ಜನರಿಗೆ ನೀರಿಲ್ಲ, ಬರೀ ಕಣ್ಣೀರು, ಕೈಗಾರಿಕೆಗಳಿಗೆಲ್ಲಿ ನೀರು ?
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಕುಡಿಯಲು ನೀರಿಲ್ಲ ಎಂದು ಬೇಸಗೆಯಲ್ಲಿ ಜನ ಬಾಯಿ ಒಣಗಿಸಿಕೊಂಡು ಹಪ ಹಪಿಸುತ್ತಿದ್ದರೆ, ಎಸ್ಇಝಡ್ ಮೂಲಕ ಕೈಗಾರಿಕೆಗಳ ಪ್ರವಾಹವೇ ಬರುತ್ತಿದೆ. ನಗರೀಕರಣದಿಂದ ಸಾವಿರ, ಸಾವಿರ ಅಪಾರ್ಟ್ಮೆಂಟ್ ಮನೆಗಳ ನಿರ್ಮಾಣ ವಾಗುತ್ತಿದೆ.
ಹಸಿದ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತಾಗಿರುವ ಹೊತ್ತಿನಲ್ಲಿಯೇ ನೇತ್ರಾವತಿ ನದಿ ತಿರುವು ಮತ್ತು ಎತ್ತಿನ ಹೊಳೆ ಯೋಜನೆ ನಮ್ಮ ನೀರಿನ ಮೂಲವನ್ನೇ ಬತ್ತಿಸಿ ನಮ್ಮ ಜನರ ಬದುಕಿನ ಜೀವದ್ರವವನ್ನೇ ಕಿತ್ತುಕೊಳ್ಳಲು ಸ್ಕೆಚ್ ಹಾಕಿದೆ.
ಕಾದ ಬಾಣಲೆಯಂತಾದ ಜಿಲ್ಲೆಗೆ ನೇತ್ರಾವತಿಯ ಒಡಲಿನ ಹನಿ ಹನಿ ನೀರು ಒಣಗಿ ಹೋಗುವ ದೃಶ್ಯಗಳನ್ನು ಕಾಣುವ ಸ್ಥಿತಿ ಬರಲಿದೆಯೇ ಎಂಬ ಚಿಂತೆ ಮಂಗಳೂರಿನ ಜನರಿಗೆ ಕಾಡುತ್ತಿದೆ.
ಈ ಯೋಜನೆಗಳಿಗೆ ಉತ್ತರ ಕರ್ನಾಟಕ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜನಪ್ರತಿನಿಧಿಗಳ ಒತ್ತಡ ಹೆಚ್ಚಾದರೆ ಮತಗಳಿಕೆಗಾಗಿ ನದಿ ಮಾರಾಟ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಎಸ್ಇಝಡ್ ವಿಸ್ತಾರಗೊಂಡು ಕೈಗಾರಿಕೆಗಳ ಸಮೂಹವೇ ದಾಂಗುಡಿ ಇಡುತ್ತಿದೆ. ಇವುಗಳ ಜಲ ದಾಹ ತೀರಿಸಲು ಶಂಭೂರು ಎಎಂಆರ್ ಆಣೆಕಟ್ಟು ನೀರು ತಿರುಗಿಸುವ ಪ್ರಯತ್ನ ಸಾಗಿದೆ.
ಮಂಗಳೂರು ನಗರದ ಜನರಿಗೆ ನೀರು ನೀಡಲು ತುಂಬೆಯಲ್ಲಿ ಆಣೆಕಟ್ಟು ಎತ್ತರಿಸಲು ಮಹಾನಗರ ಪಾಲಿಕೆ ಕಾರ್ಯೋನ್ಮುಖವಾಗಿದೆ. ಆದರೆ ಮಳೆ ನೀರು ಹರಿದು ಬಂದರೆ ತಾನೆ ?
ಏಕೆಂದರೆ ಎತ್ತಿನಹೊಳೆ ಯೋಜನೆ ಹೆಸರಲ್ಲಿ ಪಶ್ಚಿಮ ಘಟ್ಟದಲ್ಲಿ ಬೀಳುವ ನೀರನ್ನು ಸಣ್ಣ, ಸಣ್ಣ ತೊರೆಗಳ ನೀರನ್ನು ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ ಒಯ್ಯಲು ಸಿದ್ಧತೆ ನಡೆಸಿದ್ದಾರೆ.
ಹೀಗಾದರೆ ಕರಾವಳಿಯ ಜೀವ ನದಿ ನೇತ್ರಾವತಿ ವೈಯ್ಯಾರದಿಂದ ಬಳುಕುತ್ತಾ ಮಂಗಳೂರು ಪ್ರವೇಶ ಕಾಣುವುದು ದುಸ್ತರವಾಗಬಹುದೇನೋ ? ಜಿಲ್ಲೆಯ 4 ತಾಲೂಕುಗಳಲ್ಲಿ ಹರಿಯುವ ಈ ಪಶ್ಚಿಮವಾಹಿನಿ ನೇತ್ರಾವತಿ ದಕ್ಷಿಣ ಕನ್ನಡಿಗರ ಜೀವನಾಡಿ. ನೇತ್ರಾವತಿ ದಿಕ್ಕು ಬದಲಿಸಿದರೆ, ಮೂಲದಲ್ಲಿ ಹರಿವ ನೀರನ್ನು ಎತ್ತಿನಹೊಳೆ ಹೆಸರಲ್ಲಿ ತಿರುಗಿಸಿದರೆ ನೇತ್ರಾವತಿ ಸೊರಗುತ್ತಾಳೆ. ಇಲ್ಲಿನ ಜನರೂ ಸೊರಗುತ್ತಾರೆ.
3,357 ಚದರ ಕಿ.ಮೀ. ವಿಸ್ತಾರದ ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ವಾರ್ಷಿಕ 4,306 ಮಿ.ಮೀ. ಮಳೆ ಬೀಳುತ್ತದೆ. ನದಿ ಹರಿವಿನ ವಾರ್ಷಿಕ ಪ್ರಮಾಣ 12,434 ಘನ ಮೀಟರ್. 446 ಟಿಎಂಸಿ ನೀರು ನದಿಯಲ್ಲಿ ಹರಿದು ಹೋಗುತ್ತದೆ.
ಮಂಗಳೂರಿನ ಶೇ.70 ಮಂದಿ ಈ ನದಿ ನೀರನ್ನೇ ಅವಲಂಬಿಸಿದ್ದಾರೆ. ಪ್ರತಿದಿನ 160ಎಂಎಲ್ಡಿ ನೀರು ನಗರಕ್ಕೆ ಪೂರೈಕೆಯಾಗುತ್ತಿದೆ.
ವಿಶೇಷ ವಿತ್ತವಲಯದಲ್ಲಿ ಕೈಗಾರಿಕೆಗಳು ಪೂರ್ಣವಾಗಿ ಸ್ಥಾಪನೆಯಾದರೆ ಪ್ರತಿದಿನ 500 ಎಂಜಿಡಿ ನೀರು ಬೇಕಾಗುತ್ತದೆ. ವಿವಿವದಿಂದ ಜನಸಂಖ್ಯೆಯೂ ಹೆಚ್ಚಿ, ಹೆಚ್ಚಿನ ನೀರು ಬೇಕಾಗುತ್ತದೆ. ವಿವಿವ ನೀರು ಪೂರೈಕೆಗೆ ಕಾಡಿನಲ್ಲಿ ಮರ ಕಡಿದು ಪೈಪ್ಲೈನ್ಗಳನ್ನು ಹಾಕಿದೆ.
ಈ ನದಿ ತಪ್ಪಲಿನಲ್ಲಿ 28 ಕಿರು ಜಲ ವಿದ್ಯುತ್ ಯೋಜನೆಗಳು ಕಾರ್ಯಾಚರಿಸುತ್ತಿವೆ. ಸಬ್ಸಿಡಿ ಆಸೆಗಾಗಿ ಇನ್ನೂ ಹೆಚ್ಚಿನ ಯೋಜನೆಗಳು ಈ ನದಿ ನೀರನ್ನೇ ಬಳಸಿ ಬರಲಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಕಾಲ ಮಿಂಚಿ ಹೋಗುವುದರಲ್ಲಿ ಸಂಶಯ ಇಲ್ಲ.
ಆಣೆಕಟ್ಟುಗಳಲ್ಲಿ ನೀರು ಸಂಗ್ರಹ
ಮಹಾನಗರದ ನೀರಿನ ಪೂರೈಕೆ ವ್ಯವಸ್ಥೆಗೆ ಬಗ್ಗೆ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಹೀಗೆ ಹೇಳುತ್ತಾರೆ. ಮಹಾನಗರ ಪಾಲಿಕೆಯ ತುಂಬೆ ಆಣೆಕಟ್ಟಿನಿಂದ ಮೇಲ್ಭಾಗದಲ್ಲಿರುವ ನೀರಕಟ್ಟೆ ಆಣೆಕಟ್ಟು, ಎಎಂಆರ್ ಆಣೆಕಟ್ಟುಗಳಲ್ಲು ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಹೇಳಿದ್ದೇವೆ. ಎಎಂಆರ್ ಆಣೆಕಟ್ಟಿನ ನೀರು ವಿವಿವಕ್ಕೆ ಬಳಸುವ ಬಗ್ಗೆ ನಾವು ಆಕ್ಷೇಪಣೆ ಹಾಕಿದ್ದೇವೆ. ನೀರು ಯಥೇಚ್ಛ ಇದ್ದಾಗ ಬಳಸಲು ಅಡ್ಡಿ ಇಲ್ಲ. ಪ್ರತಿ ದಿನ 160 ಎಂಎಲ್ಡಿ ನೀರು ನಗರಕ್ಕೆ ಪೂರೈಸುತ್ತಿದ್ದೇವೆ.
ನದಿ ನೀರು ಬರದಿದ್ದರೆ ತೊಂದರೆ: ನೇತ್ರಾವತಿ ನದಿಯಲ್ಲಿ ನೀರು ಬರದಿದ್ದರೆ ಸಮಸ್ಯೆ ಆಗುತ್ತವೆ. ನದಿ ಮೂಲವೇ ಆಗಿದೆ. ಎಎಂಆರ್ ಆಣೆಕಟ್ಟಿನಲ್ಲಿ 9 ಮೀಟರ್ ನೀರು ಸಂಗ್ರಹಿಸಬಹುದು. 2020 ಜನಸಂಖ್ಯೆಗೆ ಅನುಗುಣವಾಗಿ ತುಂಬೆಯಲ್ಲಿ 12 ಮೀಟರ್ ಎತ್ತರದ ಹೊಸ ಆಣೆಕಟ್ಟು ನಿರ್ಮಿಸುತ್ತಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಇದರಲ್ಲಿ 7 ಮೀಟರ್ ನೀರು ಸಂಗ್ರಹಿಸಬಹುದು. ಈ ಬಾರಿ ಶೇ.30 ಮಳೆ ಪ್ರಮಾಣ ಕಡಿಮೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಿಂದಿನ ಆಣೆಕಟ್ಟುಗಳಲ್ಲಿ ನೀರು ತುಂಬಿಸಿದ್ದೇವೆ,ಬಾರಿ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಆಯುಕ್ತ ಡಾ.ಹರೀಶ್ ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

