ದಕ್ಷಿಣ ಕನ್ನಡ

ರಾಮಕಥೆಯಲ್ಲಿ 'ಭಾವ'ವೇ ಸರ್ವೋತ್ಕೃಷ್ಟ: ರಾಘವೇಶ್ವರ ಭಾರತಿ ಶ್ರೀ

Published On :

ವಿಟ್ಲ: ರಾಮಕಥೆಯಲ್ಲಿ 'ಭಾವ'ವೇ ಸರ್ವೋತ್ಕೃಷ್ಟ. ಗಾಯಕರು ಹಾಡುತ್ತಾ ಹಾಡುತ್ತಾ ಮಾತನಾಡಿ, ಪದಗಳನ್ನು ಅದೇ ಭಾವದಲ್ಲಿ ಉಚ್ಛರಿಸುವುದು ಇಲ್ಲಿನ ವಿಶೇಷತೆ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
 ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಮಂಗಳವಾರ, ರಾಮಕಥಾ ಮಾಲಿಕೆಯಲ್ಲಿ ಅವರು ಹನುಮಂತನ ಜೀವನ ಚರಿತ್ರೆ ಕುರಿತು ಪ್ರವಚನ ನೀಡಿದರು.
'ನಿಧಿಗಿಂತ ಸನ್ನಿಧಿ ಮೇಲು' ಎಂದು ತ್ಯಾಗರಾಜರು ಹೇಳಿದ್ದರು. ಹನುಮಂತನೂ ಬದುಕಿನಲ್ಲಿ ಇದೇ ತತ್ವ ಅಳವಡಿಸಿಕೊಂಡಿದ್ದ. ಇದೇ ಮನೋಭಾವದಿಂದ, ರಾವಣನ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡ ವಾಲಿಯ ಬದಲಾಗಿ ಸುಗ್ರೀವನ ಸಖ್ಯ ಬೆಳೆಸಿದ ಎಂದು ಸ್ವಾಮೀಜಿ ವಿವರಿಸಿದರು.
 ರಾವಣನ ಸೊಕ್ಕು ಮುರಿದ ವಾನರೇಂದ್ರ ವಾಲಿಯ ಕಥೆಯನ್ನು ಪ್ರಸ್ತುತಪಡಿಸಿದ ಸ್ವಾಮೀಜಿ, ವಾಲಿಯ ಶಕ್ತಿಗೆ ಆತನ ನಿತ್ಯಾನುಷ್ಠಾನ, ಸಂಧ್ಯಾವಂದನೆಯೇ ಕಾರಣ. ಕಾಲು ಕೆದರಿ ಜಗಳಕ್ಕೆ ಬರುತ್ತಿದ್ದ ರಾವಣನನ್ನು ಕಂಕುಳಲ್ಲಿ ಎತ್ತಿಕೊಂಡು ನಾಲ್ಕು ಸಮುದ್ರ ಹಾರಿ, ಸಮುದ್ರದಲ್ಲಿ ಮುಳುಗಿ ಸತಾಯಿಸಿದ ಪ್ರಸಂಗ ತಿಳಿಸಿದರು.
ರಾವಣ ಸಖ್ಯದಿಂದ ಹಾಳಾದ್ರು: ಪುರಾಣದಲ್ಲಿ ರಾವಣನ ಸಖ್ಯ ಮಾಡಿಕೊಂಡವರೆಲ್ಲಾ ಹಾಳಾದರು ಮಾತ್ರವಲ್ಲ, ದುಷ್ಟರಾಗಿ ಬದಲಾದರು. ವಾಲಿಯೂ ಇದಕ್ಕೆ ಹೊರತಲ್ಲ. ಅಗ್ನಿಸಾಕ್ಷಿಯಾಗಿ ರಾವಣನೊಂದಿಗಿನ ವಾಲಿಯ ಸ್ನೇಹ ಹನುಮಂತನಿಗೆ ಪಥ್ಯವಾಗಲಿಲ್ಲ. ಮುಂದೆ, ರಾಮ ಕೈಬಿಟ್ಟ ಕಾರಣದಿಂದಲೇ ಉಕ್ಕಿನಂತಹ ವಾಲಿ ಬದುಕಿನಲ್ಲಿ ಮುಳುಗಿದ ಎಂದು ವಿವರಿಸಿದರು.
ನೆರಳು ಬೆಳಕಿನ ಆಟದಲ್ಲಿ ಹನುಮಂತನ ಚೇಷ್ಟೆ ಮತ್ತು ಋಷಿಗಳು ಹನುಮಂತನಿಗೆ ಶಾಪ ನೀಡಿದ ದೃಶ್ಯ ಪ್ರದರ್ಶಿಸಲಾಯಿತು. ನೀರ್ನಳ್ಳಿ ಗಣಪತಿ ಅವರ ಕುಂಚದಲ್ಲಿ ಅರಳುತ್ತಿದ್ದ ಚಿತ್ತಾರಗಳು ವೀಕ್ಷಕರ ಮನಸೆಳೆದವು.
ಬಳಿಕ 'ದುಂದುಭಿ ದಾನವ'ನ ಕುರಿತು ರೂಪಕ ಪ್ರಸ್ತುತ ಪಡಿಸಲಾಯಿತು.
 ಪ್ರಸಿದ್ಧ ಗಾಯಕ ಶಶಿಧರ ಕೋಟೆ ಅವರು 'ಕಂಕುಳಲ್ಲಿ 10 ತಲೆ, ಸಿಕ್ಕಿಬಿದ್ದ ಸೊಕುತಲೆ' ಮತ್ತಿತರ ಹಾಡುಗಳಿಂದ ಗಮನ ಸೆಳೆದರು.
ಡಾ. ರಾಧಾಕೃಷ್ಣ ಕೆದುಂಬಾಡಿ ಭಿಕ್ಷಾಸೇವೆ ನೆರವೇರಿಸಿದರು.
ಸಮಿತಿ ಪರವಾಗಿ ಕೋಶಾಧ್ಯಕ್ಷ ಬಂಗಾರಡ್ಕ ಜನಾರ್ದನ ಭಟ್ ದಂಪತಿ, ಸಹಪ್ರಾಯೋಜಕತ್ವ ವಹಿಸಿದ್ದ ಕಜೆಹತ್ತಿಲು ಗೋವಿಂದ ಭಟ್ ವಿಟ್ಲ ದಂಪತಿ ಇದ್ದರು. ವಿದ್ವಾನ್ ಜಗದೀಶ ಶರ್ಮ ಪ್ರಾಸ್ತಾವಿಕ ಮಾತನಾಡಿದರು.
ಮೂಸುಂಬಿ ಸಮರ್ಪಣೆ: ಇದರೊಂದಿಗೆ, ಪೆರಾಜೆ ಮಠದಲ್ಲಿ ಹನುಮನ ಗುಡಿಯಲ್ಲಿ ಮಂಗಳವಾರ ಸುಮಾರು 1500 ಮೂಸುಂಬಿಗಳನ್ನು ಸಮರ್ಪಿಸಲಾಗಿದೆ.
ಬುಧವಾರ ನಾನಾ ಬಗೆಯ ತರಕಾರಿಗಳ ಕಣಜ ಸಮರ್ಪಿಸಿ, ಹನುಮನನ್ನು ಆರಾಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.