ಉಪ್ಪಿನಂಗಡಿ: ಇಂದಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮಂಗಳೂರು: ದ.ಕ.ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ.1 ಮತ್ತು 2ರಂದು ಉಪ್ಪಿನಂಗಡಿಯಲ್ಲಿ ಛಂದೋವಿದ ಡಾ.ಶಿಮಂತೂರು ನಾರಾಯಣ ಶೆಟ್ಟಿ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಫೆ.1ರಂದು ಬೆಳಗ್ಗೆ 8.30ಕ್ಕೆ ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಭುವನೇಶ್ವರಿ ದಿಬ್ಬಣ ಹೊರಡಲಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯ ಕೇಶವ ಗೌಡ ಪುಷ್ಪಾರ್ಚನೆ ನೆರವೇರಿಸಲಿದ್ದು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಳಿನಾಕ್ಷಿ ಉದ್ಘಾಟಿಸುವರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ ದೀಪ ಬೆಳಗಿಸುವರು. 9.45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದು, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶಶಿಪ್ರಭ ಸಮ್ಮೇಳನ ಧ್ವಜಾರೋಹಣ ಮಾಡುವರು.
10ಕ್ಕೆ ಸಾಹಿತಿ ಡಾ.ಕಮಲಾ ಹಂಪನಾ ಸಮ್ಮೇಳನ ಉದ್ಘಾಟಿಸಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ್ ಅನಿಸಿಕೆ ವ್ಯಕ್ತಪಡಿಸುವರು. ಡಾ.ಶಿಮಂತೂರು ನಾರಾಯಣ ಶೆಟ್ಟಿ ಸಮ್ಮೇಳನಾಧ್ಯಕ್ಷ ಭಾಷಣ ಮಾಡುವರು.
ಬಳಿಕ ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಉಪಸ್ಥಿತಿಯಲ್ಲಿ ವಿದ್ವಾನ್ ಕೈಂತಜೆ ನರಸಿಂಹ ಭಟ್, ಡಾ.ಸುಕುಮಾರ ಗೌಡ, ಡಾ.ಸದಾಶಿವ ಭಟ್, ಎಸ್.ಡಿ.ಪೆಜತ್ತಾಯ, ಡಾ.ಫಾ.ವಿಲಿಯಂ ರಾಬರ್ಟ್ ಡಿಸಿಲ್ವ, ಪ್ರೊ.ವಿ.ಬಿ.ಅರ್ತಿಕಜೆ, ವೇ.ಮೂ.ಕೇಶವ ಜೋಗಿತ್ತಾಯರನ್ನು ಸನ್ಮಾನಿಸಲಾಗುವುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಲಾಪ್ರದರ್ಶನ ಉದ್ಘಾಟಿಸುವರು. ಜಿಲ್ಲಾ ಸಮ್ಮೇಳನ ಪುಸ್ತಕ ಮಾಲೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಸ್ಮರಣ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಬಿಡುಗಡೆಗೊಳಿಸುವರು.
ಫೆ.2ರಂದು ಸಮಾರೋಪ: ಫೆ.2ರಂದು ಸಂಜೆ 4.30ಕ್ಕೆ ಸಮಾರೋಪದಲ್ಲಿ ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ಮಾತನಾಡುವರು. ಡಾ.ಕೆ.ಇ.ರಾಧಾಕೃಷ್ಣ, ಡಾ.ರಮಾನಂದ ಬನಾರಿ ಪಾಲ್ಗೊಳ್ಳುವರು. ಇದಕ್ಕೂ ಮೊದಲು 3 ಗಂಟೆಗೆ ಉದ್ಯಮಿ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ 32 ಮಂದಿ ಧುರಣರನ್ನು ಹಿರಿಯ ಸಹಕಾರಿ ಪೆರಾಜೆ ಶ್ರೀನಿವಾಸ ರಾವ್ ಸನ್ಮಾನಿಸುವರು. ಮಧ್ಯಾಹ್ನ 2.15ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು, ಠರಾವು ಮಂಡನೆ ಸ್ವೀಕಾರವಾಗಲಿದೆ.
ವಿವಿಧ ಗೋಷ್ಠಿಗಳು: ಮೊದಲ ದಿನ ಮಧ್ಯಾಹ್ನ 2.15ಕ್ಕೆ 'ದ.ಕ.ಜಿಲ್ಲೆ: ಬದುಕಿನ ಸ್ಥಿತ್ಯಂತರಗಳು ಮತ್ತು ಸಾಹಿತ್ಯ' ವಿಚಾರಗೋಷ್ಠಿಯಲ್ಲಿ ಡಾ.ರಾಜೇಶ್ ಬಿಜ್ಜಂಗಳ, ಹರೀಶ್ ಅದೂರು, ಡಾ.ಪೂವಪ್ಪ ಕಣಿಯೂರು, ಜೋಗಿ ಬೆಂಗಳೂರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಹರೀಶ್ ರೈ ಭಾಗವಹಿಸುವರು.
ಸಂಜೆ 3.45ಕ್ಕೆ ಬಿ.ಪುರಂದರ ಭಟ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯಲ್ಲಿ 12 ಮಂದಿ ಕವಿಗಳು ಕವಿತೆ ವಾಚಿಸುವರು. ಸಂಜೆ 5.30ಕ್ಕೆ 'ಸಮ್ಮೇಳನಾಧ್ಯಕ್ಷರ ಸಾಹಿತ್ಯ-ಸಂವಾದ'ದಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ಟ, ಗಣರಾಜ ಕುಂಬ್ಳೆ, ಭಾಸ್ಕರ ಬಾರ್ಯ, ತಾರಾನಾಥ ವರ್ಕಾಡಿ, ಕೋಳ್ಯೂರು ರಾಮಚಂದ್ರ ರಾವ್, ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪಾಲ್ಗೊಳ್ಳುವರು. 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮರುದಿನ ಬೆಳಗ್ಗೆ 11ಕ್ಕೆ ಸ್ವಾಮಿ ವಿವೇಕಾನಂದರ ವಿಚಾರಧಾರೆ ವಿಷಯದಲ್ಲಿ ಕುಂಬ್ಳೆ ಸುಂದರ ರಾವ್ ಉಪನ್ಯಾಸ ನೀಡುವರು. 11.30ಕ್ಕೆ 'ದ.ಕ.ಜಿಲ್ಲೆಯ ಸ್ಥಿತ್ಯಂತರಗಳು ನೆಲೃಜಲ-ಅಭಿವೃದ್ಧಿ ನೆಲ' ಬಗ್ಗೆ ಡಾ.ನರೇಂದ್ರ ರೈ ದೇರ್ಲ, ಡಾ.ಶ್ರೀಶ ಕುಮಾರ್, ಡಾ.ಉದಯ ಕುಮಾರ್ ಇರ್ವತ್ತೂರು, ಸುಬ್ರಹ್ಮಣ್ಯಂ, ಮಂಚಿ ಶ್ರೀನಿವಾಸ ಆಚಾರ್ ಭಾಗವಹಿಸುವರು. ಪುತ್ತೂರು ತಾಲೂಕು ಅಧ್ಯಕ್ಷ ವರದರಾಜ ಚಂದ್ರಗಿರಿ, ಸಮ್ಮೇಳನ ಸಮಿತಿ ಅಧ್ಯಕ್ಷ ಧನ್ಯ ಕುಮಾರ್ ರೈ, ಸಂಚಾಲಕ ಐತ್ತಪ್ಪ ನಾಯ್ಕ, ಕಸಾಪ ಮಂಗಳೂರು ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ನಿತ್ಯಾನಂದ ಕಾರಂತ ಪೊಳಲಿ, ಜನಾರ್ದನ ಹಂದೆ, ಅರವಿಂದ, ಜಿ.ಕೆ.ಭಟ್ ಸೇರಾಜೆ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

