಒರತೆ ಸಿಕ್ಕಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಸಾಧ್ಯವಿದೆ. ಜೊತೆಗೆ ಮೂಲ್ಕಿಯಲ್ಲಿ ಹರಿಯುತ್ತಿರುವ ಶಾಂಭವಿ ನದಿಯ ನೀರು ಸಮುದ್ರಕ್ಕೆ ಸೇರುತ್ತಿದ್ದು, ಇದಕ್ಕೆ ಮಟ್ಟು ಸೇರಿದಂತೆ ಅಲ್ಲಲ್ಲಿ ಅಣೆಕಟ್ಟು ನಿರ್ಮಿಸಿ ನೀರನ್ನು ಸಮರ್ಪಕವಾಗಿ ಉಪಯೋಗಿಸಿದಲ್ಲಿ ನೀರಿನ ಸಮಸ್ಯೆ ನಿವಾರಿಸಬಹುದು. ಆದರೆ, ಈ ಬಗ್ಗೆ ಶಾಸಕರಾಗಲಿ ಹಾಗೂ ನಗರ ಪಂಚಾಯಿತಿನ ಆಡಳಿತವು ಆಸಕ್ತಿ ವಹಿಸುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.