ದಕ್ಷಿಣ ಕನ್ನಡ

ವಿಷ ಕುಡಿಯಲೂ ಬೇರೆಯವರ ಸಹಾಯ ಬೇಕು...

Published On :

ಕನ್ನಡಪ್ರಭ ವಾರ್ತೆ, ವಿಧಾನಸಭೆ, ಜು.22
ಕಣ್ಣಿದ್ದರೂ ನೋಡಲಾಗುವುದಿಲ್ಲ. ಕಿವಿ ಇದ್ದರೂ ಕೇಳಿಸುವುದಿಲ್ಲ. ಕೈಕಾಲು ಇದ್ದರೂ ಓಡಾಡಲು ಸಾಧ್ಯವಿಲ್ಲ. ಹೋಗಲಿ ವಿಷ ಕುಡಿದು ಸಾಯೋಣ ಎಂದರೆ ಅದಕ್ಕೂ ಬೇರೆಯವರ ಸಹಾಯ ಬೇಕು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಬವಣೆಯನ್ನು ಪುತ್ತೂರು ಕ್ಷೇತ್ರದ ಶಾಸಕಿ ಶಕುಂತಲಾ ಶೆಟ್ಟಿ ಅವರು ವಿವರಿಸಿದ್ದು ಹೀಗೆ.
ಎಂಡೋಪೀಡಿತ ಮಕ್ಕಳು ಅತ್ತ ಬದುಕಲೂ ಆಗದೆ, ಇತ್ತ ಸಾಯಲೂ ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ತುತ್ತು ಬಾಯಿಗಿಟ್ಟುಕೊಳ್ಳಲು ಸಾಧ್ಯವಾಗದೆ ವಿಷ ಕುಡಿಯೋಣ ಎಂದರೆ ಅದನ್ನು ಬಾಯಿಗೆ ಹಾಕಲು ಬೇರೆಯವರು ಬೇಕಾಗುತ್ತದೆ. ಏಕೆಂದರೆ, ಅವರ ಕೈ ಸ್ವಾಧೀನದಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅನೇಕ ಕಡೆ ಒಂದು ಮನೆಯಲ್ಲಿ ದಂಪತಿಗೆ 2- 3 ಮಕ್ಕಳಿದ್ದರೆ ಎಲ್ಲರೂ ಎಂಡೋ ಪೀಡಿತರಾಗಿರುತ್ತಾರೆ. ಹೀಗಾಗಿ ತಾಯಿ ಮನೆಯಲ್ಲೇ ಇದ್ದು ಅವರ ಆರೈಕೆ ಮಾಡಬೇಕು. ತಂದೆ ಮಾತ್ರ ದುಡಿದು ತರಬೇಕು ಎನ್ನುವ ಸ್ಥಿತಿ ಇದೆ. ಆದ್ದರಿಂದ ಇಂತಹ ಎಂಡೋಪೀಡಿತ ಕುಟುಂಬಗಳ ನೆರವಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ಆರೈಕೆಗೆ ಯಾರೂ ಇಲ್ಲ: ಎಂಡೋ ಪೀಡಿತ ಮಕ್ಕಳ ತಂದೆ-ತಾಯಿ ಮೃತರಾದ ಮೇಲೆ ಅವರ ಆರೈಕೆ ಮಾಡುವವರು ಯಾರೂ ಇಲ್ಲ. ಹೀಗಾಗಿ ಅಂಥ ಮಕ್ಕಳ ಆರೈಕೆಗಾಗಿ ವಿಶೇಷ ಕೇಂದ್ರಗಳನ್ನು ತೆರೆಯಬೇಕು. ಎಂಡೋ ಪೀಡಿತ ಪ್ರದೇಶದಿಂದ ಮದುವೆಯಾಗಿ ಹೋಗುವ ಹೆಣ್ಣು ಮಕ್ಕಳ ರಕ್ತ ಪರೀಕ್ಷೆ ಮಾಡಿ ಅವರ ರಕ್ತದಲ್ಲಿ ರೋಗದ ಅಂಶ ಕಂಡುಬಂದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದೇ ಇದ್ದರೆ ಅವರಿಗೆ ಹುಟ್ಟಿದ ಮಕ್ಕಳು ಎಂಡೋ ಪೀಡಿತರಾಗಿ ಓಡಾಡಲು ಶಕ್ತರಾಗದೆ ಮಲಗಿದಲ್ಲೇ ಇರಬೇಕಾಗುತ್ತದೆ ಎಂದು ಹೇಳಿದರು.
ಆದ್ದರಿಂದ ಎಂಡೋ ಪೀಡಿತರಿಗೆ ಶಾಶ್ವತ ಪರಿಹಾರ ಒದಗಿಸಬೇಕಾಗುತ್ತದೆ. ಜತೆಗೆ ರೋಗ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ವಿಶೇಷ ಪ್ಯಾಕೇಜ್ ಅನಿವಾರ್ಯವಾಗಿದೆ. ಅದಕ್ಕೆ ನಿಗದಿಪಡಿಸುವ ಮೊತ್ತ ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದರು.
ಗೊಲ್ಲರಹಟ್ಟಿ ಬಳಿ ಕೊಠಡಿ ನಿರ್ಮಿಸಿ:
ಗೊಲ್ಲರಹಟ್ಟಿಗಳಲ್ಲಿ ಒಂದು ಸಂಪ್ರದಾಯವಿದೆ. ಆ ಕುಟುಂಬದ ಹೆಣ್ಣು ಮಕ್ಕಳು ಋತುಮತಿಯರಾದಾಗ ಮತ್ತು ಹೆರಿಗೆ ಸಂದರ್ಭದಲ್ಲಿ ಮನೆಯಲ್ಲಿ ಇರುವಂತಿಲ್ಲ. ದೂರದ ಪ್ರದೇಶದಲ್ಲಿ ಒಂಟಿಯಾಗಿ ಇರಬೇಕಾಗುತ್ತದೆ. ಇದರಿಂದ ಅವರ ಜೀವ ಮತ್ತು ಆರೋಗ್ಯಕ್ಕೆ ಆಪಾಯವಿರುತ್ತದೆ. ಆದ್ದರಿಂದ ಅಂಥ ಗೊಲ್ಲರಹಟ್ಟಿಯ ಜನರಲ್ಲಿ ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಜತೆಗೆ ಋತುಮತಿಯರಾದಾಗ ಮತ್ತು ಹೆರಿಗೆ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಉಳಿದುಕೊಳ್ಳಲು ಸರ್ಕಾರದ ವತಿಯಿಂದ ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎಂದು ಕೋರಿದರು.
ರಾಮ, ಕೃಷ್ಣರು ಬರಲಿ: ರಾಜ್ಯದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯ, ಭ್ರೂಣಹತ್ಯೆ ಹೆಚ್ಚಾಗುತ್ತಿದೆ. ಪುರಾಣದಲ್ಲಿ ಒಬ್ಬ ರಾವಣ ಸೀತೆಯನ್ನು ಅಪಹರಣ ಮಾಡಿದನಾದರೂ ಆಕೆಗೆ ಯಾವುದೇ ಅಪಾಯ ಮಾಡಲಿಲ್ಲ. ಆದರೆ, ಇಂದು ರಾಮನ ಮುಖವಾಡ ಹೊತ್ತವರು ರಾವಣನಿಗಿಂತಲೂ ಕೀಳಾಗಿ ನಡೆದುಕೊಂಡು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸುತ್ತಾರೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಲ್ಲಿ ರಾಮಂದಿರು, ಕೃಷ್ಣಂದಿರು ಬರಬೇಕಾಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಕಟ್ಟುನಿಟ್ಟಿನ ಅಧಿಕಾರಿಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕರಾವಳಿ ಭಾಗದಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಬಿಳಿ ಅಕ್ಕಿ ಬದಲು ಕೆಂಪು ಅಕ್ಕಿ ನೀಡಬೇಕು. ಪುತ್ತೂರಿನ ಶಿವರಾಮ ಕಾರಂತ ಬಾಲಭವನ ಅಭಿವೃದ್ಧಿಗೆ 10 ಲಕ್ಷ ನೀಡಬೇಕು.ಇತ್ತೀಚೆಗೆ ಬಿದ್ದ ಮಳೆಯಿಂದ ಹಾನಿಗೊಳಗಾದವರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಕೊಳೆರೋಗದಿಂದ ನಷ್ಟ ಅನುಭವಿಸಿರುವ ಅಡಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.