' 1 ಗೆ ಅಕ್ಕಿ ಕೇಳುವವರೇ ಬಡವರು'
ಉಡುಪಿ: ಬಡವರೆಂದರೆ ಯಾರು?
ಉಡುಪಿ ಶಾಸಕರ ಪ್ರಕಾರ ರು. 1ಗೆ ಅಕ್ಕಿ ಕೇಳುತ್ತಿದ್ದಾರೆ ಎಂದರೆ ಅವರು ಬಡವರು.
ಶನಿವಾರ ನಡೆದ ಉಡುಪಿ ತಾಲೂಕು ಪಂಚಾಯಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಪ್ರಮೋದ್ ಮಧ್ವರಾಜ್, ಈ ಬಡವರಿಗೆ ರು. 1ಗೆ ಕೆ.ಜಿ. ಅಕ್ಕಿ ಸಿಗುತ್ತಿಲ್ಲ. ಕಾರಣ ಅವರದ್ದು ಎಪಿಎಲ್ ಪಡಿತರ ಕಾರ್ಡ್, ಆದ್ದರಿಂದ ಅಂತಹ ಎಪಿಎಲ್ ಕಾರ್ಡ್‌ದಾರರನ್ನು ಬಿಪಿಎಲ್ ಕಾರ್ಡ್‌ದಾರರನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಶುರು ಆಗಿದೆ. ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ತಾಕೀತು ಮಾಡಿದರು. ಮಾತ್ರವಲ್ಲ ತನಗೆ ಈ ವಿಷಯದಲ್ಲಿ ಯಾವುದೇ ದೂರುಗಳು ಬರಬಾರದು ಎಂದು ಎಚ್ಚರಿಕೆಯನ್ನೂ ನೀಡಿದರು.
ಇನ್ನು ಮುಂದೆ ಬಿಪಿಎಲ್ ಕಾರ್ಡ್ ಹೊಂದಲು ಫಲಾನುಭವಿ ತನ್ನ ಕುಟುಂಬದ ಆದಾಯ ಪ್ರಮಾಣಪತ್ರ ತೋರಿಸಬೇಕಾಗಿಲ್ಲ. ಸರ್ಕಾರ 14 ಮಾನದಂಡಗಳನ್ನು ಹೇಳಿದೆ, ಆ ಮಾನದಂಡದೊಳಗೆ ಯಾರಿದ್ದಾರೋ ಅವರಿಗೆಲ್ಲ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಹೇಳಿದ ಅವರು, ಅಧಿಕಾರಿಗಳೇ, ನೀವೇನೂ ಕೈಯಿಂದ ಈ ಕಾರ್ಡ್‌ದಾರರಿಗೆ ಸೌಲಭ್ಯಗಳನ್ನು ನೀಡುತ್ತಿಲ್ಲ, ಸರ್ಕಾರ ಕೊಡುತ್ತದೆ. ಅದನ್ನು ಪಡೆಯುವುದಕ್ಕೆ ಬಡವರಿಗೆ ಸಹಾಯ ಮಾಡಿ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದೆ ಎಂದು ಆರೋಪಿಸುವ ಬದಲು, ನಿಜವಾದ ಬಿಪಿಎಲ್ ಫಲಾನುಭವಿ ಯಾರು ಎಂಬುದನ್ನು ಗುರುತಿಸುವಲ್ಲಿ ತಾಲೂಕು ಪಂಚಾಯಿತಿ ಸದಸ್ಯರು ಕೆಲಸ ಮಾಡಿ, ಇದು ನಿಜವಾದ ಸಾಧನೆ ಹೊರತು ಆರೋಪ ಮಾಡುವುದಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಸದಸ್ಯರ ಕಾಲೆಳೆದರು.
ತಾ.ಪಂ. ಸದಸ್ಯರಿಗೆ ಅವಮಾನ: ಕೋಟ ಪಂಚಾಯಿತಿ ಗ್ರಾಮ ಸಭೆಯಲ್ಲಿ ತನಗೆ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಸೂಕ್ತ ಸ್ಥಾನಮಾನ ನೀಡದೆ ಅವಮಾನಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಭರತ್ ಶೆಟ್ಟಿ ಸಭೆಯಲ್ಲಿ ಆರೋಪಿಸಿದರು.
ತಾನು ಸಭೆಗೆ ಹೋದಾಗ ತನಗೆ ವೇದಿಕೆಯಲ್ಲಿ ಕೊನೆಯ ಕುರ್ಚಿ ನೀಡಲಾಯಿತು, ಜಿಲ್ಲಾ ಪಂಚಾಯಿತಿ ಸದಸ್ಯರು ಬಂದಾಗ ವೇದಿಕೆಯಲ್ಲಿ ಕುರ್ಚಿ ಖಾಲಿ ಇರಲಿಲ್ಲ, ತಾನು ಎದ್ದು ಅವರಿಗೆ ಸ್ಥಾನ ಕೊಟ್ಟು ಕೆಳಗೆ ಕೂತೆ, ಜಿ.ಪಂ. ಸದಸ್ಯರಿಗೆ ಬೇಸರವಾಗಿ ಅವರು ವೇದಿಕೆ ಹತ್ತದೆ ಕೆಳಗೆ ಕೂತರು, ನಂತರ ನಾವಿಬ್ಬರೂ ಸಭೆಯನ್ನು ಬಹಿಷ್ಕರಿಸಿದೆವು ಎಂದವರು ಹೇಳಿದರು.
ಶೆಟ್ಟಿ ಅವರ ನೋವಿಗೆ ಇನ್ನೊಬ್ಬ ಸದಸ್ಯ ದೇವದಾಸ್ ಹೆಬ್ಬಾರ್ ಕೂಡ ಧ್ವನಿಗೂಡಿಸಿದರು. ಇದಕ್ಕೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥಯ್ಯ ಅವರು ಈ ಬಗ್ಗೆ ಅಲ್ಲಿನ ಅಧಿಕಾರಿಗಳ ಕ್ರಮ ಕೈಗೊಳ್ಳಲು ಮೇಲಧಿಕಾರಿಗೆ ಶಿಫಾರಸು ಮಾಡುವುದಾಗಿ ಹೇಳಿದರು.
ಬಸವ ವಸತಿ ಯೋಜನೆ, ಇಂದಿರಾ ಆವಾಜ್ ಯೋಜನೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮೆಸ್ಕಾಂ, ಆರೋಗ್ಯ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ತಾ.ಪಂ. ಸದಸ್ಯರಾದ ವೆರೋನಿಕಾ ಕರ್ನೇಲಿಯೋ, ಡಾ. ಸುನೀತಾ, ಉಮೇಶ್ ನಾಯ್ಕ್, ಪ್ರವೀಣ್ ಶೆಟ್ಟಿ ಚರ್ಚೆಯಲ್ಲಿ ಪಾಲ್ಗೊಂಡರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಗೌರಿ ಪೂಜಾರಿ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ ಕುಲಾಲ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದಿವಾಕರ ಹೆಗ್ಡೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

