ದಕ್ಷಿಣ ಕನ್ನಡ

ಗುರುತು ಚೀಟಿಗಾಗಿ ಅಂಗವಿಕಲರ ಪರದಾಟ

Published On :

ಪುತ್ತೂರು: ಎಂಡೋಸಲ್ಫಾನ್ ಪೀಡಿತ ಅಂಗವಿಕಲರು ಗುರುತು ಚೀಟಿಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಆಗಮಿಸಿದ್ದು, ಸಮರ್ಪಕ ವ್ಯವಸ್ಥೆಗಳಿಲ್ಲದ ಕಾರಣ ದಿನವಿಡಿ ಪರದಾಟ ನಡೆಸಿದ ಪ್ರಸಂಗ ನಡೆದಿದೆ.
ಪುತ್ತೂರು ತಾಲೂಕಿನ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಂಗವಿಕಲರ ಗುರುತು ಚೀಟಿ ನೀಡಲು ಮಂಗಳವಾರ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಆಗಮಿಸುವಂತೆ ಆರೋಗ್ಯ ಇಲಾಖೆಯು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಸುಮಾರು 200ಕ್ಕೂ ಮಿಕ್ಕಿದ ಎಂಡೋಸಲ್ಫಾನ್ ಪೀಡಿತರು ಹಾಗೂ ಅವರ ಕುಟುಂಬಸ್ಥರು ಸಮರ್ಪಕ ಮಾಹಿತಿ ಕೊರತೆ, ಸ್ಥಳಾವಕಾಶದ ಕೊರತೆ ಹಾಗೂ ಇನ್ನಿತರ ಅವ್ಯವಸ್ಥೆಗಳಿಂದಾಗಿ ಸಮಸ್ಯೆ ಎದುರಿಸಬೇಕಾಯಿತು.
ಪುತ್ತೂರು ತಾಲೂಕಿನ ಕಡಬ, ನೆಲ್ಯಾಡಿ ಸೇರಿದಂತೆ ವಿವಿಧ ಕಡೆಗಳಿಂದ ಎಂಡೋ ಸಂತ್ರಸ್ತ ಅಂಗವಿಕಲರು, ಮಕ್ಕಳು ಸೇರಿದಂತೆ ಅನೇಕರು ಆಗಮಿಸಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳೂರಿನಿಂದ ಆಗಮಿಸಿದ ತಜ್ಞ ವೈದ್ಯರು ಅಂಗವೈಕಲ್ಯತೆ ಬಗ್ಗೆ ಶಿಫಾರಸು ಪತ್ರ ನೀಡುತ್ತಿದ್ದರು. ಆದರೆ ಅಂಗವಿಕಲ ಕಾರ್ಡ್ ನೀಡುವ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ಹೀಗಾಗಿ ವೈದ್ಯರ ಶಿಫಾರಸು ಪಡೆದ ಸಂತ್ರಸ್ತರು ಮುಂದಿನ ಮಾಹಿತಿಗಾಗಿ ಪರದಾಟ ನಡೆಸಬೇಕಾಯಿತು. ಮಧ್ಯಾಹ್ನವರೆಗೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ದೂರದ ಊರುಗಳಿಂದ ಹಣ ಖರ್ಚು ಮಾಡಿಕೊಂಡು ಮಕ್ಕಳನ್ನು ಎತ್ತಿಕೊಂಡು ಬಂದವರು ಇಲಾಖೆಗೆ ಹಿಡಿಶಾಪ ಹಾಕುತ್ತ ಹಿಂತಿರುಗಿದರು.
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಸ್ವಯಂಸೇವಾ ಸಂಘಟನೆಯ ಪ್ರಮುಖರಾದ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ನಯನಾ ರೈ, ಅಶ್ರಫ್ ಕಲ್ಲೇಗ ಮತ್ತಿತರರು ಸಂತ್ರಸ್ತರಿಗೆ ಸಲಹೆ- ಸಹಕಾರ ನೀಡಿದರು. ಬೆಳಗ್ಗೆಯೇ ಆಗಮಿಸಿದ ಅನಾರೋಗ್ಯ ಪೀಡಿತ ಎಂಡೋ ಸಂತ್ರಸ್ತರು ಹಾಗೂ ಅವರನ್ನು ಕರೆತಂದ ಕುಟುಂಬ ಉಪವಾಸ ಇರಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.