ಬೇರ್ಪಟ್ಟ ಕೈಗಳ ಯಶಸ್ವಿ ಮರು ಜೋಡಣೆ
ಮಂಗಳೂರು: ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಬೇರ್ಪಟ್ಟ ಕೈಗಳ ಯಶಸ್ವಿ ಮೈಕ್ರೋವ್ಯಾಸ್ಕುಲರ್ ಮರು ಜೋಡಣಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ವಿವರ ನೀಡಿದರು.
ಮೂಲ್ಕಿ ರೇಲ್ವೆ ನಿಲ್ದಾಣ ಬಳಿ ಸೆ.28ರಂದು ಮೂಡುಬಿದಿರೆಯ ಶರತ್ಚಂದ್ರ ಎಂಬವರಿಗೆ ತಂಡವೊಂದು ಹಲ್ಲೆ ನಡೆಸಿ ಪರಾರಿಯಾಗಿತ್ತು. ಘಟನೆಯಲ್ಲಿ ಅವರ ಎಡಗೈ ಭುಜದಿಂದ ಸಂಪೂರ್ಣ ಬೇರ್ಪಟ್ಟಿತು ಹಾಗೂ ಬಲಗೈ ಮೊಣಕೈಯ ಕೆಳಭಾಗದಲ್ಲಿ ಸಂಪೂರ್ಣ ತುಂಡಾಗಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಸುಕಿನ ಜಾವ 4 ಗಂಟೆಗೆ ಎ.ಜೆ.ಆಸ್ಪತ್ರೆಗೆ ಶರತ್ಚಂದ್ರರನ್ನು ಕರೆತರಲಾಯಿತು. ಜತೆ ರೇಲ್ವೆ ನಿಲ್ದಾಣದಲ್ಲಿ ಬಿದ್ದಿದ್ದ ಎರಡು ಕೈಗಳನ್ನು ಆಸ್ಪತ್ರೆಗೆ ತರಲಾಯಿತು. ಆಸ್ಪತ್ರೆಗೆ ತಂದಾಗ ಅತಿಯಾದ ರಕ್ತಸ್ರಾವದಿಂದ ಗಾಯಾಳು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಬೇರ್ಪಟ್ಟ ಕೈಗಳನ್ನು ಸತತ 8 ಗಂಟೆಗಳ ಮೈಕ್ರೋವ್ಯಾಸ್ಕುಲರ್ ಶಸ್ತ್ರಚಿಕಿತ್ಸೆ ಮೂಲಕ ಮರು ಜೋಡಿಸಲಾಯಿತು. ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗ ಮುಖ್ಯಸ್ಥ ಡಾ.ದಿನೇಶ್ ಕದಂ ನೇತೃತ್ವದಲ್ಲಿ ಡಾ.ಸನತ್ ಭಂಡಾರಿ, ಅರಿವಳಿಕೆ ತಜ್ಞ ಡಾ.ತ್ರಿವಿಕ್ರಮ ತಂತ್ರಿ, ಡಾ.ರಾಜೇಶ್ ಹುಕ್ಕೇರಿ, ಎಲುಬು ಮತ್ತು ಮೂಳೆ ಶಸ್ತ್ರಚಿಕಿತ್ಸಕ ಡಾ.ಶ್ರೀಧರ ಶೆಟ್ಟಿ ತಂಡ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿತ್ತು. ಈಗ ಶರತ್ಚಂದ್ರ ಫಿಸಿಯೋಥೆರಪಿ ಪಡೆಯುತ್ತಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಈ ವೈದ್ಯಕೀಯ ತಂಡ 25ಕ್ಕೂ ಮೇಲ್ಪಟ್ಟು ಇಂಥ ಸಂಕೀರ್ಣ ಮರು ಜೋಡಣಾ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, ಸುಮಾರು 1 ಸಾವಿರ ಮೈಕ್ರೋವ್ಯಾಸ್ಕುಲರ್ ಶಸ್ತ್ರಚಿಕಿತ್ಸೆಯನ್ನು ಕಳೆದ 9 ವರ್ಷಗಳಲ್ಲಿ ನಿರ್ವಹಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

