ದಕ್ಷಿಣ ಕನ್ನಡ

ಕುಸಿದು ಬಿದ್ದು ವ್ಯಕ್ತಿ ಸಾವು

Published On :

ಬ್ರಹ್ಮಾವರ: ಇಲ್ಲಿನ ವಾರಂಬಳ್ಳಿ ಗ್ರಾಮದ ಮಹೇಶ್ ಆಸ್ಪತ್ರೆಯ ದ್ವಾರದ ಬಳಿ ಜನಾರ್ದನ (32) ಎಂಬವರು  ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತರು ಹೃದಾಯಾಘಾತದಿಂದ ಅಥವಾ ಬೇರೆ ಯಾವುದೋ ಕಾಯಿಲೆಯಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾನುವಾರು ಅಕ್ರಮ ಸಾಗಾಟ; ಇಬ್ಬರ ಸೆರೆ
ಬ್ರಹ್ಮಾವರ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಇಲ್ಲಿನ ಅಂಚೆ ಕಚೇರಿ ಎದುರು ಭಾನವಾರ ಬಂಧಿಸಿದ್ದಾರೆ. ಅಬ್ಬಾಸ್ ಮತ್ತು ಚಂದ್ರ ಬಂಧಿತರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸರು ಸಾಸ್ತಾನ ಕಡೆಯಿಂದ ಉಡುಪಿ ಕಡೆಗೆ ಯಾವುದೇ ಪರವಾನಗಿ ಇಲ್ಲದೆ ಹೊರ ರಾಜ್ಯದ ಕಸಾಯಿಖಾನೆಗೆ ಅಕ್ರಮ ಸಾಗಿಸುತ್ತಿದ್ದ 30 ಸಾವಿರು ಮೌಲ್ಯದ 2 ಕೋಣಗಳನ್ನು ಹಾಗೂ 1,50,000 ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಮಂಗಳೂರು: ಕಾವೂರು ಶಾಂತಿನಗರ ನಿವಾಸಿ ಭವ್ಯ(19) ನಾಪತ್ತೆಯಾದ ಬಗ್ಗೆ ಭಾನುವಾರ ವರದಿಯಾಗಿದೆ. ಜು.20ರಂದು ತನ್ನ ಕಾಂತನಬೆಟ್ಟು ಮನೆಯಿಂದ ಸಂಜೆ 4ಕ್ಕೆ ಲೈಬ್ರೆರಿಗೆಂದು ಹೋದಾಕೆ ಮರಳಿ ಬಂದಿಲ್ಲ. ಸಪೂರ ಶರೀರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಚೂಡಿದಾರ್ ಧರಿಸಿರುತ್ತಾಳೆ ಎಂದು ಸಹೋದರ ಚೇತನ್ ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಸ್‌ಗೆ ಕಲ್ಲು; ಆರೋಪಿ ಸೆರೆ
ಉಪ್ಪಿನಂಗಡಿ: ಶನಿವಾರ ಸವಣೂರಿನಲ್ಲಿ ಸರ್ಕಾರಿ ಬಸ್ಸಿಗೆ ಕಲ್ಲೆಸೆದು ಬಸ್ ಚಾಲಕನಿಗೆ ಗಾಯಗೊಳಿಸಿದ್ದ ಪ್ರಕರಣದಲ್ಲಿನ ಆರೋಪಿ ಶಬೀರ್ ಎಂಬಾತನನ್ನು ಕಡಬ ಪೋಲೀಸರು ಬಂಧಿಸಿದ್ದಾರೆ. ಸೈಡ್ ಕೊಡಲಿಲ್ಲವೆಂಬ ನೆಪವೊಡ್ಡಿ ಸವಣೂರು ಸಮೀಪದ ಪಣೆಮಜಲು ಪಲ್ಲದಮಜಲು ನಿವಾಸಿ ಶಬೀರ್ ಎಂಬಾತ ಸರ್ಕಾರಿ ಬಸ್‌ಗೆ ಕಲ್ಲೆಸೆದು ಚಾಲಕ, ಕಬಕದ ನಿವಾಸಿ ಶೇಖರ ಗೌಡಗೆ ಗಾಯಗೊಳಿಸಿ ಪರಾರಿಯಾಗಿದ್ದ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನೇತ್ರಾವತಿ ನದಿಗೆ ಬಿದ್ದು ಸಾವನ್ನಪ್ಪಿದ್ದ
ವ್ಯಕ್ತಿಯ ಗುರುತು ಪತ್ತೆ
ಮಂಗಳೂರು: ಉಳ್ಳಾಲ ಸಮೀಪ ನೇತ್ರಾವತಿ ನದಿಯ ರೈಲು ಸೇತುವೆಯಿಂದ ಶುಕ್ರವಾರ ನದಿಗೆ ಬಿದ್ದ ಸಾವೀಗಿಡಾದ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಶಿರಸಿಯ ವಿನಯ ವಾಸ್ (24) ಮೃತರು. ಈತ ಸೇರಿದಂತೆ 48 ಮಂದಿ ಶುಕ್ರವಾರ ಕೇರಳದ ಡಿವೈನ್ ಚರ್ಚ್‌ಗೆ ಹೋಗಿ ವಾಪಸ್ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದರು.  
ರಾತ್ರಿ 11.30ರ ಸುಮಾರಿಗೆ ನೇತ್ರಾವತಿ ಸೇತುವೆ ಬಳಿ ರೈಲು ವೇಗವನ್ನು ನಿಧಾನಗೊಳಿಸಿದಾಗ ನಿಲ್ದಾಣ ಬಂತೆಂದು ಭ್ರಮಿಸಿ ವಿನಯ ವಾಸ್ ರೈಲಿನಿಂದ ಇಳಿದಿದ್ದು, ಸಂಗಡಿಗರು ನೋಡುತ್ತಿದ್ದಂತೆ ಆತ ರೈಲಿನಿಂದ ಇಳಿದು ನದಿಗೆ ಬಿದ್ದು ನೀರು ಪಾಲಾಗಿದ್ದಾನೆ. ಶನಿವಾರ ಈತನ ಶವ ಸೇತುವೆ ಬಳಿ ಪತ್ತೆಯಾಗಿತ್ತು.
ಶವವನ್ನು ಉಳ್ಳಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ರೈಲು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪೆರ್ನೆ ದುರಂತ ಸಂತ್ರಸ್ತರಿಗೆ ಚೆಕ್ ವಿತರಣೆ
ಬಂಟ್ವಾಳ: ತಾಲೂಕಿನ ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ ಒಟ್ಟು 43.2 ಲಕ್ಷ ಮೊತ್ತದ ಚೆಕ್ ಅನ್ನು ಸಚಿವ ಬಿ. ರಮಾನಾಥ ರೈ ಭಾನುವಾರ ಬಿ.ಸಿ. ರೋಡ್‌ನಲ್ಲಿರುವ ಸಚಿವರ ಕಚೇರಿಯಲ್ಲಿ ವಿತರಿಸಿದರು.
ದುರಂತದಿಂದ ವಸ್ತು ನಾಶ ಪರಿಹಾರವಾಗಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪೆನಿಯಿಂದ ಒಟ್ಟು 14 ಮಂದಿಗೆ ಚೆಕ್ ವಿತರಿಸಲಾಯಿತು. ಸ್ಥಳೀಯ ನಿವಾಸಿಗಳಾದ ಸುಂದರ ರೈಗೆ 7.43 ಲಕ್ಷ, ಶಂಕರ್ ರೈ 2.83 ಲಕ್ಷ, ಮೃತ ಖತೀಜಮ್ಮರ ಮಕ್ಕಳಿಗೆ 3.93 ಲಕ್ಷ, ಖತೀಜಮ್ಮ ಕೋಂ ಇಸ್ಮಾಯಿಲ್ ಹಾಜಿ ಅವರಿಗೆ 7.17 ಲಕ್ಷ, ನಾರಾಯಣ ನಾಯ್ಕಗೆ 4.10 ಲಕ್ಷ, ಬಟ್ಯ ನಾಯ್ಕಗೆ 1.23 ಲಕ್ಷ, ಇಸ್ಮಾಯಿಲ್ ಶಾಫಿಗೆ 4.04 ಲಕ್ಷ, ಉಮ್ಮರ್ ಅವರಿಗೆ 3.02 ಲಕ್ಷ, ಅಬ್ಬಾಸ್‌ಗೆ 88 ಸಾವಿರ, ಉಮ್ಮಪ್ಪ ಪೂಜಾರಿ 3.58 ಲಕ್ಷ, ಜಿ. ಉಮ್ಮರ್ 1.24 ಲಕ್ಷ, ಚಂದ್ರಶೇಖರ 90 ಸಾವಿರ, ಅಬ್ದುಲ್ಲಾಗೆ 2.60 ಲಕ್ಷ, ಯೂಸುಫ್ ಅವರಿಗೆ 29 ಸಾವಿರದ ಚೆಕ್ ವಿತರಿಸಲಾಯಿತು. ಶಾಸಕಿ ಶಕುಂತಳಾ ಶೆಟ್ಟಿ, ತಹಸೀಲ್ದಾರ್ ಮಲ್ಲೆಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.