ಇನ್ನು ಶಾಸಕರ ಕೋರಿಕೆ ರಸ್ತೆಗೆ ನಬಾರ್ಡ್ ಕತ್ತರಿ!
ಮಂಗಳೂರು: ಇನ್ನು ಕೇಳಿದ ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಲೋಕೋಪಯೋಗಿ ಇಲಾಖೆ ಧಾರಾಳಿತನ ಪ್ರದರ್ಶಿಸಲು ಇನ್ನು ಸಾಧ್ಯವಿಲ್ಲ. ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ನಿರ್ವಹಿಸಲು ಅಗತ್ಯ ಮಾರ್ಗಸೂಚಿ ಜತೆಗೆ ನಬಾರ್ಡ್ ಅನುದಾನ ಬಳಕೆಗೆ ನಿರ್ದಿಷ್ಟ ಸೂಚನೆಯನ್ನು ಸರ್ಕಾರ ಹೊರಡಿಸಿದೆ. ಇದರಿಂದಾಗಿ ಶಾಸಕರ ಕೋರಿಕೆ ಮೇರೆಗೆ ನಬಾರ್ಡ್ನಿಂದ ಯಾವುದೇ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳುವಂತಿಲ್ಲ. ಅದೇ ರೀತಿ ಜಿಲ್ಲಾ ಪಂಚಾಯ್ತಿ ರಸ್ತೆಗಳನ್ನೂ ಲೋಕೋಪಯೋಗಿ ಇಲಾಖೆ ಮುಟ್ಟದು.
ನಬಾರ್ಡ್ ಅನುದಾನಕ್ಕೆ ಕತ್ತರಿ: ನಬಾರ್ಡ್ನ ಆರ್ಐಡಿಎಫ್-19(ಆರ್ಐಡಿಎಫ್-ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ)ಯೋಜನೆಗೆ ಇದು ಅನ್ವಯವಾಗುತ್ತದೆ. ಲೋಕೋಪಯೋಗಿ ಇಲಾಖೆಯಡಿ ಈ ಯೋಜನೆಯಲ್ಲಿ ಇದುವರೆಗೆ ಜಿಲ್ಲಾ ಪಂಚಾಯ್ತಿ ರಸ್ತೆಗಳನ್ನು ತೆಗೆದುಕೊಳ್ಳುತ್ತಿದ್ದರು. ಇತರೆ ಗ್ರಾಮೀಣ ಸಣ್ಣ ರಸ್ತೆಗಳೂ ಒಳಗೊಂಡಿದ್ದವು. ಮುಖ್ಯವಾಗಿ ಶಾಸಕರು ಶಿಫಾರಸ್ಸು ಮಾಡುವ ಯಾವುದೇ ರಸ್ತೆಗಳಿಗೆ ಲೋಕೋಪಯೋಗಿ ಇಲಾಖೆ ತಕರಾರಿಲ್ಲದೆ ನಬಾರ್ಡ್ ಅನುದಾನ ದೊರಕಿಸಿಕೊಡುತ್ತಿತ್ತು. ನಬಾರ್ಡ್ನ ಆರ್ಐಡಿಎಫ್-18ರ ವರೆಗೆ ಈ ಯೋಜನೆಯಲ್ಲಿ ಅವಕಾಶವಿತ್ತು. ಈ ವರ್ಷದಿಂದ ನಿಯಮದಲ್ಲಿ ಬದಲಾವಣೆ ಮಾಡಿ ಕೇವಲ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲು ಇಲಾಖೆ ಪ್ರಧಾನ ಕಾರ್ಯದರ್ಶಿ ತುರ್ತು ಸುತ್ತೋಲೆಯಲ್ಲಿ (ಸಂಖ್ಯೆ:ಪಿಡಬ್ಲ್ಯೂಡಿ 40 ಆರ್ಡಿಎಫ್)ಕಳುಹಿಸಿದ್ದಾರೆ. ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಮತ್ತು ಸೇತುವೆಗಳ ನಿರ್ಮಾಣ/ಪುನರ್ ನಿರ್ಮಾಣ ಕೈಗೊಳ್ಳಲು ಆದ್ಯತೆ ಮೇರೆಗೆ ಪ್ರಸ್ತಾವನೆ ಸಲ್ಲಿಸಬಹುದು ಎಂದು ಸೂಚಿಸಲಾಗಿದೆ.
ಈ ಸುತ್ತೋಲೆ ಪ್ರಕಾರ, ಜಲ್ಲಿ/ಮಣ್ಣಿನ ಮೇಲ್ಮೈ ಇರುವ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಯನ್ನು ಮಾತ್ರ ಪ್ರಸ್ತಾಪಿಸಬೇಕು. ಜಿಲ್ಲಾವಾರು/ತಾಲೂಕುವಾರು ಸಂಪರ್ಕ ರಸ್ತೆ, ಸಂಚಾರ ದಟ್ಟಣೆ ಮುಂತಾದ ತಾಂತ್ರಿಕ ಅಂಶಗಳಿಗೆ ಆದ್ಯತೆ ನೀಡಿ ಆದ್ಯತಾ ಪಟ್ಟಿ ತಯಾರಿಸಬೇಕು ಎಂದು ತಿಳಿಸಲಾಗಿದೆ. ನಡೆದಾಡಲು ಕಷ್ಟಕರವಾದ ರಸ್ತೆ ಹಾಗೂ ಡಾಂಬರೀಕರಣವಾಗಿ ಹಾಳಾದ ರಸ್ತೆಗಳನ್ನು ಪ್ರಸ್ತಾಪಿಸಬಾರದು ಎಂದು ಸೂಚಿಸಲಾಗಿದೆ.
ರಂಗೋಲಿಯಡಿ ತೂರ್ತಾರೆ...: ಜಿಲ್ಲಾ ಪಂಚಾಯ್ತಿ ಅಧೀನದ ರಸ್ತೆಗಳು ಹಾಗೂ ಶಾಸಕರ ಕೋರಿಕೆಯ ರಸ್ತೆಗಳಿಗೆ ಅನುದಾನ ನೀಡಬಾರದು ಎಂದು ಪರೋಕ್ಷವಾಗಿ ಸುತ್ತೋಲೆಯಲ್ಲಿ ಹೇಳಿರುವುದರಿಂದ ಶಾಸಕರು ರಂಗೋಲಿಯಡಿ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ.
ಶಾಸಕರು ತಮ್ಮ ಶಿಫಾರಸ್ಸಿನಲ್ಲಿ ಹಳ್ಳಿ ರಸ್ತೆಗಳನ್ನು ಅಗಲೀಕರಣಗೊಳಿಸಿ ಡಾಂಬರೀಕರಣಕ್ಕೆ ಹೇಳುತ್ತಿದ್ದಾರೆ. ಇದರಿಂದ ನಬಾರ್ಡ್ ನಿಯಮ ಉಲ್ಲಂಘಿಸಿದಂತೆ ಆಗುವುದಿಲ್ಲ. ಕ್ಷೇತ್ರಕ್ಕೆ ಕಾಮಗಾರಿಯೂ ದಕ್ಕುತ್ತದೆ ಎನ್ನುವುದು ಶಾಸಕರ ಲೆಕ್ಕಾಚಾರ. ಹೀಗೆ ಶಾಸಕರು ಶಿಫಾರಸ್ಸು ಮಾಡಿದರೆ ಅವರ ಮಾತನ್ನು ಮೀರುವಂತೆಯೂ ಇಲ್ಲ ಎನ್ನುವ ಸಂದಿಗ್ಧದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಿಲುಕುತ್ತಿದ್ದಾರೆ.
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

