ಟಿಪ್ಪು ವಿವಿ-ಸಂಸತ್ ಅಂತಿಮ ತೀರ್ಮಾನ: ಖಮರುಲ್
ಮಂಗಳೂರು: ಕೇಂದ್ರ ಪ್ರಸ್ತಾವಿತ ಟಿಪ್ಪು ವಿಶ್ವವಿದ್ಯಾಲಯಕ್ಕೆ ಶ್ರೀರಂಗಪಟ್ಟಣ ಮತ್ತು ಮುಳಬಾಗಿಲಿನಲ್ಲಿ ಜಾಗ ಗುರುತಿಸಲಾಗಿದೆ. ಇದರಲ್ಲಿ ಯಾವ ಜಾಗ ಆಯ್ಕೆ ಮಾಡಬೇಕು ಎಂಬ ನಿರ್ಧಾರ ಕೇಂದ್ರಕ್ಕೆ ಸೇರಿದೆ, ಮುಂದಿನ ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
ಭಾನುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕೆ ಹೋರಾಡಿದ ಟಿಪ್ಪು ಗೌರವಾರ್ಥ ಅವರ ಹೆಸರಲ್ಲೇ ವಿವಿ ಸ್ಥಾಪಿಸಬೇಕು ಎನ್ನುವುದು ಜನರ ಬೇಡಿಕೆ. ಆದರೆ ವಿವಾದ ಹಿನ್ನಲೆಯಲ್ಲಿ ಅದನ್ನು ಕೇಂದ್ರೀಯ ವಿವಿ ಆಗಿ ಪರಿವರ್ತಿಸಿದರೂ ತೊಂದರೆಯಾಗದು. ಯಾಕೆಂದರೆ ಅಲ್ಪಸಂಖ್ಯಾತರಿಗೆ ಶೇ.50 ಸೀಟು ಮೀಸಲು ಇದ್ದು, ಉಳಿದಂತೆ ಎಲ್ಲ ಸಮುದಾಯದ ಪ್ರವೇಶಕ್ಕೆ ವಿ.ವಿ. ಮುಕ್ತವಾಗಿದೆ ಎಂದರು.
ಹಜ್‌ಘರ್ ವಿವಿಧೋದ್ದೇಶಕ್ಕೆ: ರಾಜ್ಯದ ಗುಲ್ಬರ್ಗ, ಹುಬ್ಬಳ್ಳಿ ಹಾಗೂ ಮಂಗಳೂರಲ್ಲಿ ಹಜ್‌ಘರ್ ಸ್ಥಾಪನೆಯಾಗಲಿದ್ದು, ಇದರಿಂದ ಹಜ್ ಯಾತ್ರೆಗೆ ಗೋವಾ, ಹೈದರಾಬಾದ್ ಮೂಲಕ ಸುತ್ತುಬಳಸಿ ಹೋಗಬೇಕಾದ ತಾಪತ್ರಯ ಕೊನೆಗೊಳ್ಳಲಿದೆ. ಮಂಗಳೂರಿನ ಕೆಂಜಾರು ಅಥವಾ ತೋಕೂರಲ್ಲಿ ಹಜ್‌ಘರ್‌ಗೆ ನಿವೇಶನ ಗುರುತಿಸಲಾಗಿದೆ. ಬೆಂಗಳೂರಲ್ಲಿ ಹಜ್‌ಘರ್ ನಿರ್ಮಾಣವಾಗುತ್ತಿದೆ. ಹಜ್ ಯಾತ್ರೆಯ ಒಂದು ತಿಂಗಳು ಹೊರತುಪಡಿಸಿ ಉಳಿದ 11 ತಿಂಗಳು ಹಜ್‌ಘರ್‌ಗಳನ್ನು ವಿವಿಧೋದ್ದೇಶಕ್ಕೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಹಜ್‌ಘರ್ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ತಲೆಎತ್ತಲಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ. ಈ ಮೂಲಕ ಆದಾಯ ಗಳಿಸಲಾಗುವುದು ಎಂದರು.
ಮೀಸಲಾತಿ ಶೀಘ್ರ: ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ಮೀಸಲಾತಿ ನಿಗದಿಪಡಿಸಲಾಗುವುದು. ಕುಡಿಯುವ ನೀರಿಗೆ ರು. 40 ಕೋಟಿ ಬಿಡುಗಡೆಗೊಳಿಸಿದ್ದು, ರು. 18.72 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪುರಸಭೆಗಳಿಗೆ ರು. 58.72 ಕೋಟಿ ಮಂಜೂರು ಮಾಡಲಾಗಿದೆ ಎಂದರು.
ವರದಿಗೆ ಬೆಲೆ ಇಲ್ಲ: ಹಿಂದೆ ಅಲ್ಪಸಂಖ್ಯಾತ ಅಭಿವೃದ್ಧಿ ಆಯೋಗ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸರ್ಕಾರಕ್ಕೆ ಸಲ್ಲಿಸಿದ ವಕ್ಫ್ ಆಸ್ತಿ ಒತ್ತುವರಿ ವರದಿ ಈಗ ಬಿದ್ದುಹೋಗಿದೆ. ಆ ವರದಿಗೆ ಕಿಮ್ಮತ್ತಿಲ್ಲ ಎಂದ ಅವರು, ಮತ್ತೆ ಈ ಸರ್ಕಾರ ವರದಿ ಸಿದ್ಧಪಡಿಸುವ ಸಾಧ್ಯತೆ ನಿರಾಕರಿಸಿದರು. ಅಲ್ಲದೆ ಪ್ರಕರಣ ಲೋಕಾಯುಕ್ತ ತನಿಖೆಯಲ್ಲಿದೆ ಎಂದರು. ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ರಿಯಾಜ್‌ಖಾನ್, ದ.ಕ.ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ, ಸದಸ್ಯರಾದ ಯೇನೆಪೋಯ ಮಹಮ್ಮದ್ ಕುಂಞ, ಟಿ.ಎಂ.ಶಹೀದ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

